ವಯಸ್ಸಿನೊಳಗ ಒಂದೂವರಿ ವರ್ಷ, ಸಾಲಿಯೊಳಗ ಒಂದ ವರ್ಷ ಅಷ್ಟ ಫರಕು ನಂಗೂ ಮತ್ತ ಅಣ್ಣಗ . ಆದರ ಅಪ್ಪನ ಕಠಿಣ ನಿಯಮ,ನಾ ಅವನನ್ನು ಅಣ್ಣಾ ಅಂತನ ಅನಬೇಕು ಅಂತ. ನನ್ನ ಎಷ್ಟೋ ಮಂದಿ ಗೆಳತ್ಯಾರು ಅವರ ಅಣ್ಣಂದಿರಿಗೆ ಹೆಸರ ಹಿಡಿದು ಕರೆಯೋದ ನೋಡಿ ಒಮ್ಮೊಮ್ಮೆ ನಂಗೂ ಅಣ್ಣಾ ಅನ್ನೋ ಬದಲಿ ಹೆಸರಲೇ ಕರೆಯೋ ಮನಸ್ಸ ಆಗತಿತ್ತು. ಒಮ್ಮೆ ಕರೆದಿದ್ದೆ ಅನಸತದ. ಅಪ್ಪಾ ಬೈದಿದ್ದಾ ಆವಾಗ. ನೋಡಲಿಕ್ಕೆ ಮೊದಲಿಂದ ನಾ ಅವನಕಿಂತ ಬೀಸು ಆಳು. ಹಿಂಗಾಗಿ ನಾ ಅಣ್ಣಾ ಅಂತ ಕರೀದಿದ್ದರ ಮಂದೀ ಅಂವಾ ನನ್ನ ತಮ್ಮಾ ಅಂತ ತಿಳಕೋ ಬಹುದೇನೋ ಅಂತ ಅಪ್ಪನ ವಿಚಾರ ಇತ್ತು ಅನಸತದ.
5ನೇ ಎತ್ತಾ ದಿಂದ ನಾವಿಬ್ಬರೂ ಒಂದ ಸಾಲಿ. ಅಂವಾ ಕ್ಲಾಸ್ ನ್ಯಾಗ ಯಾವಾಗಲೂ ಸಂಭಾವಿತ ಮತ್ತ ಶಾಣೇ. ಅದರಿಂದ ನಾ ಮುಂದಿನ ಕ್ಲಾಸ್ ಹೋಗೋದರಾಗ ಅಂವಾ ತನ್ನ ಒಂದು ಛಾಪು ಮೂಡಿಸಿರತಿದ್ದಾ. ನಾ ಶಾಣೇ ಇರಲಿ ಬಿಡಲೀ, ನನ್ನ ಮ್ಯಾಲೆ ಟೀಚರ್ ಗೊಳ ಮೊದಲನೇ ಇಂಪ್ರೆಶ್ಶನ್ ಛೊಲೊನ ಇರತಿತ್ತು. ಆದರ ಅಣ್ಣಗ ಮಾತ್ರ ನಾ ಯಾವಾಗಲೂ ಸಾಲೀಗೆ ಅವನ ಜೊತಿ ಹೋಗಬಾರದು, ಸಾಲಿಯೊಳಗ ಅವನ ಜೊತಿ ಮಾತಾಡ ಬಾರದು ಅಂತ ಕಂಡೀಷನ್ ಇರತಿತ್ತು. ಸಾಲೀ ಕಲಿಯೋದು ಮುಗಿಯೋ ತನಾ ಇದು ಹಂಗನ ಇತ್ತು. ಆದರ ನನಗ ಗೊತ್ತ ಆಗದಂಗ, ನನ್ನ ಯಾರರೆ ಹುಡುಗುರು ಕಾಡಸತಾರೇನೋ ಅಂತ ಲಕ್ಷ್ಯ ಇಟ್ಟಿರತಿದ್ದ. ಒಮ್ಮೆ ಮಹಾಭಾರತದ ಒಂದು ಸನ್ನಿವೇಶದ ಬಗ್ಗೆ ನಾಟಕಾ ಮಾಡೋವಾಗ ನಾನು ಸುಭದ್ರೆ ಯ ಪಾತ್ರ ಮಾಡಿದ್ದೆ. ಮರುದಿವಸ ಒಬ್ಬ ಕಿಡಿಗೇಡಿ ಹುಡುಗಾ ಬೋರ್ಡ್ ಮ್ಯಾಲೆ “ಸುಭದ್ರೆ” ಅಂತ ಬರದಿದ್ದಾ. ನಾ ಹುಚ್ಚರಗತೆ ಆದನ್ನ ನೋಡಿ ಅಳಕೋತ ಕೂತಿದ್ದರ ಅಣ್ಣ ಬಂದು ಆ ಹುಡುಗನ್ನ ಧಮಾ ಧಮಾ ಹೊಡದಿದ್ದಾ. ಹಿಂಗಿತ್ತು ಅಂವಾ ರಕ್ಷಾ ಮಾಡೋ ಪರಿ.
