Advertisement

ಜಗದೊಡೆಯ ಶ್ರೀ ವಿಶ್ವಕರ್ಮ…ಇಂದು ವಿಶ್ವಕರ್ಮ ಪೂಜಾ ಮಹೋತ್ಸವ

02:07 PM Sep 17, 2022 | Team Udayavani |

ವಿಶ್ವಕರ್ಮ ಪುರಾಣ ಪುರಾಣಗಳಲ್ಲೂ ವಿಶ್ವಕರ್ಮನು ಸೃಷ್ಟಿಕರ್ತನು. ವಿಶ್ವಕರ್ಮ ಎಂಬುದು ವೈದಿಕ ದೇವತಾ ಕಲ್ಪದಲ್ಲಿ ಸೃಷ್ಟಿಕರ್ತನಿಗೆ ಇರುವ ಹೆಸರು. ವ್ಯಾಪಕತ್ವದ ವರ್ಣನೆಯಲ್ಲಿ ಒಂದು ಅಂಶವಾಗಿದೆ.

Advertisement

ತಮಿದ್ಗರ್ಭಂ ಪ್ರಥಮಂ ದಧ್ರ ಆಪೋ ಯತ್ರ ದೇವಾಃ ಸಮಗಚ್ಛನ್ತ ವಿಶ್ವೇ|
ಅಜಸ್ಯನಾಭಾ ವಧ್ಯೇಕ ಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ||

ಯಾವ ಗರ್ಭದಲ್ಲಿ ಸಕಲ ದೇವತೆಗಳೂ ಒಟ್ಟಿಗೆ ಸೇರಿಕೊಂಡು ಇರುವರೋ ಅಂತಹ ವಿಶ್ವಕರ್ಮ ರೂಪವಾದ ಗರ್ಭವನ್ನು ಉದಕಗಳು ಸೃಷ್ಟಿಗೆ ಪೂರ್ವದಲ್ಲಿ ಧರಿಸಿದವು. ಯಾವ ಈ ಸುವರ್ಣಾಂಡದಲ್ಲಿ ಸಕಲ ಭೂತಗಳು ಸ್ಥಾಪಿತವಾಗಿವೆಯೋ ಅಂತಹ ಅದ್ವಿತೀಯವಾದ ಈ ಬ್ರಹ್ಮಾಂಡವು ಜನ್ಮರಹಿತವಾದ ವಿಶ್ವಕರ್ಮ ಮೂರ್ತಿ ತತ್ವದ ನಾಭಿಯಲ್ಲಿ ಸ್ಥಾಪಿತವಾಗಿದೆ ಅಥವಾ ಸಕಲ ಜಗದ್ಬಂಧಕವಾದ ಉದಕದಲ್ಲಿ ಅದ್ವಿತೀಯವಾದ ಈ ಬ್ರಹ್ಮಾಂಡವು ಸ್ಥಾಪಿತವಾಗಿದೆ.

ವೇದದಲ್ಲಿ ವಿಶ್ವಕರ್ಮನಿಗೆ ಸೃಷ್ಟಿಕರ್ತನೆಂಬ ಹೆಗ್ಗಳಿಕೆ : ವೇದದಲ್ಲಿ ವಿಶ್ವಕರ್ಮನಿಗೆ ಸೃಷ್ಟಿಕರ್ತನೆಂಬ ಹೆಗ್ಗಳಿಕೆ ಇದ್ದರೂ, ಪೌರಾಣಿಕ ಸೃಷ್ಟಿಕರ್ತನಾದ ಬ್ರಹ್ಮ(?)ನಿಗೆ ಪೂಜೆ ಇಲ್ಲ ಎಂಬ ಮಿಥ್ಯಾ ಪ್ರಚಾರ ಕೆಲವು ಪುರಾಣಗಳಲ್ಲಿ ಇದ್ದರೂ, ಐತಿಹಾಸಿಕವಾಗಿ, ಬ್ರಹ್ಮನಿಗೇ ಮೀಸಲಿರುವ ಅನೇಕ ದೇವಳಗಳು ಇಂದಿಗೂ ಉಳಿದಿದ್ದರೂ, ವಿಶ್ವಕರ್ಮನೂ ಸೃಷ್ಟಿಕರ್ತನಾಗಿದ್ದಾನೆ ಎಂದು ಅರ್ಥೈಸಬಹುದು.

