ಅಫಜಲಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್‌ಘರ್ ತಿರಂಗಾ ಅಭಿಯಾನ ಶುರು ಮಾಡಿದ್ದು ಆ. 13ರಂದು ದೇವಲ ಗಾಣಗಾಪುರದಲ್ಲಿ ಪಾದಯಾತ್ರೆ ನಡೆಸುವ ಮೂಲಕ “ಹರ್‌ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಪಟ್ಟಣದ ಮಳೇಂದ್ರ ಮಠದಲ್ಲಿ ಮನೆ ಮನೆಗೆ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲಿ ಭಾರತದಂತ ದೇಶ ಇನ್ನೊಂದಿಲ್ಲ. ಇಂತ ದೇಶದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ಅದರಲ್ಲೂ ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷದ ಬಳಿಕ ಬಲಿಷ್ಠ ನಾಯಕತ್ವದಲ್ಲಿ ದೇಶ ಉನ್ನತಿಯತ್ತ ಸಾಗುತ್ತಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಕ್ಷಕ್ಕೆ, ಸೊನೀಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಜೈಕಾರ ಹಾಕುವಂತೆ ಹೇಳಲಾಗುತ್ತಿತ್ತು. ಆದರೆ ಬಿಜೆಪಿಯಲ್ಲಿ ದೇಶಕ್ಕೆ ಜೈಕಾರ ಹಾಕುವುದನ್ನು ಕಲಿಸುತ್ತಿದ್ದಾರೆ. ಇದೇ ಕಾಂಗ್ರೆಸ್ ಬಿಜೆಪಿ ನಡುವಿನ ವ್ಯತ್ಯಾಸವಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ದೇಶದ ತುಂಬ ಜಾಗ ಕಳೆದುಕೊಂಡಿರುವ ಕಾಂಗ್ರೆಸ್ ಸಿದ್ದರಾಮಯ್ಯನವರಿಂದಾಗಿ ರಾಜ್ಯದಲ್ಲಿ ಸ್ವಲ್ಪ ಉಳಿದಿದೆ. ಆದರೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ. ನಾನು ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗುವುದಿಲ್ಲ ಎಂದಿದ್ದೇನೆ. ಪಕ್ಷದ ವರಿಷ್ಟರು ತಾಲೂಕಿನಲ್ಲಿ ಸರ್ವೇ ನಡೆಸಿದ್ದಾರೆ. ಜನ ಬಯಸಿದರೆ, ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಇಲ್ಲವಾದರೆ ಯಾರಿಗೆ ಟಿಕೇಟ್ ನೀಡುತ್ತಾರೋ, ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
ಹರ್ ಘರ್ ತಿರಂಗಾ ಅಭಿಯಾನವನ್ನು ಬಿಜೆಪಿ ಪಕ್ಷ ಮಾಡಲು ಶುರು ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಜನ ಛೀಮಾರಿ ಹಾಕುತ್ತಾರೆ, ಬಿಜೆಪಿಗೆ ಶ್ರೇಯ ಹೋಗುತ್ತದೆ ಎಂದು ಅರಿತು ತಾನು ಕೂಡ ಧ್ವಜ ವಿತರಣೆ ಮಾಡಿ ನಾವೇ ದೇಶಭಕ್ತಿಯನ್ನು ಜನರಲ್ಲಿ ಮೂಡಿಸುತ್ತಿದ್ದೇವೆ ಎನ್ನುವ ರೀತಿಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಇದು ಅವರ ನೈತಿಕ ದೀವಾಳಿತನ ತೋರಿಸುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ ರದ್ದೇವಾಡಗಿ, ತಾಲೂಕು ಅಧ್ಯಕ್ಷ ಶೈಲೇಶ ಗುಣಾರಿ ಮಾತನಾಡಿ, ಎಲ್ಲರೂ ನಿಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜಗಳನ್ನು ಬಹಳ ಜಾಗರೂಕತೆಯಿಂದ ಹಾರಿಸಿ. ಧ್ವಜಕ್ಕೆ ಅವಮಾನವಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಧ್ವಜಾರೋಹಣ ಮಾಡಿ. ಈ ಸಂದರ್ಭದಲ್ಲಿ ಯಾವುದೇ ಪಕ್ಷದ ಚಿನ್ಹೆಗಳ ಬಳಕೆ ಬೇಡ ಎಂದು ಕರೆ ನೀಡಿದರು.
ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ನಿಂಗದಳ್ಳಿ, ಅಶೋಕ ಬಗಲಿ, ಭೀಮರಾಯ ಕಲಶೆಟ್ಟಿ, ಶಂಕು ಮ್ಯಾಕೇರಿ, ಶ್ರೀಶೈಲ ಬಳೂರ್ಗಿ, ಮಂಜೂರ್ ಅಗರಖೇಡ, ಶಿವು ಪದಕಿ, ಮಳೇಪ್ಪ ಡಾಂಗೆ, ಶಂಕು ಮ್ಯಾಕೇರಿ, ದತ್ತು ದೇವರನಾವದಗಿ, ಧಾನು ಪತಾಟೆ, ಸುನೀಲ್ ಶೇಟ್ಟಿ, ಸುಭಾಷ ರಾಠೊಡ, ಪಾಶಾ ಮಣೂರ, ಸುರೇಖಾ ಪದಕಿ, ಅನು ದೊಡ್ಮನಿ, ಸರಳಾ ದೊಡ್ಮನಿ, ಚಂದಮ್ಮ ಪಾಟೀಲ್ ಮತ್ತಿತರರು ಇದ್ದರು.