Advertisement

ಯಶಸ್ಸಿನ ಸಂತೋಷದ ಗುಟ್ಟು

11:46 PM Jul 21, 2019 | Sriram |

ಬದುಕು ನಾವಂದುಕೊಂಡಷ್ಟು ಸರಳವೂ ಅಲ್ಲ. ಸುಲಭವೂ ಅಲ್ಲ. ಹಲವು ಕ್ಲಿಷ್ಟವಾದ ಹಾದಿಯಲ್ಲಿ, ಎದುರಾಗುವ ಕಷ್ಟ ಕೋಟಲೆಗಳೆಂಬ ಮುಳ್ಳುಗಳನ್ನು ದಾಟಿಕೊಂಡು ಸಾಗುವ, ಮಧ್ಯೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಯುವುದು, ಕೊನೆಗೊಮ್ಮೆ ಆತ್ಮೋನ್ನತಿ ಹೊಂದುವುದರಲ್ಲಿಯೇ ಇರುವುದು ಬದುಕಿನ ಗುಟ್ಟು.

Advertisement

ಸಾರವರಿತು ನಡೆದಲ್ಲಿ ಮಾತ್ರವೇ ಸಂಸಾರದ ನೊಗ ಸರಿಯಾದ ರೀತಿಯಲ್ಲಿ ಜೀವನವೆಂಬ ಹೊಲವನ್ನು ಉತ್ತು, ಬಿತ್ತು ಒಳ್ಳೆಯ ಫ‌ಸಲನ್ನು ನೀಡುವುದು ಸಾಧ್ಯ. ಅದಿಲ್ಲವಾದಲ್ಲಿ ಕೇವಲ ಕಳೆ ಗಿಡಗಳಷ್ಟೇ ಬೆಳೆದು ಯಾವುದಕ್ಕೂ ಉಪಯೋಗವಿಲ್ಲದಂತಾಗಿ ಬಿಡುತ್ತದೆ. ಆದ್ದರಿಂದ ಅಂದುಕೊಂಡದ್ದನ್ನು ಸಾಧಿಸುವ ನಿಟ್ಟಿನಲ್ಲಿ ನಾವಿಡುವ ಹೆಜ್ಜೆ, ನಮ್ಮ ಪ್ರಯತ್ನಗಳ ಒಟ್ಟು ಫ‌ಲಿತಾಂಶವೇ ಉತ್ತಮ ಬದುಕು.

ಹಾಗಾದರೆ ಹೇಗೆ ನಾವು ಬದುಕೆಂಬ ಹೊಲವನ್ನು ಹಸನಾಗಿಸಬಹುದು ಎನ್ನುವ ಗೊಂದಲ ಎಲ್ಲರಿಗೂ ಇದ್ದೇ ಇರುತ್ತದೆ. ಅದನ್ನು ಪರಿಹರಿಸಿಕೊಂಡು ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿಯೇ ನಾವೆಲ್ಲರೂ ಎಡವುತ್ತಿರುವುದು. ಕೆಲವೊಮ್ಮೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಆಯ್ಕೆ ಮಾಡಿಕೊಂಡ ಹಾದಿಯೂ ನಮಗೆ ಸಂಕಷ್ಟಗಳ ಸರಮಾಲೆಯಾಗಿಯೇ ಪರಿಣಮಿಸುವುದೂ ಉಂಟು. ಹೀಗಾದಾಗೆಲ್ಲಾ ಎದೆಗುಂದದೆ ನಮ್ಮೆದುರಿಗಿರುವ ಇತರ ಹಾದಿಗಳ ಬಗ್ಗೆ ಕೊಂಚ ಎಚ್ಚರ ಮತ್ತು ತಾಳ್ಮೆಯಿಂದ ಯೋಚಿಸಿದೆವು ಎಂದಾದಲ್ಲಿ ಜೀವನ ನಳನಳಿಸುವುದು ಸಾಧ್ಯ. ಬದುಕು ಉನ್ನತಿಯತ್ತ ಸಾಗುವುದು ಸಾಧ್ಯ.

