ವರ್ಷ 62, ಚಿತ್ರರಂಗದಲ್ಲಿ 38ವರ್ಷ, ಒಟು ಸಿನಿಮಾ r 127, ಕೈಯಲ್ಲಿ 10+,
ಜಾನರ್: ಹೈವೋಲ್ಟೇಜ್ ಎನರ್ಜಿ, ಆ್ಯಕ್ಷನ್ ಡ್ರಾಮಾ
ಬಿರುದು: ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್
ಕ್ರೆಡಿಟ್: ಯಂಗ್ ಆ್ಯಂಡ್ ಎನರ್ಜಿಟಿಕ್, ಎವರ್‌ಗ್ರೀನ್
ಇದು ಶಿವರಾಜ್ ಕುಮಾರ್ ಅವರ ಒಟ್ಟು ಕೆರಿಯರ್‌ನ ಒಂದು ನೋಟ. “ಆನಂದ್’ ಮೂಲಕ ಸಿನಿಜರ್ನಿ ಶುರು ಮಾಡಿದ ಶಿವರಾಜ್‌ಕುಮಾರ್ ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಯೇ ಇಲ್ಲ. ಸಾಲು ಸಾಲು ಸಿನಿಮಾಗಳನ್ನು ಮಾಡಿಕೊಂಡು, ಹೊಸ ಜಾನರ್‌ಗೆ ಒಗ್ಗಿಕೊಂಡು, ನವ ನಿರ್ಮಾಪಕ, ನಿರ್ದೇಶಕರ ಬೆನ್ನುತಟ್ಟಿಕೊಂಡು ಮುನ್ನುಗ್ಗುತ್ತಾ ಬಂದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಇಂದು 62ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಅನೇಕ ಹೊಸ ಸಿನಿಮಾಗಳ ಫಸ್ಟ್‌ಲುಕ್, ಟೀಸರ್ ಲಾಂಚ್ ಆಗಲಿದೆ. ಇದರ ಜೊತೆಗೆ ಹೊಸ ಸಿನಿಮಾಗಳು ಕೂಡಾ ಅನೌನ್ಸ್ ಆಗಲಿವೆ.
ಅದೆಷ್ಟೋ ಹೀರೋಗಳು ಒಂದು ಸಿನಿಮಾ ಬಳಿಕ ಮುಂದೇನು ಎಂದು ಯೋಚಿಸುವ ಈ ಸಿನಿಮಾದಲ್ಲಿ ಶಿವಣ್ಣ ಮಾತ್ರ, “ಮುಂದೆ ಯಾವ ಸಿನಿಮಾ ಕೈಗೆತ್ತಿಕೊಳ್ಳಲಿ’ ಎಂದು ಲೆಕ್ಕಾಚಾರ ಆಗುವಷ್ಟು ಸಿನಿಮಾಗಳು ಅವರ ಕೈಯಲ್ಲಿವೆ.
ವರ್ಷದಿಂದ ವರ್ಷಕ್ಕೆ ಅವರಿಗೆ ಸಿನಿಮಾ ಮಾಡುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಅದಕ್ಕೆ ಕಾರಣ ಶಿವಣ್ಣ ಅವರ ಗುಣ, ಸಿನಿಮಾ ತಂಡಕ್ಕೆ ಅವರು ಕೊಡುವ ಪ್ರೋತ್ಸಾಹ. ಒಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು, ಶಿವರಾಜಕುಮಾರ್ ಅಂದಿನಿಂದ ಇಂದಿನವರೆಗೂ ಯಾವತ್ತೂ ಖಾಲಿ ಕೂತಿದ್ದಾಗಲೀ, ಸುಮ್ಮನೆ ಶೂಟಿಂಗ್‌ಗೆ ಗ್ಯಾಪ್ ಕೊಟ್ಟಿದ್ದಾಗಲೀ ಇಲ್ಲ. ಚಿತ್ರತಂಡದ ಸಮಸ್ಯೆಯಿಂದ ಚಿತ್ರೀಕರಣ ತಡವಾಗಿರಬಹುದೇ ಹೊರತು, ಶಿವಣ್ಣನಿಂದ ಆದ ಉದಾಹರಣೆಯಿಲ್ಲ. ಅದೇ ಕಾರಣದಿಂದ ಅವರ ಕೈ ತುಂಬಾ ಸಿನಿಮಾಗಳಿರುತ್ತವೆ.
