Advertisement

ಹಾರನಹಳ್ಳಿಯಲ್ಲಿ ಅರಳಿದ ಹೊಯ್ಸಳ ಶಿಲ್ಪಕಲೆ !

11:24 AM Jul 15, 2017 | |

ಏಳು ನೂರು ವರ್ಷಗಳ ಇತಿಹಾಸವಿರುವ ಹಾರನಹಳ್ಳಿ ಯ ಎರೆಡು ದೇವಾಲಯಗಳು ಹೊಯ್ಸಳ ಶೈಲಿಯ ಶಿಲ್ಪಕಲಾ ಸೊಬಗಿನಿಂದ ಅರಳಿವೆ.  ವಿಶ್ವ ವಿಖ್ಯಾತ ಹಳೆಬೀಡಿಗೆ ಹತ್ತಿರದಲ್ಲಿಯೇ ಇರುವ ಹಾರನಹಳ್ಳಿ ಅದೇಕೋ ಏನೋ ಇನ್ನೂ ಪ್ರವಾಸಿಗರಿಂದ ಅಪರಿಚಿತವಾಗಿಯೇ ಉಳಿದಿದೆ.

Advertisement

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಯಲ್ಲಿರುವ ಕೇಶವ ಮತ್ತು ಸೋಮೇಶ್ವರ ದೇವಾಲಯಗಳನ್ನು ಕ್ರಿ. ಶ. 1234 ರಲ್ಲಿ ಹೊಯ್ಸಳರ ಪೆದ್ದಣ್ಣ ಹೆಗ್ಗಡೆ, ಸೋಮಣ್ಣ ಮತ್ತು ಕೇಶವಣ್ಣ ಎಂಬ ಮೂವರು ಸೋದರರು ನಿರ್ಮಿಸಿದರೆಂಬ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಈ ಗ್ರಾಮವನ್ನು ‘ ಹಿರಿಯ ಸೋಮನಾಥಪುರ ‘ ವೆಂದು ಕರೆಯಲಾಗುತ್ತಿತೆಂಬ ಐತಿಹ್ಯವಿದೆ.

ಕೇಶವ ದೇವಾಲಯ 
ಇಲ್ಲಿನ ಚನ್ನಕೇಶವ ದೇವಾಲಯವು ಆಕರ್ಷಕವಾಗಿದ್ದು, ನೋಡುಗರ ಮನಸೂರೆಗೊಳ್ಳುತ್ತದೆ. ನಕ್ಷತ್ರಾಕಾರದ ನಾಲ್ಕು ಅಡಿ ಎತ್ತರದ ಜಗಲಿಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯದ ಹೊರ ಭಾಗದ ಪಟ್ಟಿಕೆಗಳ ಮೇಲೆ ಆನೆ, ಕುದುರೆ, ಮಕರ ಮತ್ತು ಹಂಸ ಬಳ್ಳಿಗಳ ಸಾಲುಗಳನ್ನು ಕಲ್ಲಿನಲ್ಲಿ ಕೆತ್ತಿ ಬಿಡಿಸಲಾಗಿದೆ.

ಇನ್ನು ಹೊರಗೋಡೆಯ ಸುತ್ತಾ ಮಹಾಭಾರತದ ದೃಶ್ಯಗಳನ್ನು ಕೆತ್ತಲಾಗಿದೆ. ನರಸಿಂಹನ ಅವತಾರಗಳ ಮೂರ್ತಿಗಳು ಮತ್ತು ಹಲವು ಶಿಲಾ ಬಾಲಕಿಯರು ಕಲ್ಲಿನಲ್ಲಿ ಸುಂದರವಾಗಿ ಅರಳಿ ನಿಂತಿ¨ªಾರೆ.

ಮೂರು ಗರ್ಭಗುಡಿಗಳನ್ನು ಹೊಂದಿರುವ ಈ ದೇಗುಲದಲ್ಲಿ ಚನ್ನಕೇಶವ, ನರಸಿಂಹ ಮತ್ತು ವೇಣುಗೋಪಾಲ ಮೂರ್ತಿಗಳು ನಮ್ಮನ್ನು ಸೆಳೆಯುತ್ತವೆ. ನವರಂಗದ ಕಂಬಗಳು ಕುಸುರಿ ಕೆತ್ತನೆಗಳನ್ನು ಒಳಗೊಂಡಿವೆ.

Advertisement

ಸೋಮೇಶ್ವರ ದೇವಾಲಯ 
ಈ ಗ್ರಾಮದ ಮತ್ತೂಂದು ಸೋಮೇಶ್ವರ ದೇವಾಲಯವೂ ಸಹ ಸುಂದರವಾದ ಶಿಲ್ಪಕಲಾ ಸೌಂದರ್ಯವನ್ನು ಹೊಂದಿದೆ. ಕೆತ್ತನೆಯಿಂದ ಚನ್ನಕೇಶವನ ದೇಗುಲವನ್ನೇ ಹೋಲುತ್ತದೆ. ಆದರೆ ಇದು ಒಂದು ಗರ್ಭಗುಡಿಯೊಂದಿಗೆ ಮೂರು ಪ್ರವೇಶ ದ್ವಾರಗಳನ್ನು ಹೊಂದಿರುವುದು ಇಲ್ಲಿನ ವಿಶೇಷ.

ನಾಲ್ಕು ಅಡಿ ನಕ್ಷತ್ರಾಕಾರದ ಜಗುಲಿ ಮೇಲೆ ಇರುವ ಈ ದೇಗುಲವೂ ತನ್ನ ಹೊರಗೋಡೆಗಳ ಮೇಲೆ ರಾಮಾಯಣ ಮತ್ತು ಭಾಗವತದ ಕೆತ್ತನೆಗಳನ್ನು ಹೊಂದಿದೆ. ಪಟ್ಟಿಕೆಗಳಲ್ಲಿ ಕುದುರೆ ಸವಾರರು ಮತ್ತು ಹಂಸಗಳ ಸಾಲುಗಳ ಕೆತ್ತನೆಯಿದೆ.

 ಇಲ್ಲಿ ನಾವು ಸುಮಾರು 81 ಮೂರ್ತಿಗಳ ಪ್ರತಿಮೆಗಳನ್ನು ಕಾಣಬಹುದು. ದೇವಾಲಯದ ಗರ್ಭಗುಡಿಯಲ್ಲಿ  ಸೋಮೇಶ್ವರ ಮತ್ತು ನಂದಿಯ ವಿಗ್ರಹಗಳು ಇದ್ದು, ಸುಂದರ ಕೆತ್ತನೆಯಿಂದ ಕೂಡಿವೆ.

ದಾರಿ ಹೇಗೆ ?
ಹಾಸನದಿಂದ ಉತ್ತರಕ್ಕೆ 35 ಕಿ. ಮೀ. ದೂರದಲ್ಲಿರುವ ಹಾರನಹಳ್ಳಿ ತಾಲ್ಲೂಕು ಕೇಂದ್ರ ಅರಸೀಕೆರೆಯಿಂದ ಕೇವಲ 8 ಕಿ. ಮೀ . ಅಂತರದಲ್ಲಿದೆ. ಬೆಂಗಳೂರಿನಿಂದ ಇದು ಸುಮಾರು 176 ಕಿ. ಮೀ. ದೂರದಲ್ಲಿದೆ.

– ದಂಡಿನಶಿವರ ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next