Advertisement

ಫೇಸ್‌ಬುಕ್‌ ನಾರದ ಮುನಿ

12:30 AM Mar 12, 2019 | |

ನಾನು ಕಂಡಂತೆ ಫೇಸ್‌ಬುಕ್‌ ಈ ಕಾಲದ ನಾರದ ಅವತಾರಿ. ಇದಕ್ಕೆ ಗೊತ್ತಿಲ್ಲದ ವಿಚಾರಗಳೇ ಇಲ್ಲ. ಯಾರ್ಯಾರಧ್ದೋ ಉಸಾಬರಿಯೇ ಇದರ ಉಸಿರು. ಇದರೊಳಗೆ ಪದಾರ್ಪಣೆ ಮಾಡುವ ಮೊದಲು ನಿಮ್ಮ ಕುಲ, ಗೋತ್ರ, ನಕ್ಷತ್ರ, ಜಾತಕವನ್ನು ಪರಾಂಬರಿಸುವಂತೆ ಪ್ರತಿಯೊಬ್ಬರ ಸಕಲ ಖಾಸಗಿ ವಿವರವನ್ನು ನುಂಗಿಕೊಂಡೇ ತನ್ನ ಜಾಲಕ್ಕೆ ಬೀಳಿಸುತ್ತದೆ…

Advertisement

ನಾರದ ಮುನಿಗಳು! ಈ ಬ್ರಹ್ಮಾಂಡದ ಮೊದಲ ರಿಪೋರ್ಟರ್‌ ಅಂತಲೇ ಇವರನ್ನು ಕರೀತಾರಲ್ವಾ? ಈ ನಾರದರಿಗೆ ಸಕಲವೂ ಗೊತ್ತು. ಸುರ- ಅಸುರರ ಕಾಲದಲ್ಲಿ ಅವರ ಬಗ್ಗೆ ಇವರಿಗೆ ಚಾಡಿ ಹೇಳುತ್ತ, ಇವರ ಬಗ್ಗೆ ಅವರಿಗೆ ದೂರು ಹೇಳುತ್ತಾ, ಇಬ್ಬರ ನಡುವೆ ಪ್ರತಿಯೊಂದು ವಿಷಯದಲ್ಲೂ ಪೈಪೋಟಿ ಇರುವಂತೆ ಬ್ಯಾಲೆನ್ಸ್‌ ಮಾಡುವುದರಲ್ಲಿ ನಾರದರದ್ದು ಎತ್ತಿದ ಕೈ. ಇಬ್ಬರ ನಡುವೆ ತಂದಿಟ್ಟು ಅವರು ತಮಾಷೆ ನೋಡುವ ಪರಿ ಅನನ್ಯ. ಏನೇ ಜಗಳ ತಂದಿಟ್ಟರೂ ಅದರ ಹಿಂದೆ ಒಂದು ಉದ್ದೇಶ ಅಂತೂ ಇದ್ದೇ ಇತ್ತು, ಬಿಡಿ.