ಕಾಲೇಜ್ ನೊಳಗೂ ಹಂಗ ಟೀಚರ್ ಮ್ಯಾಲೆ ಒಂದು ಇಂಪ್ರೆಶ್ಶನ್ ಹಾಕಿ ಇಟ್ಟಿರತಿದ್ದಾ. ನನಗ ಅವರ ಅಟೆನ್ಶನ್ ಆರಾಮಾಗಿ ಸಿಕ್ಕ ಬಿಡತಿತ್ತು. ಯಾವಾಗಲೂ ಸಂಡಾಸಕ್ಕ ಹೋದರ, ತಾಸಗಟ್ಟಲೇ ಹೋಗೋದು. ಏನು ಮಾಡತಿದ್ದಿ? ಅಂದರ ಕನಸು ಕಾಣತಿದ್ದೆ ಅನ್ನವಾ. ಹಂಗ ಕನಸ ಕಾಣೋದು ಅಷ್ಟ ಅಲ್ಲದ ಕಠಿಣ ಪರಿಶ್ರಮ ಮಾಡಿ ಅವನ್ನೆಲ್ಲ ನನಸು ಕೂಡ ಮಾಡಕೊಂಡಾ. ಅಪ್ಪ ಹೋಗೋ ಮುಂದ ಆ ಹುಡುಗಿ ಕಾಳಜಿ ತೊಗೋ ಅಂತ ಹೇಳಿದ ದಿನದಿಂದ ಅವನ ಬೆನ್ನ ಮ್ಯಾಲೆ ನಾನೊಂದು ಗಂಟು ಮೂಟೆ ಇದ್ದಂಗ. ತಾ ಮುಂದ ಹೋಗೋದ ಅಲ್ಲದ ನನ್ನೂ ತೊಗೊಂಡು ಹೋಗತಾನ. ನನ್ನ ಮಗನ ಮುಂಜಿವಿ ಮಾಡೋ ಮುಂದ ಬರಂಗಿಲ್ಲಾ ಅನಕೋತ ಸರಪ್ರೈಸ್ ಆಗಿ ಬಂದು ಕಣ್ಣಾಗ ನೀರು ತರಸಿದ್ದಾ.
ಅದಕ್ಕ ನಾ ಹೇಳೋದು ಅಂವಾ “ಅಪ್ಪನಂಥಾ ಅಣ್ಣ” ಅಂತ. ದೂರದ ದೊಡ್ಡಣ್ಣನ ದೇಶದಲ್ಲಿ ಕುಳಿತ ಅಣ್ಣ ಶ್ರೀಧರ್ ಕುಲಕರ್ಣಿ ಗೆ ರಕ್ಷಾ ಬಂಧನದ ಶುಭಾಶಯಗಳು ಉದಯವಾಣಿಯ ಮೂಲಕ.
ಸಂಗೀತಾ ಚಾಚಡಿ
ಬೆಳಗಾಮ್