Advertisement

ಮೈಸೂರಲ್ಲಿ ಹ್ಯಾಪಿ ನ್ಯೂ ಇಯರ್‌ ಘೋಷಣೆ ಅಬ್ಬರ

01:03 PM Jan 02, 2018 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಸಡಗರ, ಸಂಭ್ರಮದಿಂದ 2018ನೇ ಹೊಸ ವರ್ಷವನ್ನು ಬರಮಾಡಿಕೊಂಡು, ಸಂಭ್ರಮಾಚರಣೆ ಮೂಲಕ ನೂತನ ವರ್ಷದ ಸಂತಸದಲ್ಲಿ ಮಿಂದೆದ್ದರು.

Advertisement

ಹೊಸ ವರ್ಷದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 12ಗಂಟೆಗೂ ಮೊದಲೇ ನಗರದಲ್ಲಿ ಸಂಭ್ರಮ ಕಳೆಕಟ್ಟಿತ್ತು. ಹಾಡು, ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂತಸದ ಕ್ಷಣಗಳನ್ನು ಆನಂದಿಸಿದರು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ನಗರದೆಲ್ಲೆಡೆ ಹ್ಯಾಪಿ ನ್ಯೂ ಇಯರ್‌ ಘೋಷಣೆಗಳ ಅಬ್ಬರ ಜೋರಾಗಿತ್ತು. ಕುಟುಂಬಸ್ಥರು,

ಸ್ನೇಹಿತರು, ಆತ್ಮೀಯರು ಮಾತ್ರವಲ್ಲದೆ ಎಲ್ಲರೊಂದಿಗೆ ಹೊಸ ವರ್ಷದ ಖುಷಿ ಹಂಚಿಕೊಂಡ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಿರಿಯರು-ಕಿರಿಯರೆನ್ನದೇ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ ಜನರು, ಕಳೆದ ವರ್ಷದ ಕಹಿ ಅನುಭವಗಳನ್ನು ಬದಿಗೊತ್ತಿ ಸಿಹಿ ತಿನಿಸು, ಕೇಕ್‌ಗಳನ್ನು ತಿಂದು ಸಂಭ್ರಮಿಸಿದರು.

ಪ್ರವಾಸಿಗರ ಸಂಭ್ರಮ: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೈಸೂರು ದೇಶ-ವಿದೇಶಗಳ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದ್ದು, ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು ಸಹ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿದರು. ಪ್ರಮುಖವಾಗಿ ನಗರದ ಸಂದೇಶ್‌ ದಿ ಪ್ರಿನ್ಸ್‌, ಆಲಿವ್‌ ಗಾರ್ಡನ್‌,

ಕೋರಂ, ಸದರನ್‌ ಸ್ಟಾರ್‌, ರ್ಯಾಡಿಸನ್‌ ಬ್ಲೂ, ಲಲಿತಮಹಲ್‌, ಪೈವಿಸ್ಟಾ, ಕ್ರಿಸ್ಟಲ್‌ಪಾರ್ಕ್‌, ಕಂಟ್ರಿ ಕ್ಲಬ್‌, ರುಚಿ ದಿ ಪ್ರಿನ್ಸ್‌, ರೂಸ್ಟ್‌, ಜೆ.ಪಿ.ಪಾರ್ಚೂನ್‌ ಹೊಟೇಲ್‌, ಏಟ್ರಿಯಂ, ರೇಸ್‌ ಕ್ಲಬ್‌, ಗಾಲ್ಫ್ ಕ್ಲಬ್‌, ನ್ಪೋರ್ಟ್ಸ್ ಕ್ಲಬ್‌ ಸೇರಿದಂತೆ ಅನೇಕ ಕಡೆಗಳಲ್ಲಿ ನ್ಯೂ ಇಯರ್‌ ಪಾರ್ಟಿಯ ಸಂಭ್ರಮ ಮನೆಮಾಡಿತ್ತು.

Advertisement

2 ಲಕ್ಷ ಲಡ್ಡು ವಿತರಣೆ: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಜಯನಗರ 1ನೇ ಹಂತದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರತಿವರ್ಷದಂತೆ 2 ಲಕ್ಷ ಲಾಡುಗಳನ್ನು ವಿತರಿಸಲಾಯಿತು. ಮುಂಜಾನೆ 5 ಗಂಟೆಯಿಂದಲೇ ಆರಂಭಗೊಂಡ ಲಡ್ಡು ವಿತರಣೆ ಕಾರ್ಯ ಸೋಮವಾರ ಸಂಜೆವರೆಗೂ ನಡೆಯಿತು. ದೇವರ ದರ್ಶನಕ್ಕೆಂದು ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಲಡ್ಡು ಪ್ರಸಾದ ಸ್ವೀಕರಿಸಿದರು.

ದೇವಾಲಯಗಳಿಗೆ ಲಗ್ಗೆ: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಗರದ ಅನೇಕ ಹೋಟೆಲ್‌, ರೆಸ್ಟೋರೆಂಟ್‌ಗಳು ಜನರಿಂದ ತುಂಬಿ ಹೋಗಿತ್ತು. ಆದರೆ, ಬೆಳಗ್ಗೆ ಆಗುತ್ತಿದ್ದಂತೆ ನಗರದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಭಕ್ತರ ದಂಡು ಜೋರಾಗಿತ್ತು. ಮುಂಜಾನೆಯೇ ದೇವಸ್ಥಾನಗಳಿಗೆ ತೆರಳಿದ ಜನರು ಹೊಸ ವರ್ಷಾಚರಣೆ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಬಾವ ಮೆರೆದರು.

ಇದರಿಂದಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲಿನ ವೆಂಕಟರಮಣ ಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯ, ಸರಸ್ವತಿಪುರಂನ ಬಂದಂತಮ್ಮ ದೇವಸ್ಥಾನ, ವಿಜಯನಗರದ ಸಪ್ತಮಾತೃಕಾ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next