Advertisement

ಓದುವ ಸುಖ

05:52 PM May 18, 2019 | mahesh |

ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ ಆಮೇಲೇನು? ಈ ಸವಿ, ಈ ಸುಖ ಇಲ್ಲವಾಗುತ್ತಲ್ಲ ಅನ್ನುವ ನಿರಾಸೆಯ ಭಯ. ಪುಸ್ತಕ ಮುಗಿದ ದಿನ, ಅಯ್ಯೋ ಮುಗಿದು ಹೋಯಿತಲ್ಲ ಅನ್ನುವ ಬೇಸರ. ಹಾಗಂತ ನನ್ನ ಬಳಿ ಪುಸ್ತಕಗಳೇ ಇರಲಿಲ್ಲ ಎಂದಲ್ಲ, ಕಬೋರ್ಡಿನಲ್ಲಿ ಸಾಲುಗಟ್ಟಿ ನಿಂತ ಪುಸ್ತಕಗಳಿವೆ. ಆದರೆ ಬೊಗಸೆ ಮಳೆಯ ರುಚಿ, ಸ್ವಾದ, ಖುಷಿ ಸಿಗಬೇಕಲ್ಲ!? ಭೈರಪ್ಪನವರ “ಗೃಹಭಂಗ’ ಕಾದಂಬರಿಯ ಕೊನೆಯ ಹತ್ತಾರು ಪುಟಗಳನ್ನು ಓದುವಾಗ ನಿಜಕ್ಕೂ ಬಿಕ್ಕಳಿಸಿದ್ದೆ. ನಾನು ಉದ್ಯೋಗಿಯಾಗಿರುವ ಶಾಲೆಯ ಹುಡುಗರು, “ಯಾಕೋ ಮೇಷ್ಟ್ರು ಅಳ್ತಿದ್ದಾರೆ’ ಅಂದಿದ್ದರು. ಹೌದು, ಬಹುಶಃ ನಿಜವಾದ ಓದಿನ ಸುಖದ ಮುಂದೆ ಬಹುತೇಕ ಸುಖಗಳು ಗೌಣವೆನಿಸುತ್ತವೆ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.

Advertisement

“ಕಾಯ್ಕಿಣಿ ತೀರಾ ವಿವರಣೆಗೆ ಇಳಿದುಬಿಡುತ್ತಾರೆ’ ಅನ್ನುವವರ ಮಾತು ಕೇಳಿದ್ದೇನೆ. “ಭೈರಪ್ಪನವರ ಕಾದಂಬರಿಗಳಲ್ಲಿ ಏನಿದೆ?’ ಅನ್ನುವ ಪ್ರಶ್ನೆಗಳನ್ನೂ ಕೇಳಿಸಿಕೊಂಡಿದ್ದೇನೆ. ನನ್ನ ಕೈಯಿಂದ ಒಂದೇ ಒಂದು ಪುಟವನ್ನು ಓದಿಸಿಕೊಳ್ಳಲಾಗದ ಪುಸ್ತಕವೊಂದು ಅವರಿಗೆ ರಸಗವಳವಾಗಿರುತ್ತದೆ. ಇದು ಓದುಗನ ಅಭಿರುಚಿ. ಸಾಹಿತ್ಯವೊಂದು ಅವರವರ ಎದೆಗೆ ಆಪ್ತವಾಗುವ ಬಗೆ. ಅವರವರ ಮನಸ್ಸಿನಂತೆ, ಪ್ರತಿಭೆಯಂತೆ ಅವರವರಿಗೆ ಓದಿನ ಸುಖ ದಕ್ಕುತ್ತದೆ.

ಸಾಹಿತ್ಯ ಮೀಮಾಂಸೆಯಲ್ಲಿ ಸಹೃದಯ ಎಂಬ ಪದವೊಂದಿದೆ. ಓದುಗನನ್ನು ಹಾಗೆ ಕರೆಯಲಾಗುತ್ತದೆ. ಕವಿಗೆ ಸಮಾನವಾದ ಹೃದಯದವನು ಅನ್ನುವ ಅರ್ಥ ಕೊಡುತ್ತದೆ. ರಸಜ್ಞ ಅನ್ನುವ ಅರ್ಥವೂ ಕೂಡ ಇದೆ. ಪುಸ್ತಕದ ರಸವನ್ನು ಕೊಳ್ಳೆ ಹೊಡೆಯುವವನು ಅನ್ನ ಬಹುದೇನೊ! ಬರಹಗಾರನಷ್ಟೇ ಮತ್ತು ಅವನಿಗಿಂತ ಹೆಚ್ಚೇ ರಸವಶನಾಗುವ ಅವಕಾಶಗಳು ಅವನಿಗಿವೆ. ಕವಿಗೆ ಕೇವಲ ಒಂದು ನೋಟ; ಸಹೃದಯನಿಗೆ ಹಲವು ನೋಟಗಳು. ಆನಂದವರ್ಧನ ಎಷ್ಟು ಸೊಗಸಾಗಿ ಹೇಳ್ತಾನೆ ನೋಡಿ “ಕವಿಯ ವರ್ಣಿತ ವಿಷಯದಲ್ಲಿ ತನ್ಮಯನಾಗುವ ಯೋಗ್ಯತೆ ಯಾರಿಗುಂಟೊ ಅವನೇ ಸಹೃದಯ, ನಿಜವಾದ ಓದುಗ!’ ನಾನು ಅದನ್ನು ಓದುವ ಸುಖವೆಂದಿದ್ದೇನೆ. ಹಾಗಾದರೆ ಎಲ್ಲರಿಗೂ ಆ ಸುಖ ದಕ್ಕಿಬಿಡುತ್ತದಾ? ಕುವೆಂಪುರವರ ರಾಮಾಯಣ ದರ್ಶನಂನ ದರ್ಶನ ಓದಿದವರೆಲ್ಲರಿಗೂ ದಕ್ಕುತ್ತದಾ? ಇಲ್ಲ, ಸಾಧ್ಯವಿಲ್ಲ. ಅದಕ್ಕೊಂದು ಪ್ರತಿಭೆ ಬೇಕು. ಕೇವಲ ಬರೆಯುವವನಿಗೆ ಪ್ರತಿಭೆ ಇದ್ದರೆ ಸಾಲದು, ಬರೆದ ಸಾಹಿತ್ಯದ ರಸವನ್ನು ಹೀರಿಕೊಳ್ಳಲು ಕೂಡ ಪ್ರತಿಭೆ ಬೇಕು. ಬರಹಗಾರ ಮತ್ತು ಓದುಗ ಒಂದೇ ವೀಣೆಯ ಎರಡು ತಂತಿಗಳು. ಒಂದು ಮೀಟಿದರೆ ಮತ್ತೂಂದು ಝೇಂಕರಿಸುತ್ತದೆ.