ವೈದಿಕ ವಿಶ್ವಕರ್ಮನು ಪೌರಾಣಿಕರ ಮನಸ್ಸನ್ನೂ ಗೆದ್ದಿದ್ದಾನೆ ಎಂಬುದು ಸ್ಪಷ್ಟ. ಆದರೆ ಅವರು ತಮ್ಮ ಇಷ್ಟದೈವದ ಸ್ಥಾನಕ್ಕೆ ಚ್ಯುತಿ ಮಾಡದೆ ವಿಶ್ವಕರ್ಮನ ಸೃಷ್ಟಿಕರ್ತತ್ವವನ್ನು ಬಿಂಬಿಸುವ ಪ್ರಯತ್ನ ನಿರ್ವಹಿಸಿದ್ದಾರೆ. ಸೃಷ್ಟಿಖಂಡ ಮತ್ತು ಭೂಖಂಡಗಳಲ್ಲಿ ವಿಶ್ವಕರ್ಮನು ಜಗತ್‌ ಸೃಷ್ಟಿಯನ್ನು ಮಾಡಿರುವುದು, ಪಂಚಾದ್ಯಬ್ರಹ್ಮರು, ತತ್ಸಂಜಾತರಾದ ಪಂಚಾದ್ಯ ಶಿಲ್ಪಿರ್ಷಿಗಳು, ಅವರಿಂದ ಉದ್ಭವವಾದ ಶಾಖಾ-ಸೂತ್ರ-ಗೋತ್ರ-ಪ್ರವರ ಋಷಿಗಳ ವಿವರವೂ
ಉಲ್ಲೇಖಾರ್ಹವಾಗಿದೆ.

Advertisement

ಪಂಚಗುಣ ರೂಪ :
ವಿರಾಡ್ರೂಪ ವಿಶ್ವ (ಪ್ರಪಂಚ) ರೂಪ, ಏಕ ರೂಪ, ಪರಶಿವ ಸ್ವರೂಪ, ವಿಶ್ವಕರ್ಮ ರೂಪವು ಪಂಚಗುಣ ರೂಪಿಯಾದ ವಿಶ್ವಕರ್ಮನದೇ ರೂಪವಾಗಿದೆ. ವಿರಾಡ್ರೂಪವು ಸಾಟಿ ಇಲ್ಲದ್ದು. ಮನಸ್ಸಿನಿಂದ ಭಾವಿಸಲು ಸಾಧ್ಯವಿಲ್ಲದಷ್ಟು. ಅನಂತಕೋಟಿ ಸೂರ್ಯಕಾಂತಿ ಹೊಂದಿರುವುದು.

ಹಲವು ಬಗೆಯ ಕೆಂಪು ಕಾಂತಿಗಳಿಂದ ಉಜ್ವಲವಾದ ಕಾಂತಿಯಿಂದ ಕೂಡಿರುವುದು ಎಲ್ಲಾ ಕಡೆಗಳಲ್ಲಿ ಮುಖಗಳನ್ನು ಉಳ್ಳವನು. ಎಲ್ಲಾ ಕಡೆಗಳಿಗೂ ತೇಜೋವಂತವಾಗಿ ಬೆಳಗುತ್ತಿರುವಂತಹ ಮುಖ ಬಾಹುಗಳನ್ನು ಪಡೆದಿರುವಂತಹುದು. ಅವ್ಯಯನಾದ ಏಕಮೂರ್ತಿಯನ್ನು ವಿಶ್ವಕರ್ಮ ಎಂಬುದಾಗಿ ವೇದವೇತ್ತರು ಹೇಳುತ್ತಾರೆ.

