Advertisement

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

02:00 AM Jul 07, 2022 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಲವೆಡೆ ಮರ, ವಿದ್ಯುತ್‌ ಕಂಬಗಳು ಬೀಳುತ್ತಿವೆ. ಅಲ್ಲಲ್ಲಿ ಬರೆ ಕುಸಿತ ಘಟನೆಗಳು ಮುಂದುವರಿದಿವೆ.

Advertisement

ಕಂದಾಯ ಸಚಿವ ಆರ್‌. ಅಶೋಕ್‌ ಅವರು ಬುಧವಾರ ಸಂಜೆ ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮ ಪ್ರದೇಶ ಕೂಡಿಗೆ ಮತ್ತು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಹಾನಿ ಕುರಿತು ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಅವರೊಂದಿಗೆ ಚರ್ಚಿಸಿದರು. ಪರಿಹಾರೋಪಾಯಗಳ ಬಗ್ಗೆ ಜು. 7ರಂದು ಸಚಿವರು ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಮಳೆಹಾನಿ: ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದ ಸುಶೀಲಾ ಅವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ. ಗರ್ವಾಲೆ- ಶಿರಂಗಳ್ಳಿ ರಸ್ತೆಯಲ್ಲಿ ಇನೊವಾ ವಾಹನದ ಮೇಲೆ ಮರ ಬಿದ್ದು ಹಾನಿಯಾಗಿದೆ.
ಮಡಿಕೇರಿ-ಮಂಗಳೂರು ಹೆದ್ದಾರಿಯ ಮದೆನಾಡು ಸಮೀಪ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದು, ಮಣ್ಣನ್ನು ತೆರವುಗೊಳಿಸಲಾಗಿದೆ.

ಸಿದ್ದಾಪುರ ವಿಭಾಗದಲ್ಲಿ 33 ಕೆವಿ ವಿದ್ಯುತ್‌ ತಂತಿಯ ಮೇಲೆ ಮರಬಿದ್ದಿದೆ. ಗರ್ವಾಲೆ ಮತ್ತು ಸೂರ್ಲಬ್ಬಿ ನಡುವೆ ಗಾಳಿ ಮಳೆಯಿಂದ ನಾಲ್ಕು ವಿದ್ಯುತ್‌ ಕಂಬಗಳು ಧರೆಗುರುಳಿವೆ. ನಾಪೋಕ್ಲು ಬಳಿಯ ಕೊಳಕೇರಿಯಲ್ಲಿ ಎರಡು ವಿದ್ಯುತ್‌ ಕಂಬಗಳು ಬಿದ್ದಿವೆ.

ಕಾವೇರಿ ನೀರು ಏರಿಕೆ: ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗು ತ್ತಿರುವುದರಿಂದ ಕರಡಿಗೋಡು ಮತ್ತು ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿದ್ದಾಪುರದ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಪೈಸಾರಿಯ ಸಂಪರ್ಕ ರಸ್ತೆಯು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಜನರಿಗೆ ಸಂಚರಿಸಲು ತೆಪ್ಪದ ವ್ಯವಸ್ಥೆ ಮಾಡಲಾಗಿದೆ.

Advertisement

ಮಡಿಕೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯ ಹೆಚ್ಚುವರಿ ಹಲಗೆಗಳನ್ನು ತೆರವುಗೊಳಿಸದೆ ಇರುವುದರಿಂದ ಸುತ್ತಮುತ್ತಲ ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ. ಧಾರಾಕಾರ ಮಳೆಯಿಂದ ರಸ್ತೆ ಮತ್ತು ಗದ್ದೆಗಳು ಮುಳುಗಡೆಯಾಗಿದ್ದು, ಗಾಳಿಬೀಡು ಗ್ರಾಮದ ಮನೆಗಳು ಅಪಾಯನ್ನು ಎದುರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next