Advertisement

ಭರವಸೆಯ ಗೋಡೆಗೆ ಹರುಷದ ತೂಗುಪಟ

12:43 AM Jan 01, 2022 | Team Udayavani |

ಇದ್ದುದೆಲ್ಲವೂ ಬಿದ್ದು ಹೋದರು
ಎದ್ದುಬಂದಿದೆ ಸಂಭ್ರಮ
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಭ್ರಮ
– ಜಿ.ಎಸ್‌. ಶಿವರುದ್ರಪ್ಪ

Advertisement

ಎರಡು ವರ್ಷಗಳ ಕೊರೊನಾ ನೋವಿನ ಮಧ್ಯೆ ಹೊಸ ವರುಷಕ್ಕೆ ಕಾಲಿಟ್ಟಿದ್ದೇವೆ. 2020 ಮತ್ತು 2021 ಇಡೀ ಮನುಕುಲಕ್ಕೆ ಹೊಸ ಪಾಠಗಳನ್ನು ಕಲಿಸಿಕೊಟ್ಟ ವರ್ಷಗಳು. ಸಾವು-ನೋವುಗಳ ಸುದ್ದಿ ಸುತ್ತವೇ ಗಿರಕಿ ಹೊಡೆದಿತ್ತು ಮನುಷ್ಯನ ಜೀವ. ಬದುಕಿನ ಹಲವು ಮಜಲುಗಳಿಗೆ ಈ ಎರಡು ವರ್ಷಗಳೂ ತೆರೆದುಕೊಂಡಿದ್ದವು. ಆದರೂ ಮನುಕುಲ ಭರವಸೆ ಮತ್ತು ಬಂಧುತ್ವದ ಆಸರೆಯಲ್ಲಿಯೇ ಪ್ರತಿಕ್ಷಣ ಚೇತರಿಸುತಿತ್ತು.

ಈಗಲೂ ಅಷ್ಟೇ, 2021ರನ್ನು ಮುಗಿಸಿ 2022ಕ್ಕೆ ಹೊಸ ಭರವಸೆ, ಹೊಸ ಆಶಯ, ಹೊಸ ಕನಸುಗಳೊಂದಿಗೆ ಕಾಲಿಡುತ್ತಿದ್ದೇವೆ. 2020ರಿಂದ 2021ಕ್ಕೆ ಕಾಲಿಡುವಾಗ ಕೊರೊನಾದ ಮೊದಲ ಅಲೆ ಇಳಿದು, ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಆದರೆ, ಮಾರ್ಚ್‌ ಬಳಿಕ ಕೊರೊನಾ ಸ್ಥಿತಿ ಮತ್ತಷ್ಟು ಗಂಭೀರವಾಗಿ ಎರಡನೇ ಅಲೆ ಆರಂಭವಾಗಿ ನಮ್ಮ ಸುತ್ತಲಿನ ಹಲವಾರು ಅಮೂಲ್ಯ ಪ್ರಾಣಗಳನ್ನು ಕಳೆದುಕೊಂಡೆವು. ನಮ್ಮ ಪ್ರಾಣವಾಯು ಹಲವರ ಬದುಕನ್ನು ಕಿತ್ತುಕೊಂಡಿತ್ತು.

ಈಗ 2022ಕ್ಕೆ ಕಾಲಿಡುವ ಹೊತ್ತಲ್ಲೇ, ಧುತ್ತನೆ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ ಆವರಿಸಿಕೊಳ್ಳುತ್ತಿದೆ. ಜಗತ್ತಿನ ಆರ್ಥಿಕತೆ, ಜನಜೀವನ, ಸಾಮಾಜಿಕ ವ್ಯವಸ್ಥೆ, ಶೈಕ್ಷಣಿಕ ರಂಗ ಸಹಿತ ಎಲ್ಲವೂ ಇನ್ನೇನು ಹಳಿಗೆ ಬರುತ್ತಿವೆ ಎಂದು ನಿಟ್ಟುಸಿರು ಬಿಡುವಾಗಲೇ ಹೊಸ ರೂಪಾಂತರಿಯ ಆಗಮನವಾಗಿರುವುದು ಭೀತಿಯ ವಾತಾವರಣಕ್ಕೂ ಕಾರಣವಾಗಿದೆ.

ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಲ್ಲಿ 2022 ಮತ್ತಷ್ಟು ಹೊಸ ಕನಸುಗಳನ್ನು ನಮ್ಮ ನಡುವೆ ಬಿತ್ತುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಬೆಳಕಿಂಡಿ ಕಾಣಿಸುವ ಜತೆಗೆ, ಭಾರತದ ವಿಜ್ಞಾನಿಗಳ ಕನಸಿನ ಗಗನಯಾನ ಇದೇ ವರ್ಷ ಈಡೇರುವ ಕಾಲವೂ ಹತ್ತಿರವಾಗಿದೆ.  ಹೊಸ ವರ್ಷದಲ್ಲಿ ಜಗತ್ತಿನ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ದೊಡ್ಡ ಮೈಲುಗಲ್ಲಾಗುವ ಸಾಧ್ಯತೆಯೂ ಇದೆ.

Advertisement

ಸವಾಲುಗಳ ಮೇಲೆ ಸವಾಲುಗಳನ್ನು ಹೊತ್ತು ಅದನ್ನು ಮೀರಿ ಬೆಳೆದ ಮನುಕುಲಕ್ಕೆ ಈ ವರ್ಷ ಬರುವ ಮತ್ತಷ್ಟು ಸವಾಲುಗಳನ್ನು ಎದುರಿಸುವ ಶಕ್ತಿ ಇದ್ದೇ ಇದೆ. ಪ್ರತಿಯೊಬ್ಬರ ಆತ್ಮಸ್ಥೈರ್ಯ, ಛಲ ಹೆಚ್ಚುವುದು ಇಂಥ ಸವಾಲುಗಳು ಎದುರಾದಾಗಲೇ. ಬದುಕು ಸಂಕಟಕ್ಕೆ ಈಡಾದಾಗ ಭರವಸೆಯ ಊರುಗೋಲಿನ ಜತೆ ಹಾಗೂ ಬಂಧುತ್ವದ ಆಸರೆಯ ಜತೆ ನಾವೆಯನ್ನು ಮುನ್ನಡೆಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ  ಪರಸ್ಪರ ವಿಶ್ವಾಸ, ಸಹಾಯಹಸ್ತ, ಮಾನವಾಂತಕರಣಗಳೇ ನಮ್ಮ ಹಾಗೂ ನೆರೆಯವರ ಬದುಕನ್ನು ಮುನ್ನಡೆಸುವಂಥದ್ದು.

ಹಿಂದಿನ ವರ್ಷ ಕಲಿತ ಪಾಠಗಳು ಈ ವರ್ಷಕ್ಕೆ ದಾರಿದೀಪವಾಗಲಿ. ಹಳೆ ನೋವನ್ನು ಮರೆತು ನಲಿವಿನ ಹಾದಿ ಹಿಡಿಯೋಣ.

Advertisement

Udayavani is now on Telegram. Click here to join our channel and stay updated with the latest news.

Next