ವಿಭಿನ್ನ ಕಥೆಗಳಿಗೆ ಜೈ
ಶಿವರಾಜ್‌ಕುಮಾರ್ ಇಲ್ಲಿವರೆಗೆ 127 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಪಾತ್ರಗಳು, ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಕಾರಣದಿಂದ ಈಗ ಮತ್ತಷ್ಟು ಹೊಸದನ್ನು ಬಯಸುತ್ತಿದ್ದಾರೆ. ಈ ಹಿಂದೆ ಅವರೇ ಹೇಳಿದಂತೆ, “ಸಾಕಷ್ಟು ಚಿತ್ರಗಳು ಕೈಯಲ್ಲಿವೆ. ಹಾಗಂತ ಯಾವುದನ್ನೂ ತಿರಸ್ಕರಿಸುತ್ತಿಲ್ಲ. ನನ್ನ ಪಾಲಿಗೆ ಬರುತ್ತಿರುವ ಕಥೆಗಳೆಲ್ಲವೂ ಒಂದಕ್ಕೊಂದು ವಿಭಿನ್ನವಾಗಿಯೇ ಇವೆ. ಇಲ್ಲಿ ಸೋಲು-ಗೆಲುವು ಸಾಮಾನ್ಯ. ಆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ನಟನಿಗೆ ಇರಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ ತಾಳ್ಮೆ ಅನ್ನೋದಿರಬೇಕು. ಈಗಂತೂ ನನಗೆ ಫ್ರೀ ಆಗಿರೋದಕ್ಕೂ ಟೈಮ್ ಸಿಗುತ್ತಿಲ್ಲ. ಆದರೂ ಸಿನಿಮಾ ಮಾಡೋಲ್ಲ ಎಂದು ಹೇಳಿ, ಅವರ ಮನಸ್ಸು ನೋಯಿಸೋದ್ದಕ್ಕೆ ಇಷ್ಟಪಡಲ್ಲ’ ಎಂದಿದ್ದರು.
ಅದು ಸತ್ಯ ಕೂಡಾ. ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ದೇಶಕರು ಕೂಡಾ ಶಿವರಾಜ್‌ಕುಮಾರ್ ಅವರಿಗಾಗಿ ಒಂದು ಕಥೆ ಮಾಡುತ್ತಾರೆ, ಹೊಸ ರೀತಿಯಲ್ಲಿ ಶಿವಣ್ಣ ಅವರನ್ನು ತೋರಿಸಲು ಬಯಸುತ್ತಾರೆಂದರೆ ಅದು ಶಿವರಾಜ್‌ಕುಮಾರ್ ಅವರ ಶಕ್ತಿ, ಅವರ ಕಾಯ್ದುಕೊಂಡು ಬಂದಿರುವ ಹಿನ್ನೆಲೆ.
ಸೋಲು-ಗೆಲುವಿನ ಅಲೆಯಲಿ…
ಶಿವಣ್ಣ ಕೂಡಾ ತಮ್ಮ ಕೆರಿಯರ್‌ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ನಿರೀಕ್ಷಿತ ಮಟ್ಟ ತಲುಪದ ಸಿನಿಮಾಗಳನ್ನು ನೀಡಿದ್ದಾರೆ. ಆದರೆ, ಎರಡನ್ನೂ ಸಮನವಾಗಿ ಸ್ವೀಕರಿಸಿದ್ದಾರೆ. ಅವರೇ ಹೇಳಿದಂತೆ, “ಚಿತ್ರರಂಗದಲ್ಲಿ ಸುಮ್ಮನೆ ಬಂದು ಗೆಲ್ಲುತ್ತೇನೆ, ನನಗೆ ಬ್ಯಾಕಪ್ ಇದೆ ಎಂದರೆ ನಡೆಯುವುದಿಲ್ಲ. ಇಲ್ಲಿ ಅದೃಷ್ಟ, ಪ್ರತಿಭೆ ಇವೆರಡಕ್ಕಿಂತ ಮುಖ್ಯವಾಗಿ ಜನರ ಪ್ರೀತಿ ಬೇಕು. ಅದು ನನಗೆ ಸಿಕ್ಕಿದೆ ಎನ್ನಲು ಖುಷಿಯಾಗುತ್ತಿದೆ. ದೇವರ ಹಾಗೂ ಅಪ್ಪಾಜಿ ಆಶೀರ್ವಾದ ಹಾಗೂ ಜನರ ಪ್ರೀತಿ ಇಲ್ಲದಿರುತ್ತಿದ್ದರೆ ಚಿತ್ರರಂಗದಲ್ಲಿ ನಾನಿವತ್ತು ಇಷ್ಟು ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ ‘ ಎನ್ನುತ್ತಾರೆ.
