Advertisement

ಸರಕಾರಿ ಶಾಲೆಯಲ್ಲಿ ಹಂಚಿಕೊಳ್ಳುವ ಶಿಕ್ಷಣ: ಡಾ|ಕುಮಾರ ಸ್ವಾಮಿ

04:34 PM May 30, 2018 | |

ನಗರ : ಸಮಾಜದಲ್ಲಿ ಹೇಗಾದರೂ ಬದುಕುವ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಾದ ಅಗತ್ಯ ಇಂದು ಎದುರಾಗಿದೆ. ಹಂಚಿಕೊಳ್ಳುವ ಶಿಕ್ಷಣದಿಂದ ಮಾತ್ರ ಇದು ಸಾಧ್ಯ. ಸರಕಾರಿ ಶಾಲೆಗಳಲ್ಲಿ ಹಂಚಿಕೊಳ್ಳುವ ಶಿಕ್ಷಣ ಲಭಿಸುತ್ತದೆ ಎಂದು ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಕುಮಾರಸ್ವಾಮಿ ಎಚ್‌. ಹೇಳಿದರು.

Advertisement

ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ನಿರೀಕ್ಷಿಸುವುದನ್ನು ಮಗು ಮಾಡಬೇಕು ಎನ್ನುವುದು ಎಲ್ಲ ಹೆತ್ತವರ ಬಯಕೆ. ಮಕ್ಕಳಿಗೆ ಏನೂ ಗೊತ್ತಾಗುವುದಿಲ್ಲ, ಅವರ ಅಗತ್ಯಗಳನ್ನು ನಾವೇ ಪೂರೈಸಬೇಕು ಎಂದು ತಿಳಿದುಕೊಳ್ಳುತ್ತಾರೆ. ಮಗುವಿನ ವ್ಯಕ್ತಿತ್ವ, ಒಲವುಗಳನ್ನು ಗಣನೆಗೆ ತೆಗೆದು ಕೊಳ್ಳದೇ ದೊಡ್ಡವರು ಮಗುವಿನ ಕುರಿತಾದ ನಿರ್ಧಾರ ಕೈಗೊಳ್ಳುವುದು, ನಾವೇ ಖುದ್ದಾಗಿ ಮಕ್ಕಳನ್ನು ಸೋಲಿಸುವ ಒಂದು ಹಂತ. ಮಕ್ಕಳ ಬಾಲ್ಯವನ್ನು ಕಿತ್ತುಕೊಂಡು, ಉತ್ತಮ ಭವಿಷ್ಯ ಸಿಗಬೇಕು ಎಂದು ಭಾವಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಸರಕಾರಿ ಶಾಲೆಗಳಲ್ಲಿ ಪ್ರಶ್ನಿಸುವ ಅಧಿಕಾರವಿದೆ, ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸಬಹುದು. ಹೆತ್ತವರ ಗೊಂದಲ ಪರಿಹಾರಕ್ಕೆ ಎಸ್‌ಡಿಎಂಸಿ ತಂಡವೇ ಇದೆ. ಚರ್ಚಿಸುತ್ತಾ, ಪ್ರಶ್ನಿಸುತ್ತಾ ಬೆಳೆಯುವುದು ಬದುಕಿನ ಲಕ್ಷಣ. ಇಲ್ಲಿ ಯಾರೂ ಪರಿಪೂರ್ಣವೂ ಅಲ್ಲ. ಯಾರೂ ಸೊನ್ನೆಯೂ ಅಲ್ಲ. ಸೊನ್ನೆ ಹಾಗೂ ಪೂರ್ಣತ್ವದ ನಡುವೆ ಪ್ರಶ್ನಿಸುತ್ತಾ, ಚರ್ಚಿಸುತ್ತಾ ಸಾಗುತ್ತಿರುತ್ತೇವೆ. ಇದುವೇ ಜೀವನ. ಇಂತಹ ಪ್ರಶ್ನಿಸುವ, ಚರ್ಚಿಸುವ ವಿಷಯವನ್ನು ಸರಕಾರಿ ಶಾಲೆಗಳು ಹೇಳಿಕೊಡುತ್ತವೆ ಎಂದರು.

