ಕಲಬುರಗಿ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಇದೇ ಆಗಸ್ಟ್ 13ರಿಂದ 15ರ ವರೆಗೆ ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಕೈಗೊಂಡಿದ್ದು, ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಡಿ.ಸಿ. ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಡಿಸಿ ಯಶವಂತ ವಿ. ಗುರುಕರ್ ಅವರು, ಆ.4ರಂದು ತಾಲೂಕು ಮಟ್ಟದ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ರಸಪ್ರಶ್ನೆ, ಆ.8ರಂದು ಕಲಬುರಗಿ ನಗರದಲ್ಲಿ ಸೈಕ್ಲೋಥಾನ್, ಆ.9ರಂದು ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ದಿನದ ಮಹತ್ವ ಕುರಿತು ಶಾಲಾ ಮಕ್ಕಳಿಗೆ ರಸಪ್ರಶ್ನೆ, ಆ.10ರಂದು ಶಾಲೆಗಳಲ್ಲಿ ಡ್ರಾಯಿಂಗ್, ಪೇಂಟಿಂಗ್ ಹಾಗೂ ಆ.11ರಿಂದ 13ರ ವರೆಗೆ ಡಾ| ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಾಟಕೋತ್ಸವ ಮತ್ತು ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆಗೆ ನಿರ್ಧರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲೆಂದೆ ಸಾರ್ವಜನಿಕರಿಗೆ ವಿತರಣೆ ಮಾಡಲು ಜಿಲ್ಲೆಗೆ ರಾಜ್ಯ ಸರ್ಕಾರದಿಂದ 76 ಸಾವಿರ ರಾಷ್ಟ್ರಧ್ವಜಗಳು ಪೂರೈಕೆಯಾಗಿದ್ದು, ಇದನ್ನು ತಾಲೂಕುಗಳಿಗೆ ನೀಡಲಾಗುವುದು. ಇದಲ್ಲದೆ ಕಲಬುರಗಿ ಮಹಾನಗರ ಪಾಲಿಕೆ 10 ಸಾವಿರ ರಾಷ್ಟ್ರಧ್ವಜಗಳನ್ನು ನಗರದ ನಿವಾಸಿಗಳಿಗೆ ವಿತರಿಸಲಿದ್ದು, ಜಿಲ್ಲಾ ಪಂಚಾಯತಿಯು ಪ್ರತಿ ಗ್ರಾಮ ಪಂಚಾಯತಿಗೆ 300ರಿಂದ 500ರ ವರೆಗೆ ಒಟ್ಟಾರೆ 1.20 ಲಕ್ಷ ಧ್ವಜಗಳನ್ನು ಪೂರೈಸಲಿದೆ. ಪ್ರತಿ ಧ್ವಜವನ್ನು 22 ರೂ.ಗಳಿಗೆ ನೀಡಲಾಗುತ್ತದೆ. ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಮೆರೆಯಬೇಕು ಎಂದು ಡಿಸಿ ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.
ಎಲ್ಲೇಡೆ ತ್ರಿವರ್ಣ ಧ್ವಜ: ಇದಲ್ಲದೆ ಜಿಲ್ಲೆಯ ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳು, ವಾಣಿಜ್ಯ ಅಂಗಡಿ-ಮುಂಗಟ್ಟುಗಳು, ಕೈಗಾರಿಕೆಗಳು, ವಸತಿ ಸಮುತ್ಛಯ ಕಟ್ಟಡಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಚಿತ್ರಮಂದಿರದೆಲ್ಲಡೆ ಅಭಿಯಾನದ ಅವಧಿಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಡಿ.ಸಿ. ಸೂಚಿಸಿದರು.
ಲಸಿಕಾ ಕ್ಯಾಂಪ್: ಜಿಲ್ಲೆಯಲ್ಲಿ 15-17 ವಯಸ್ಸಿನ 27 ಸಾವಿರ ಜನರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಅಭಿಯಾನದ ಅಂಗವಾಗಿ ಲಸಿಕೆ ಕ್ಯಾಂಪ್ ಆಯೋಜಿಸಿ ಸಂಪೂರ್ಣವಾಗಿ ಲಸಿಕಾಕರಣ ಮುಗಿಸುವಂತೆ ಡಿಎಚ್‌ಒ ಡಾ|ರಾಜಶೇಖರ ಮಾಲಿ ಅವರಿಗೆ ಡಿಸಿ ಯಶವಂತ ವಿ. ಗುರುಕರ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ| ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮುಂತಾದವರಿದ್ದರು.