Advertisement

ಮಹದಾಯಿ ನೀರಿಲ್ಲದಿದ್ರೂ ಮದ್ಯಕ್ಕೆ ಬರವಿಲ್ಲ!

06:25 AM Jan 02, 2018 | |

ಮೈಸೂರು: 2017ನೇ ವರ್ಷವನ್ನು ಬೀಳ್ಕೊಟ್ಟು, 2018ನೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕರ್ನಾಟಕದ ಮದ್ಯಪ್ರಿಯರು, ಭಾರೀ ಕಿಕ್‌ ಏರಿಸಿಕೊಂಡಿದ್ದಾರೆ.

Advertisement

ಡಿಸೆಂಬರ್‌ 30 ಮತ್ತು 31 ವಾರಾಂತ್ಯದ ಜತೆಗೆ ವರ್ಷಾಂತ್ಯವೂ ಆಗಿದ್ದರಿಂದ ಹೊಸ ವರ್ಷಾಚರಣೆಯನ್ನು ಭರ್ಜರಿಯಾಗಿಯೇ ಆಚರಿಸಲು ಪ್ಲಾನ್‌ ಮಾಡಿಕೊಂಡಿದ್ದ ಮದ್ಯಪ್ರಿಯರು, ಎರಡೂ ದಿನಗಳ ಕಾಲ ಎಣ್ಣೆ ಹೊಳೆಯಲ್ಲಿ ಮಿಂದೆದ್ದಿರುವುದರಿಂದ ರಾಜ್ಯದಲ್ಲಿ ಈ ಎರಡು ದಿನಗಳಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ತಿಂಗಳ ಮದ್ಯ ಮಾರಾಟದಲ್ಲಿ 245 ಕೋಟಿ ರೂ. ಹೆಚ್ಚಳವಾಗಿದೆ. 2016ರ ಡಿಸೆಂಬರ್‌ನಲ್ಲಿ ಅಂದಾಜು 1,855 ಕೋಟಿ ರೂ. ಮದ್ಯ ಎತ್ತುವಳಿಯಾಗಿದ್ದರೆ, 2017ರ ಡಿಸೆಂಬರ್‌ನಲ್ಲಿ 2,100 ಕೋಟಿ ರೂ. ಮೌಲ್ಯದ ಮದ್ಯ ಎತ್ತುವಳಿಯಾಗಿದೆ.

ಕರ್ನಾಟಕ ರಾಜ್ಯ ಪಾನೀಯ ನಿಗಮದ ದಾಸ್ತಾನು ಮಳಿಗೆಗಳಲ್ಲಿ ಶನಿವಾರ 166 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾದರೆ, ಭಾನುವಾರ 34.50 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ವರ್ಷಾಂತ್ಯದ ದಿನಗಳು ಶನಿವಾರ, ಭಾನುವಾರವೇ ಬಂದಿದ್ದರಿಂದ ಹೆಚ್ಚಿನ ಮದ್ಯಪ್ರಿಯರು ಶನಿವಾರವೇ ಎರಡು ದಿನಗಳಿಗೆ ತಮಗೆ ಬೇಕಾದಷ್ಟು ಮದ್ಯವನ್ನು ಖರೀದಿಸಿ ಕೊಂಡೊಯ್ದಿದ್ದಾರೆ. ಹೀಗಾಗಿ ಡಿ.30ರ ಶನಿವಾರ ಸಾಮಾನ್ಯ ದಿನಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ಮದ್ಯ ಮಾರಾಟವಾಗಿದೆ. ರಾಜಾÂದ್ಯಂತ ಇರುವ ನಿಗಮದ 69 ದಾಸ್ತಾನು ಮಳಿಗೆಗಳಿಂದ ಅಬಕಾರಿ ಇಲಾಖೆಯವರು ಆರ್‌ಟಿಜಿಎಸ್‌ ಮೂಲಕವೇ ಮದ್ಯವನ್ನು ಎತ್ತುವಳಿ ಮಾಡುತ್ತಾರೆ. 