ವಿಶ್ವಕರ್ಮ ಪರಾತ್ಪರನಿಗೆ ನಿರ್ಗುಣ ಮತ್ತು ಸಗುಣ ರೂಪವುಳ್ಳವನಾಗಿದ್ದು, ಆತನನ್ನು ಹೊಂದುವುದರಿಂದ ನಿರ್ಗುಣತ್ವ ಸಿದ್ಧಿಗೆ ಸಗುಣವು ಉಪಕರಿಸುತ್ತದೆ. ಸರ್ವಶೂನ್ಯನೂ ಆಗಿರುವ ವಿಶ್ವಕರ್ಮ ಭಗವಾನ್‌ನಲ್ಲಿ ಉಂಟಾದ ನಾದದಿಂದ ಬಿಂದು, ಬಿಂದುವಿನಿಂದ ಕಳೆಯು ಉಂಟಾಗಿದ್ದು, ಆ ನಾದ ಬಿಂದು ಕಳೆಗಳ ಸಂಯೋಗವೇ ಅವ್ಯಯವಾದ ಪ್ರಣವವಾಗುತ್ತದೆ. ಅದುವೇ ನಾಮ ರೂಪಾತ್ಮಕ ಜಗಕ್ಕೆ ಮೂಲ ಎಂಬ ಉಲ್ಲೇಖವಿದೆ.

ವಿಶ್ವಕರ್ಮನ ಧ್ಯಾನ:
ದಿವ್ಯ ಸಿಂಹಾಸನದ ಮೇಲೆ ಕುಳಿತಿದ್ದು ಆತನ ಸುತ್ತಲೂ ಮನು ಮತ್ತು ಐವರು ಬ್ರಹ್ಮರು ಹಾಗೂ ಸಾನಗಾದಿ ಐವರು ಮಹರ್ಷಿಗಳು ಹೀಗೆ ಹತ್ತು ಮಂದಿ ಧ್ಯಾನಾಸಕ್ತರಾಗಿ ಕುಳಿತಿರುವರು. ಇನ್ನೊಂದು ಬದಿಗೆ ಎಲ್ಲಾ ದೇವತೆಗಳು ಸೇವಾ ಸಕ್ತರಾಗಿ ಕುಳಿತಿರುವಂತೆ, ಮತ್ತೊಂದು ಕಡೆಯಲ್ಲಿ ಸಪ್ತರ್ಷಿಗಳು ಸ್ತವನ ಮಾಡುತ್ತಿರುವಂತೆ. ಆತನಿಗೆ ಐದು ಮುಖಗಳು. ಹತ್ತು ಕೈಗಳು, ಬ್ರಹ್ಮಾಚಾರೀ ದೀಕ್ಷಾಧಾರಣೆ ಮಾಡಿದ್ದಾನೆ.ಲಕ್ಷ್ಮಿ, ಸರಸ್ವತಿಯರು ಆತನ ಪಾದ ಪ್ರಾಕ್ಷಾಳನ
ಮಾಡುತ್ತಿದ್ದಾರೆ. ಆತನ ವಕ್ಷಸ್ಥಲದಲ್ಲಿ ಮೂರ್ತಿವಂತ ಬ್ರಹ್ಮ ವಿದ್ಯೆ ಇದೆ. ಕೊರಳಲ್ಲಿ ನಾನಾ ಪ್ರಕಾರದ ದಿವ್ಯ ರತ್ನಮಾಲೆಗಳು, ಮಣಿಖಚಿತ ಹಾರಗಳು, ಪುಷ್ಪಮಾಲೆಗಳು ಕಂಗೊಳಿಸುತ್ತಿರುತ್ತವೆ.

