ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮದಿನದ ಸಂಭ್ರಮಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ವಿವಿಧ ಪಕ್ಷಗಳ ರಾಜಕೀಯ ನಾಯಕರ ಸಹಿತ ಬಾಲಿವುಡ್ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಹಲವರು ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಬಾಲಿವುಡ್ ತಾರೆಯರ ಪೈಕಿ, ಅಮೀರ್ ಖಾನ್, ಕರಣ್ ಜೋಹರ್, ಸಲ್ಮಾನ್ ಖಾನ್, ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ಅನುಪಮ್ ಖೇರ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಪ್ರಧಾನಿಯವರಿಗೆ ಜನ್ಮದಿನದ ಶುಭ ಹಾರೈಕೆಗಳನ್ನು ನೀಡಿದ್ದಾರೆ.
ಇವರಲ್ಲಿ ನಟಿ ಕಂಗನಾ ರಾಣಾವತ್ ಮತ್ತು ಅನುಪಮ್ ಖೇರ್ ಅವರು ವಿಡಿಯೋ ಸಂದೇಶದ ಮೂಲಕ ಮೋದಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
Related Articles
ನಟಿ ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್, ಸಲ್ಮಾನ್ ಖಾನ್ ಮತ್ತು ಲೇಖಕ ಚೇತನ್ ಭಗತ್ ಅವರು ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಪೋಸ್ಟ್ ಮಾಡಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಇನ್ನು ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರೂ ಸಹ ಪ್ರಧಾನಿಯವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ‘ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ…’ ಎಂದು ಕೊಹ್ಲಿ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ಶಿವಸೇನೆಯೊಂದಿಗಿನ ತಿಕ್ಕಾಟದ ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ಕಂಗನಾ ರಾಣಾವತ್ ಅವರು ಪ್ರಧಾನಿಯವರ ಜನಪ್ರಿಯತೆಯನ್ನು ಸ್ಮರಿಸಿಕೊಂಡು ವಿಡಿಯೋ ಸಂದೇಶದ ಮೂಲಕ ಅವರಿಗೆ ಶುಭ ಹಾರೈಸಿದ್ದಾರೆ.
‘ಮಾನ್ಯ ಪ್ರಧಾನಮಂತ್ರಿಯವರೇ ನಿಮಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು. ನನಗೆ ನಿಮ್ಮೊಂದಿಗೆ ಮಾತನಾಡುವ ಅವಕಾಶ ಇದುವರೆಗೆ ಸಿಕ್ಕಿಲ್ಲ. ಎರಡು ಮೂರು ಬಾರಿ ಭೇಟಿಯಾಗುವ ಅವಕಾಶ ಸಿಕ್ಕಿದ್ದರೂ ಅದರಲ್ಲಿ ನಿಮ್ಮ ಜೊತೆ ಫೊಟೋ ತೆಗೆಸಿಕೊಳ್ಳುವ ಅವಕಾಶವಷ್ಟೇ ನನಗೆ ಲಭಿಸಿತ್ತು. ಈ ದೇಶದ ಜನ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಇನ್ನೊಂದೆಡೆ ನಿಮ್ಮನ್ನು ವಿರೋಧಿಸುವವರೂ ಇದ್ದಾರೆ. ಅದರಲ್ಲೂ ತುಂಬಾ ಕೆಟ್ಟ ಶಬ್ದಗಳಿಂದ ನಿಮ್ಮನ್ನು ನಿಂದಿಸುತ್ತಿರುವವರನ್ನು ನಾವು ಕಾಣುತ್ತಲೇ ಇದ್ದೇವೆ. ಬೇರೆ ಯಾವ ಪ್ರಧಾನಮಂತ್ರಿಯೂ ನಿಮ್ಮಷ್ಟು ನಿಂದನೆಗೊಳಗಾಗಿರಲಿಕ್ಕಿಲ್ಲ. ಆದರೆ, ಆ ವರ್ಗ ತುಂಬಾ ಸಣ್ಣದು ಎಂದು ನಿಮಗೂ ಗೊತ್ತಿದೆ ಮತ್ತು ಅವರೆಲ್ಲಾ ಒಂದು ಅಪಪ್ರಚಾರದ ದುರುದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ. ಆದರೆ ಈ ದೇಶದ ಸಾಮಾನ್ಯ ಪ್ರಜೆ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆದರಿಸುತ್ತಾರೆ. ಅವರೆಲ್ಲಾ ತೋರಿಸುವ ಇಷ್ಟು ಪ್ರೀತಿ, ಸಮ್ಮಾನ, ಭಕ್ತಿ ಬಹುಷಃ ಬೇರಿನ್ಯಾವ ಪ್ರಧಾನಿಗೂ ಸಿಕ್ಕಿರಲಾರದು. ಮತ್ತು ಅವರೆಲ್ಲರೂ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲದಿರುವ ಕೋಟ್ಯಂತರ ಭಾರತೀಯರಾಗಿದ್ದಾರೆ, ಮತ್ತು ಅವರ ಶುಭ ಸಂದೇಶ ನಿಮ್ಮನ್ನು ತಲುಪಲಾರದು ಹಾಗಾಗಿ ಅವರೆಲ್ಲರ ಧ್ವನಿಯಾಗಿ ನಾನಿಂದು ಈ ವಿಡಿಯೋ ಮೂಲಕ ನಿಮಗೆ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದೇನೆ ಮತ್ತು ದೇವರು ನಿಮಗೆ ದೀರ್ಘಾಯುಷ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂಬ ಒಂದು ನಿಮಿಷದ ಅವಧಿಯ ವಿಡಿಯೋವನ್ನು ಕಂಗನಾ ಪೋಸ್ಟ್ ಮಾಡಿದ್ದಾರೆ.
ಕಂಗನಾ ಅವರ ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ‘ಜನ್ಮದಿನದ ಶುಭಾಶಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು ಕಂಗನಾ ಜೀ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ರಾಜಿನಾಮೆ