ಹೂವಿನಹಡಗಲಿ: ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಹ್ಯಾರಡ ಗ್ರಾಪಂ ಮುಂಚೂಣಿಯಲ್ಲಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಿರುದ್ಯೋಗ ಸಮಸ್ಯೆ ತೊಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ನರೇಗಾ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ್ದಕ್ಕೆ ಹ್ಯಾರಡ ಗ್ರಾಪಂ ಪಿಡಿಒ ಹಾಗೂ ಕೃಷಿ ನಿರ್ದೇಶಕರಿಗೆ ಪ್ರಶಸ್ತಿ ನೀಡಲಾಗಿದೆ.
2019- 20ನೇ ಸಾಲಿನಲ್ಲಿ ಗ್ರಾಮದ 962 ಕುಟುಂಬಗಳು ನರೇಗಾ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ನೋಂದಣಿ ಮಾಡಿಸಿವೆ. ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಈ ಪ್ರದೇಶದಲ್ಲಿ ನರೇಗಾ ಯೋಜನೆ ಕಾರ್ಮಿಕರಿಗೆ ಆಸರೆಯಾಗಿದೆ. ನರೇಗಾ ಕಾಮಗಾರಿಯಲ್ಲಿ 2,103 ಜನ ಕೂಲಿ ಕಾರ್ಮಿಕರಿದ್ದು, ಅದರಲ್ಲಿ 1,968 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 734 ಕುಟುಂಬಗಳಿಗೆ ಕೆಲಸ ಕೊಟ್ಟಿದ್ದರಿಂದ ಈ ಭಾಗದಲ್ಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ.
ಗ್ರಾಮ ಪಂಚಾಯಿತಿ 13,504 ಮಾನವ ದಿನಗಳ ಗುರಿಯನ್ನು ಹೊಂದಿತ್ತು. ಆದರೆ ನಿರೀಕ್ಷೆಗೂ ಮೀರಿ 18,885 ಮಾನವ ದಿನಗಳನ್ನು ಪೂರೈಸಿದೆ. ಗ್ರಾಮದ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ದನದ ಕೊಟ್ಟಿಗೆ, ಕೃಷಿ ಹೊಂಡ, ಕೆರೆಯನ್ನು ಹೂಳೆತ್ತುವ ಕಾರ್ಯವನ್ನು ನರೇಗಾ ಯೋಜನೆಯಲ್ಲಿ ಮಾಡುತ್ತಿದ್ದಾರೆ.
ಈ ಮೊದಲು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಜೀವನ ನಿರ್ವಹಣೆಗಾಗಿ ದೂರದ ಮಂಗಳೂರು, ಕಾಫಿ ತೋಟಕ್ಕೆ ಗುಳೆ ಹೋಗುತ್ತಿದ್ದರು. ಪ್ರಸ್ತುತ ನರೇಗಾ ಯೋಜನೆಯಲ್ಲಿ ಎಲ್ಲ ಕೂಲಿ ಕಾರ್ಮಿಕರಿಗೆ ಕೆಲಸ ದೊರಕುತ್ತಿರುವುದರಿಂದ ಜನತೆ ಗುಳೆ ಹೋಗುವುದು ತಪ್ಪಿದಂತಾಗಿದೆ.
ಇನ್ನೂ ತಾಲೂಕಿನ ಸೋಗಿ ಗ್ರಾಪಂ ನರೇಗಾ ಕಾಮಗಾರಿಯನ್ನು ಸಮರ್ಪಕ ಅನುಷ್ಠಾನ ಮಾಡಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 2019, 20ನೇ ಸಾಲಿನ ನರೇಗಾ ಯೋಜನೆಯಡಿ ಮೇ 7, 2019ರ ವರೆಗಿನ ಎಂಐಎಸ್‌ನಲ್ಲಿ ಸಾಧಿಸಿದ ಪ್ರಗತಿಯನ್ನಾಧರಿಸಿ ಪ್ರಶಸ್ತಿ ನೀಡಿ ಅಧಿಕಾರಿಗಳಿಗೆ ಉತ್ತೇಜನ ನೀಡಲಾಗುತ್ತದೆ.
•ವಿಶ್ವನಾಥ ಹಳ್ಳಿಗುಡಿ