ಶೇ.60ರಷ್ಟು ಮದ್ಯ ಎತ್ತುವಳಿ ಆರ್‌ಟಿಜಿಎಸ್‌ ಮೂಲಕವೇ ನಡೆಯುತ್ತದೆ. ಆದರೆ, ಡಿ.31ರ ಭಾನುವಾರ ಕೂಡ ಪಾನೀಯ ನಿಗಮದ ದಾಸ್ತಾನು ಮಳಿಗೆಗಳು ಕಾರ್ಯ ನಿರ್ವಹಿಸಲು ಶನಿವಾರ ಸಂಜೆ ವೇಳೆಗೆ ತೀರ್ಮಾನ ಕೈಗೊಂಡಿದ್ದು ಹಾಗೂ ಭಾನುವಾರ ಬ್ಯಾಂಕ್‌ಗಳು ರಜೆ ಇದ್ದುದರಿಂದ ಆರ್‌ಟಿಜಿಎಸ್‌ ಮಾಡಲಾಗದೆ ಎತ್ತುವಳಿ ಕಡಿಮೆಯಾಗಿದೆ ಎನ್ನುತ್ತಾರೆ ಪಾನೀಯ ನಿಗಮದ ಅಧಿಕಾರಿಗಳು.ಶನಿವಾರ 147.62 ಕೋಟಿ ರೂ. ಮೌಲ್ಯದ ಐಎಂಎಲ್‌ ಎಂದು ಕರೆಯಲಾಗುವ ವಿಸ್ಕಿ, ಬ್ರಾಂಡಿ ಮೊದಲಾದ ಪಾನೀಯಗಳು ಮಾರಾಟವಾಗಿದ್ದರೆ, 18.66 ಕೋಟಿ ರೂ. ಮೌಲ್ಯದ ಬಿಯರ್‌ ಮಾರಾಟವಾಗಿದೆ.

Advertisement

ಇನ್ನು ವರ್ಷದ ಕಡೆಯ ದಿನವಾದ ಡಿ.31ರಂದು 29.10 ಕೋಟಿ ರೂ. ಮೌಲ್ಯದ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 5.40 ಕೋಟಿ ರೂ. ಮೌಲ್ಯದ ಬಿಯರ್‌ ಮಾರಾಟವಾಗಿದೆ.

ಹೊಸ ವರ್ಷಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ನೀಡಿದ್ದರಿಂದ ನಗರ ಮತ್ತು ಪಟ್ಟಣ ಪ್ರದೇಶಗಳ ಬಾರ್‌ ಮತ್ತು ವೈನ್‌ಶಾಪ್‌ಗ್ಳಲ್ಲಿ ಮಧ್ಯರಾತ್ರಿವರೆಗೂ ಮದ್ಯಪ್ರಿಯರ ಸರತಿ ಸಾಲು ಕಂಡುಬಂತು. ಗ್ರಾಮೀಣ ಪ್ರದೇಶದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಗುಂಪು ಗುಂಪಾಗಿ ಬಾರ್‌ಗಳಿಗೆ ಬಂದು ತಮ್ಮ ನೆಚ್ಚಿನ ಬ್ರಾಂಡ್‌ ಖರೀದಿಸಿ ಕೊಂಡೊಯ್ದು, ಗೆಳೆಯರ ಜೊತೆ ಸೇರಿ ಮದ್ಯ ಸೇವಿಸುವ ಮೂಲಕ 2017ನೇ ವರ್ಷವನ್ನು ಬೀಳ್ಕೊಟ್ಟು, 2018ನೇ ಹೊಸ ವರ್ಷವನ್ನು ಸಖತ್‌ ಟೈಟ್‌ ಆಗಿ ಬರಮಾಡಿಕೊಂಡಿದ್ದಾರೆ.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next