ಅಭಿನಂದನೆ
ಸರಕಾರಿ ಶಾಲೆಗಳಲ್ಲಿ ಎಲ್ಲರೂ ತರಬೇತಿ ಪಡೆದ ಶಿಕ್ಷಕರೇ ಇರುತ್ತಾರೆ. ಕಾಲಕಾಲಕ್ಕೆ ಅವರಿಗೆ ಪುನಶ್ಚೇತನ ತರಬೇತಿಯೂ ನಡೆಯುತ್ತವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೆಲಸಗಳಲ್ಲಿ ಆಯಾ ಶಾಲೆಯ ಶಿಕ್ಷಕರು ತೊಡಗಿಸಿಕೊಳ್ಳುತ್ತಾರೆ. ಬಿಸಿಯೂಟದಂತಹ ಪ್ರೀತಿ ಹಂಚುವ ಕಾರ್ಯಕ್ರಮ ಇನ್ನೊಂದಿಲ್ಲ. ಇದೇ ನಿಜ ವಾದ ಶಿಕ್ಷಣ. ಇದನ್ನು ಅರ್ಥ ಮಾಡಿ ಕೊಂಡು, ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದ ಎಲ್ಲ ಹೆತ್ತವರಿಗೆ ಅಭಿನಂದನೆಗೆ ಅರ್ಹರು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌, ಹಾರಾಡಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ಪುಣಚ, ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಮಾ ಶುಭಹಾರೈಸಿದರು. ವಿದ್ಯಾರ್ಥಿ ಗಳು ಪ್ರಾರ್ಥಿಸಿದರು. ಹಾರಾಡಿ ಶಾಲಾ ಮುಖ್ಯಶಿಕ್ಷಕ ಮುದರ ಸ್ವಾಗತಿಸಿ, ಪ್ರೌಢ ಶಾಲಾ ಸಹಶಿಕ್ಷಕಿ ಪ್ರಿಯಾ ಕುಮಾರಿ ವಂದಿಸಿದರು. ಶಿಕ್ಷಕ ಪ್ರಶಾಂತ್‌ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಸತ್ತಾತ್ಮಕತೆ ಅದ್ಭುತ 
ಇಂದಿನ ಮಗುವಿನ ದಿನಚರಿ ಗಮನಿಸಿದರೆ ಆಶ್ಚರ್ಯ ಆಗುತ್ತದೆ. ಬೆಳಗ್ಗೆ ಎದ್ದ ತತ್‌ಕ್ಷಣದಿಂದ ರಾತ್ರಿವರೆಗೆ ಬಿಡುವಿಲ್ಲದ ದಿನಚರಿ. ತಂದೆ- ತಾಯಿ ಇಂತಹ ವಾತಾವರಣ ಸೃಷ್ಟಿಸುತ್ತಾರೆ. ಮುಂದೆ ತಾನು ಹೇಳಿದಂತೆ ದೊಡ್ಡ ಎಂಜಿನಿಯರ್‌, ಡಾಕ್ಟರ್‌ ಆಗಬೇಕೆಂಬ ಮಹದಾಸೆ. ಹೀಗೆ ಕಲಿತು, ವಿದೇಶದಲ್ಲಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಕಲಿತ ಮಕ್ಕಳಿಗೆ ಹೆತ್ತವರು ಬೇಡವಾಗುತ್ತಾರೆ. ವಿದೇಶಕ್ಕೆ ಹೋಗಿ ಹೆತ್ತವರಿಂದ ದೂರವೇ ಆಗಿ ಬಿಡುತ್ತಾರೆ. ಈ ನಿಟ್ಟಿನಲ್ಲಿ ಆಲೋಚಿಸಿದಾಗ ಸರಕಾರಿ ಶಾಲೆಯ ಪ್ರಜಾಸತ್ತಾತ್ಮಕತೆ ಅದ್ಭುತ ಎಂದು ಕುಮಾರಸ್ವಾಮಿ ಬಣ್ಣಿಸಿದರು.

ಮೆರವಣಿಗೆ
ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಶಾಲೆಯಿಂದ ಹೊರಟ ಮೆರವಣಿಗೆ, ಮುಖ್ಯರಸ್ತೆಯಾಗಿ ಕೊಟೇಚಾ
ಹಾಲ್‌ ಸಮೀಪದ ರಸ್ತೆಯಲ್ಲಿ ತೆರಳಿ ಹೆದ್ದಾರಿಗೆ ಸಾಗಿತು. ಬಳಿಕ ಶಾಲೆಗೆ ಹಿಂದಿರುಗಲಾಯಿತು. ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next