ಅಮ್ಮ ಈ ಪದದಲ್ಲೇ ಒಂದು ಶಕ್ತಿಯಿದೆ. ಅದೇನೇ ದುಃಖ, ಬೇಸರವಿದ್ದರೂ ಅಮ್ಮ ಎಂಬ ಒಂದು ಶಬ್ದ ಅದೆಲ್ಲವನ್ನೂ ಮರೆಸಿಬಿಡುತ್ತದೆ. ಅವಳಿಂದ ಅದೆಷ್ಟೇ ದೂರವಿದ್ದರು ಅವಳ ಹತ್ತಿರವಿರಬೇಕು ಅನಿಸುತ್ತದೆ. ಅಮ್ಮನೂ ಸಹ ಹಾಗೇ ಅವಳ ಎಲ್ಲಾ ದುಃಖ, ಸಂತೋಷವನ್ನು ಮರೆತು ಮಕ್ಕಳ ಖುಷಿಯೊಂದಿಗೆ ಬೆರೆತುಬಿಡುತ್ತಾಳೆ. ಅಮ್ಮನಿಗೆ ಅಮ್ಮನೇ ಸಾಟಿ.
ಅಮ್ಮ ನನ್ನ ಜೀವನದ ಬೆಸ್ಟ್ ಗೆಳತಿ. ದಿನಾ ಅವಳೊಂದಿಗೆ ಒಂದಿಷ್ಟು ಹರಟೆ, ವಾದ, ಜಗಳ, ತಮಾಷೆ, ಕೋಪ ಮಾಡಿಕೊಳ್ಳದೇ ಇದ್ದರೆ ಸಮಾಧಾನವೇ ಇಲ್ಲ. ಮಗಳಿಗಿಂತ ನನ್ನನ್ನು ಅವಳ ಸ್ನೇಹಿತೆಯೆಂದು ಬೆಳೆಸಿದಳು. ಆಗ ನಾನು ಏಳನೇ ಕ್ಲಾಸು ಇರಬೇಕು. ನನಗೆ ಮನೆಯಲ್ಲಿ ಅವರಿವರು ನೀಡಿ ಕೂಡಿಟ್ಟಿದ್ದ ಹಣದಿಂದ ಅಮ್ಮನ ಹುಟ್ಟಿದ ದಿನಕ್ಕೆ ಒಂದು ಪ್ರಕೃತಿ ಚಿತ್ರವಿರುವ 70 ರೂಪಾಯಿಯ ವಾಲ್ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದೆ. ಅದು ನಾನು ಅವಳಿಗೆ ಕೊಟ್ಟ ಮೊದಲ ಉಡುಗೊರೆ.
ಎಲ್ಲಾ ವಿಚಾರಗಳನ್ನು ಎಲ್ಲರೊಂದಿಗೆ ಹೇಳಿಕೊಳ್ಳಲಾಗುವುದಿಲ್ಲ, ಆದರೆ ಅಮ್ಮ ನನ್ನ ಬೇಕಾಗುವ, ಬೇಡವಾಗುವ ಎಲ್ಲಾ ಮಾತುಗಳಿಗೆ ಕಿವಿಯಾಗುತ್ತಾಳೆ. ನನ್ನ ಕನಸುಗಳಿಗೆ ಯಾವಾಗಲೂ ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದವಳು. ನಾನಿಡುವ ಸಣ್ಣ ಸಣ್ಣ ಆಸೆಗಳನ್ನು ಕಷ್ಟವಾದರೂ ಪೂರೈಸಿದವಳು. ಹೆಣ್ಣು ಮಗಳಾಗಿ ಧೈರ್ಯದಿಂದ ಹೇಗೆ ಬದುಕನ್ನು ಬದುಕಬೇಕೆಂದು ತಿಳಿಸಿದವಳು.
ಅಮ್ಮನೆಂದರೆ ಹಾಗೆ ಎಲ್ಲಿಲ್ಲದ ಪ್ರೀತಿ. ಯಾರೂ ಇಲ್ಲದಾಗ ಕೊನೆಗೆ ಮಕ್ಕಳೊಂದಿಗೆ ನಿಲ್ಲುವವಳು ತಾಯಿ. ಮಮತಾಮಯಿ ಎನ್ನುವ ಮಾತು ಅವಳಿಗೆ ಸೂಕ್ತವಾಗಿ ಹೊಂದುತ್ತದೆ. ಮಕ್ಕಳು ತಪ್ಪು ಮಾಡಿದಾಗ ಪ್ರೀತಿಯಿಂದ ಬುದ್ಧಿ ಹೇಳಿ ತಿಳಿ ಹೇಳುವ ತಾಳ್ಮೆ ತಾಯಿ ಎಂಬ ಮಮತಾಮಯಿಗೆ ಮಾತ್ರ ಸಾಧ್ಯ ಅನಿಸುತ್ತದೆ. ತನ್ನೆಲ್ಲಾ ದುಃಖಗಳನ್ನು ನುಂಗಿ ಸದಾ ತನ್ನ ಮಕ್ಕಳಿಗಾಗಿ ನಿಲ್ಲುವ, ದುಡಿಯುವ ಸಹೃದಯಿ ಅಮ್ಮಂದಿರಿಗೆ ಕೋಟಿಕೋಟಿ ನಮನ.
ವಿಧಾತ್ರಿ ಭಟ್, ಉಪ್ಪುಂದ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು ಉಜಿರೆ.