ಒಬ್ಬ ಬರಹಗಾರನಿಗೆ ಒಳ್ಳೆಯ ಓದುಗ ಸಿಗುವುದು ಬಹಳ ಮುಖ್ಯ. ಅದರಲ್ಲೇ ಅವನ ಗೆಲುವಿದೆ. ಅಂತಹ ಓದುಗನಿಂದ ಮಾತ್ರ ಬರಹಕ್ಕೊಂದು ಬೆಲೆ. ಓದುಗ ತನ್ನ ಕಲ್ಪನಾಸೃಷ್ಟಿ, ಲೋಕಾನುಭವದಿಂದ ತಾನೇ ಒಂದು ಅದ್ಭುತ ಜಗತ್ತನ್ನು ಸೃಷ್ಟಿಸಿಕೊಂಡು ಅದರಲ್ಲಿ ಮುಳುಗಿ ಖುಷಿಪಡುತ್ತಾನೆ. ಅದೊಂದು ನಿಜಕ್ಕೂ ಸ್ವರ್ಗಸ್ಥಿತಿ. ಅದನ್ನೇ ಓದುವ ಸುಖ ಎನ್ನಬಹುದು.

ಬದಲಾದ ಕಾಲದಲ್ಲಿ ಓದುಗ
ಓದುಗ ಬದಲಾಗಿದ್ದಾನೆ. ಬದಲಾಗದೆ ಇರಲು ಅವನೇನು ಕಲ್ಲು ಬಂಡೆಯೆ? ಓದುಗರ ಸಂಖ್ಯೆ ತೀರಾ ಕಡಿಮೆ ಆಗಿದೆಯಾ? ಖಂಡಿತ ಇಲ್ಲ. ಇತ್ತೀಚಿನ ಯುವಕರು ಓದಿನ ಕಡೆ ಹೆಚ್ಚು ಆಸಕ್ತರಾಗಿರುವುದು ಕಾಣಿಸುತ್ತದೆ. ಇಲ್ಲದಿದ್ದರೆ ಭೈರಪ್ಪನವರ ಕಾದಂಬರಿಗಳನ್ನು ಕ್ಯೂನಲ್ಲಿ ನಿಂತು ಏಕೆ ಕೊಳ್ಳುತ್ತಿದ್ದರು? ತೇಜಸ್ವಿ ಅವರ ಪುಸ್ತಕಗಳಿಗೆ ಇಂದಿಗೂ ಬೇಡಿಕೆ ಏನಕ್ಕಿರುತ್ತಿತ್ತು? ಮೂರು ಸಾಲು ಸುತ್ತಿ, ಪ್ರಭಾವ ಬೀರಿ ಪ್ರಶಸ್ತಿ ಬಾಚಿಕೊಂಡ ಕೃತಿಯೊಂದು ಖರ್ಚಾಗಿಲ್ಲ ಅನ್ನುವ ಕಾರಣಕ್ಕೆ ಓದುಗರಿಲ್ಲ ಅಂತ ಹೇಳುವುದು ತಪ್ಪು. ಓದುಗರ ಕೈಗೆ ಪುಸ್ತಕಗಳು ಸರಿಯಾಗಿ ಸಿಗುತ್ತಿಲ್ಲ ಅನ್ನುವುದು ಮಾತ್ರ ಸತ್ಯ. ನಮ್ಮಲ್ಲಿ ಪುಸ್ತಕ ಮಾರುಕಟ್ಟೆ ವ್ಯವಸ್ಥಿತವಾಗಿಲ್ಲ ಬಿಡಿ. ತಂತ್ರಜ್ಞಾನ ಸ್ಫೋಟದಿಂದ ಓದುವ ಸಾಹಿತ್ಯ ಈಗ ಬೆರಳ ತುದಿಗೆ ಸಿಗುತ್ತಿದೆ. ಪುಸ್ತಕದ ಮಾರುಕಟ್ಟೆ ನೋಡಿ ಓದುಗರಿಲ್ಲ ಎಂದು ತೀರ್ಮಾನಿಸಲಾಗದು. ಓದುಗನಿ¨ªಾನೆ ಮತ್ತು ಅವನಲ್ಲಿ ಅಷ್ಟೇ ಪ್ರತಿಭೆ ಇದೆ. ಹೊಸಗಾಲದ ಜ್ಞಾನಸ್ಫೋಟ ಅವನನ್ನು ಮತ್ತಷ್ಟು ಓದಿನಲ್ಲಿ ಸುಖೀಸುವಂತೆ ಮಾಡುತ್ತಿದೆ.

Advertisement

ಸದಾಶಿವ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next