ನವದೆಹಲಿ: ಈ ವರ್ಷದ ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಹರ್ ಘರ್ ತಿರಂಗಾ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 30 ಕೋಟಿಗೂ ಅಧಿಕ ರಾಷ್ಟ್ರ ಧ್ವಜ ಮಾರಾಟವಾಗುವ ಮೂಲಕ 500 ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಇದನ್ನೂ ಓದಿ:ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೇಲ್ ವಾಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕಳೆದ 15 ದಿನಗಳಲ್ಲಿ ಹಲವಾರು ಉದ್ಯಮಿಗಳು ಮತ್ತು ಸಮಾಜದ ಎಲ್ಲಾ ಸ್ತರದ ಜನರ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರವ್ಯಾಪಿ ಸುಮಾರು 3,000ಕ್ಕೂ ಅಧಿಕ ತಿರಂಗಾ ಕಾರ್ಯಕ್ರಮಗಳು ನಡೆದಿದ್ದವು ಎಂದು ತಿಳಿಸಿದರು.
“ಹರ್ ಘರ್ ತಿರಂಗಾ” ಕರೆಯನ್ನು ಜನರು ಸ್ವೀಕರಿಸುವ ಮೂಲಕ ಸುಮಾರು 20 ದಿನಗಳಲ್ಲಿ ದಾಖಲೆಯ 30 ಕೋಟಿಗೂ ಅಧಿಕ ತ್ರಿವರ್ಣ ಧ್ವಜ ಮಾರಾಟವಾಗಿತ್ತು. ತಿರಂಗಾ ಕಾರ್ಯಕ್ರಮದ ಅಂಗವಾಗಿ ಬೃಹತ್ ರಾಲಿ, ಮೆರವಣಿಗೆ, ಪಂಜಿನ ಮೆರವಣಿಗೆ, ತಿರಂಗಾ ಗೌರವ್ ಯಾತ್ರಾ ಹಾಗೂ ವಿವಿಧ ಚಟುವಟಿಕೆಗಳು ನಡೆದಿದ್ದವು ಎಂದು ವಿವರಿಸಿದರು.
ಪಾಲಿಸ್ಟರ್ ಮತ್ತು ಯಂತ್ರಗಳಿಂದ ರಾಷ್ಟ್ರಧ್ವಜ ತಯಾರಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ಧ್ವಜ ಸಂಹಿತೆ ಮಾರ್ಪಾಡು ಮಾಡಿರುವುದು ಉತ್ಪಾದನೆಗೆ ಸಹಕಾರಿಯಾಗಿದೆ ಎಂದು ಸಿಎಐಟಿ ತಿಳಿಸಿದೆ. ಈ ಮೊದಲು ಭಾರತದಲ್ಲಿ ಖಾದಿ ಅಥವಾ ಹತ್ತಿಯ ತ್ರಿವರ್ಣ ಧ್ವಜವನ್ನು ಮಾತ್ರ ಬಳಸಲಾಗುತ್ತಿತ್ತು. ಧ್ವಜ ಸಂಹಿತೆಗೆ ತಿದ್ದುಪಡಿ ತಂದ ಪರಿಣಾಮ ದೇಶಾದ್ಯಂತ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕಿದಂತಾಗಿದೆ ಎಂದು ಸಿಎಐಟಿ ತಿಳಿಸಿದೆ.