ಬಾಹುಗಳಲ್ಲಿ ತೋಳ್ಬಂದಿಗಳು, ಕೈಗಳಲ್ಲಿ ಕಡಗಗಳು, ಕಿವಿಗಳಲ್ಲಿ ದೇದೀಪ್ಯಮಾನ ತೇಜಸ್ವೀ ಕುಂಡಲಗಳು ಇತ್ಯಾದಿ ಸರ್ವಾಲಂಕಾರಗಳಿಂದ ಸುಶೋಭಿತವಾದ ಮೂರ್ತಿಯ ಭಸ್ಮವನ್ನು ಸರ್ವಾಂಗಕ್ಕೆ ಲೇಪಿಸಿಕೊಂಡು ವರಪ್ರದಾಯಕ ಹಾಗೂ ಮಂದಸ್ಮಿತ ಶೋಭಿತವಾದ ಸುಂದರ ವದನ, ಏರಿಕೆಯ ಕ್ರಮದಂತೆ ಬಲಗಡೆಯ ಐದು ಕೈಗಳಲ್ಲಿ ಗುದ್ದಲಿ, ಸಲಿಕೆ, ಉಜ್ಜುಕೊಡಲಿ, ಘಟಿಕಾಪಾತ್ರ, ಸುವರ್ಣ ಕಮಂಡಲು ಈ ಐದು ಆಯುಧಗಳನ್ನು ಧಾರಣ ಮಾಡಿರುತ್ತಾನೆ. ಎಡಗಡೆಯ ಐದು ಕೈಗಳಲ್ಲಿ ಗರಗಸ, ಉಳಿ, ಚಿಮಟಾ, ಅಲಂಕಾರ(ಆಭರಣ) ಅಗ್ನಿಕುಂಡ ಈ ಐದು ಆಯುಧಗಳನ್ನು ಧರಿಸಿರುವಂತಹ ವಿಶ್ವಕರ್ಮನ ಅವಿನಾಶೀ ಮೂರ್ತಿಯನ್ನು ಧ್ಯಾನಿಸೋಣ

ಆದಿ ಶಿಲ್ಪಿಗಳು:
ಶಿವೇ ಮನು ಮರ್ಮಯಸ್ತ್ವಷ್ಟಾ
ತಕ್ಷಾಶಿಲ್ಪೀಚ ಪಂಚಮಃ||
ವಿಶ್ವಕರ್ಮ ಸುತಾನೇತಾನ್
ವಿದ್ದಿಶಿಲ್ಪ ಪ್ರವರ್ತಕಾನ್||
ಏತೇಷಾಂ ಪುತ್ರಪೌತ್ರಾಯತ
ಏತೇ ಶಿಲ್ಪಿನೋಭುವಿ|
ಪಂಚಾಲಾ ನಾಮ
ವಿಜ್ಞೇಯಾ: ಪಂಚಭೇದಾ
ಹಿ ತೇಮತಾಃ||

ಮನು, ಮಯ, ತ್ವಷ್ಟಾ, ತಕ್ಷಾ ಮತ್ತು ಶಿಲ್ಪಿ ಎಂಬ ಐವರು ವಿಶ್ವಕರ್ಮನ ಮಕ್ಕಳು ಅವರೇ ಆದ್ಯ ಸೃಷ್ಟಿ ಶಿಲ್ಪ ಪ್ರವರ್ತಕ ಬ್ರಹ್ಮರು, ಅವರ ಪುತ್ರಪೌತ್ರ ಪರಂಪರೆಯವರೇ ಶಿಲ್ಪವಂಶ ಪ್ರವರ್ತಕ ಋಷಿಗಳೆಂದು ಪ್ರಖ್ಯಾತರಾಗಿದ್ದಾರೆ. ಸಾನಗ, ಸನಾತನ, ಅಹಭೂನ, ಪ್ರತ್ನ, ಸುಪರ್ಣರು ಇವರ ಮುಖಜನ್ಮನರಾಗಿದ್ದು, ಆದಿಶಿಲ್ಪರ್ಷಿಗಳೆಂದು ಪ್ರಖ್ಯಾತರಾಗಿದ್ದಾರೆ. ತಪಸ್ಸು ಮಾಡಿ ಸಿದ್ಧಿಗಳಿಸುವುದಕ್ಕಿಂತಲೂ ವಿಶ್ವಕರ್ಮನ ಕೃಪೆಗಾಗಿ ತಪಸ್ಸು ಮಾಡುವುದೇ ಬುದ್ಧಿವಂತರಾದವರು ಅನುಸರಿಸಬೇಕಾದ ಹಾದಿ. ಇಂತಹ ವಿರಾಟ್ ವಿಶ್ವಕರ್ಮನ ಪೂಜೆಯನ್ನು ಯಥಾಕ್ರಮದಂತೆ ಇಷ್ಟಾರ್ಥ ಸಿದ್ಧಿಗಾಗಿ ಆರಾಧಿಸೋಣ.

ಮಾಹಿತಿ : ವಿಶ್ವಕರ್ಮ ಪುರಾಣ
ಸಂಗ್ರಹ : ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next