ಇನ್ನು ಕೆಲವೊಮ್ಮೆ ನಮ್ಮ ಸಂತೋಷದ ಕ್ಷಣಗಳನ್ನು ಸೃಷ್ಟಿಸಿಕೊಳ್ಳುವಲ್ಲಿ, ಆನಂದಿಸುವಲ್ಲಿ ಇತರರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದೂ ಕಾರಣವಾಗಿ ಬಿಡುತ್ತದೆ. ಅವನಿಗಿರುವ ಅದೃಷ್ಟ ನಮಗಿಲ್ಲವಲ್ಲಾ ಎಂದು ಕೊರಗುವುದರಲ್ಲಿ, ಹೊಟ್ಟೆ ಕಿಚ್ಚು ಪಡುವಲ್ಲಿಯೆ ನಮ್ಮ ಅಮೂಲ್ಯ ಸಮಯವನ್ನು ಕಳೆದು ಬಿಡುತ್ತೇವೆ. ಈ ವೇಳೆ ನಾವು ಮಾಡಬೇಕಾದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿಕೆ, ಮಾಡುವ ಕೆಲಸವನ್ನು ತುದಿ ಮುಟ್ಟಿಸುವಿಕೆ ಇವೆಲ್ಲದರಲ್ಲಿಯೂ ಎಡವುತ್ತೆವೆ. ಮನಃ ಶಾಂತಿಯ ಜತೆಗೆ, ಅವರ ಬಗ್ಗೆ ಯೋಚಿಸುವುದರಲ್ಲಿಯೇ ನಾವು ನಮ್ಮ ತಲ್ಲೀನತೆಯನ್ನು ಕಳೆದುಕೊಂಡು ಬಿಡುತ್ತೇವೆ. ಹೀಗಾದಾಗ ಗುರಿಯೆಡೆಗಿನ ಭರವಸೆಯ ಏಣಿ ಏರುವಲ್ಲಿಯೂ ಏರುಪೇರುಗಳನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಹೋಲಿಕೆ ಬೇಡ. ಭಗವಾನ್‌ ಶ್ರೀಕೃಷ್ಣ ಹೇಳುವಂತೆ ನಮಗೆ ಏನು ಸಿಗಬೇಕೋ, ಅದು ಸರಿಯಾದ ಸಮಯಕ್ಕೆ ನಮ್ಮೊಂದಿಗೆ ಲೀನವಾಗಿ ಬಿಡುತ್ತದೆ. ಇನ್ನು ನಮ್ಮದಲ್ಲದ್ದನ್ನು ನಾವು ಇಚ್ಛೆ ಪಟ್ಟೆವು ಎಂದಾದಲ್ಲಿ ಅಲ್ಲಿ ನಮಗೆ ಸಿಗುವುದು ಕೇವಲ ನೋವುಗಳು ಅಷ್ಟೇ, ಆದ್ದರಿಂದ ಆಗುವುದೆಲ್ಲಾ ಒಳ್ಳೆಯದಕ್ಕೆ, ಹಿಂದೆ ಆಗಿರುವುದೆಲ್ಲಾ ಒಳ್ಳೆಯದೇ, ಮುಂದಾಗಲಿರುವುದೂ ಒಳ್ಳೆಯದೇ ಎನ್ನುವ ನಂಬಿಕೆಯಲ್ಲಿ ಮುಂದಡಿಯಿಟ್ಟಾಗ ಯಶಸ್ಸು ಸಾಧ್ಯ.

ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಠೆ, ಛಲಗಳು ಮೇಳೈಸಿದಾಗಲಷ್ಟೇ ಗಮ್ಯ ಸೇರುವ ಅಧಮ್ಯ ಉತ್ಸಾಹ ನಮ್ಮಲ್ಲಿ ಉದ್ಭವಿಸುವುದಕ್ಕೆ ಸಾಧ್ಯವಾಗುವುದು. ಅದಕ್ಕೆ ಬೇಕಾಗಿರುವುದು ಎಲ್ಲರೊಳಗೊಂದಾಗುವ, ಎಲ್ಲರೊಳಗೊಂದುಗೂಡಿ ಸಾಗುವ ಮನಸ್ಸು ಅಷ್ಟೆ. ಈ ಮನಃಸ್ಥಿತಿಯನ್ನು ಸೃಷ್ಟಿಸಿಕೊಳ್ಳುವುದನ್ನು ಕಲಿತಾಗ ಯಶದ ಹಿಂದಿನ ಓಟ ಸರಳ ಮತ್ತು ಸುಲಭ ಎಂದೆನಿಸುತ್ತದೆ. ನಮ್ಮಿಂದ ಇನ್ನೊಬ್ಬರಿಗೂ ಪ್ರೇರಣೆ ದೊರೆಯುವುದು ಸಾಧ್ಯ. ಬೊಗಸೆ ತುಂಬ ಸಂತೋಷವೂ ನಮ್ಮ ಪಾಲಾಗುತ್ತದೆ.

Advertisement

-ಭುವನ ಬಾಬು, ಪುತ್ತೂರು

          
Advertisement

Udayavani is now on Telegram. Click here to join our channel and stay updated with the latest news.

Next