ಇಂದು ಅಭಿಮಾನಿಗಳಿಗೆ ಶಿವಣ್ಣ ಸಿಗಲ್ಲ
ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಶಿವಣ್ಣ ಸಿಗಲ್ಲ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. “ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ್ಮ ಜೊತೆ ಭೈರತಿ ರಣಗಲ್ ಇರ್ತಾನೆ, ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ…ನಿಮ್ಮ ಆಶೀರ್ವಾದ ಸದಾ ಇರಲಿ’ ಎಂದಿದ್ದಾರೆ.
ಫಸ್ಟ್‌ಲುಕ್‌ನಲ್ಲಿ 45
ಅರ್ಜುನ್ ಜನ್ಯ ನಿರ್ದೇಶನದ “45′ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್‌ಲುಕ್ ಇಂದು ರಿಲೀಸ್ ಆಗುತ್ತಿದೆ. ಈ ಕುರಿತು ಮಾತನಾಡಿರುವ ಶಿವಣ್ಣ, “ಈ ಸಲದ ಹುಟ್ಟುಹಬ್ಬಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹು ನಿರೀಕ್ಷಿತ 45 ಚಿತ್ರದ ನನ್ನ ಫಸ್ಟ್‌ಲುಕ್ ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಮೊದಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ’ ಎಂದಿದ್ದಾರೆ.
ಭೈರತಿ ತೀರ್ಪು
ಶಿವರಾಜ್‌ಕುಮಾರ್ ಅವರು ತಮ್ಮದೇ ಗೀತಾ ಪಿಕ್ಚರ್ಸ್‌ನಡಿ ನಿರ್ಮಿಸಿ, ನಟಿಸುತಿರುವ “ಭೈರತಿ ರಣಗಲ್’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಈ ಟೀಸರ್ ಅನ್ನು ಚಿತ್ರತಂಡ ಮೊದಲ ತೀರ್ಪು ಎಂದು ಚಿತ್ರತಂಡ ಕರೆದುಕೊಂಡಿದೆ. ಅಂದಹಾಗೆ, ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಲಾಯರ್ ಗೆಟಪ್‌ನಲ್ಲೂ ಶಿವಣ್ಣ ಕಾಣಿಸಿಕೊಂಡಿದ್ದಾರೆ.
ಉತ್ತರಕಾಂಡದ ಮಾಲೀಕ
ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಿದೆ. “ಮಾಲೀಕ’ ಎಂಬ ಅವತಾರದಲ್ಲಿ ಸಖತ್ ರಗಡ್ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿದೆ.
ಭೈರವ ಯೋಧ
ಹೇಮಂತ್ ರಾವ್ ನಿರ್ದೇಶನದ “ಭೈರವನ ಕೊನೆ ಪಾಠ’ ಚಿತ್ರದ ಫಸ್ಟ್‌ಲುಕ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಚಿತ್ರದಲ್ಲಿ ಶಿವರಾಜ್‌ಕುಮಾರ್ ಯೋಧನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗಣೇಶ್ ಜೊತೆ ಶಿವಗಣ
ಶಿವರಾಜ್‌ಕುಮಾರ್ ಅವರ ಹೊಸ ಸಿನಿಮಾಕ್ಕೆ “ಶಿವಗಣ’ ಎಂದು ಟೈಟಲ್ ಇಡಲಾಗಿದೆ. ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದು, ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಟ ಗಣೇಶ್ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ರವಿಪ್ರಕಾಶ್ ರೈ