ನಾನು ಕಂಡಂತೆ ಈ ಫೇಸ್‌ಬುಕ್‌ ಈ ಕಾಲದ ನಾರದ ಅವತಾರಿ. ಇದಕ್ಕೆ ಗೊತ್ತಿಲ್ಲದ ವಿಚಾರಗಳೇ ಇಲ್ಲ. ಯಾರ್ಯಾರಧ್ದೋ ಉಸಾಬರಿಯೇ ಇದರ ಉಸಿರು. ಇದರೊಳಗೆ ಪದಾರ್ಪಣೆ ಮಾಡುವ ಮೊದಲು ನಿಮ್ಮ ಕುಲ, ಗೋತ್ರ, ನಕ್ಷತ್ರ, ಜಾತಕವನ್ನು ಪರಾಂಬರಿಸುವಂತೆ ಪ್ರತಿಯೊಬ್ಬರ ಸಕಲ ಖಾಸಗಿ ವಿವರವನ್ನು ನುಂಗಿಕೊಂಡೇ ತನ್ನ ಜಾಲಕ್ಕೆ ಬೀಳಿಸುತ್ತದೆ. ಸುಳ್ಳು ಜಾತಕ ಕೊಟ್ಟ ಹಾಗೆ, ಸುಳ್ಳು ಮಾಹಿತಿ ಕೊಟ್ಟು, ಇದರೊಳಗೆ ಸೇರಿಕೊಳ್ಳುವವರೂ ಇದ್ದಾರೆ, ಅದು ಬೇರೆ ಮಾತು ಬಿಡಿ. ಗೊತ್ತಿದ್ದವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ ಸ್ನೇಹಿತರಾಗಿಬಿಟ್ಟರೆ ಮುಗಿಯಿತು. ಅಲ್ಲಿಂದ ಮುಂದೆ ಸ್ನೇಹಿತರು, ಅವರ ಸ್ನೇಹಿತರ ಬಗ್ಗೆ ಸಜೆಶನ್‌ ಕೊಡುತ್ತಲೇ ಇರುತ್ತದೆ. ಅಂಗಡಿಗಳಲ್ಲಿ, ಜಾತ್ರೆಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಗೊಂಬೆಗಳನ್ನು ಕೀ ಕೊಟ್ಟು ಅಡಿಸಿ ಗಮನ ಸೆಳೆದಂತೆ ಅದು. ಯಾರ್ಯಾರು ಫೇಸ್‌ಬುಕ್‌ನಲ್ಲಿ ಇದ್ದಾರೆ, ಯಾರಿಗೆ ಎಷ್ಟು ಮ್ಯೂಚುಯಲ್‌ ಫ್ರೆಂಡ್ಸ್‌ ಇದ್ದಾರೆ ಎಂದು ಎಫ್ಬಿ ಆನ್‌ಲೈನ್‌ ಬಂದಾಗ ನಿಮಿಷಕ್ಕೊಮ್ಮೆ ಕಣ್ಣಮುಂದೆ ಅವರ ಪ್ರೊಫೈಲ್‌ ಹಾದು ಹೋಗುತ್ತದೆ. ರಿಕ್ವೆಸ್ಟ್‌ ಒಪ್ಪಿಕೊಳ್ಳದಿದ್ದರೆ ಅವರ ಹಿಂಬಾಲಿಸುವಂತೆ ಮಾಡಿ ತೃಪ್ತಿಗೊಳಿಸುತ್ತದೆ. ಜಗತ್ತಿನ ಯಾವ ಮೂಲೆಯಿಂದಾದರೂ ಗೆಳೆತನ ಸಂಪಾದಿಸುವ ಭಾಗ್ಯ ಈ ಫೇಸ್‌ಬುಕ್ಕಿನಿಂದ.

ಆನ್‌ಲೈನ್‌ನಲ್ಲಿ ಇದ್ದವರನ್ನು ಹಸಿರು ಚುಕ್ಕೆಯಿಂದ ಸಿಕ್ಕಿಹಾಕಿಸುತ್ತದೆ. ಎಷ್ಟು ಹೊತ್ತಿಗೆ ಮುಂಚೆ ಆನ್‌ಲೈನ್‌ ಇದ್ದರು ಎಂದು ಸಮಯವನ್ನೂ ತೋರಿಸುತ್ತಿರುತ್ತದೆ. ಮೊಬೈಲ್‌ನಿಂದ ಆಪರೇಟ್‌ ಮಾಡುತ್ತಿದ್ದಾರೋ ಅಥವಾ ಡೆಸ್ಕ್ಟಾಪ್‌ನಿಂದಲೋ? ಅದೂ ಗೊತ್ತಾಗುತ್ತದೆ. ಮೆಸೆಂಜರ್‌ನಲ್ಲಿ ಯಾರು ಆ್ಯಕ್ಟಿವ್‌ ಇದ್ದಾರೆ ಎಂದು ತೋರುವ ಒಂದು ಹಸಿರು ನಿಶಾನೆ ಮೂಡಿಸುತ್ತಿರುತ್ತದೆ. ಯಾರ ಫೋಸ್ಟ್‌ಗೆ ಯಾರು ಲೈಕ್‌ ಮಾಡಿದರು, ಯಾರು ಯಾವ ಕಮೆಂಟು ಮಾಡಿದರು, ಯಾರು ಶೇರ್‌ ಮಾಡಿದರು, ಯಾವ ಪಬ್ಲಿಕ್‌ ಪೇಜ್‌ಗೆ ಯಾರೆಲ್ಲಾ ಸದಸ್ಯರಾಗಿದ್ದಾರೆ ಎಂಬ ಮಾಹಿತಿ ನೀಡುತ್ತಲೇ ಹೋಗುತ್ತದೆ. ಬಂದ ಫ್ರೆಂಡ್ಸ್‌ ರಿಕ್ವೆಸ್ಟ್‌ಗಳನ್ನು ಒಪ್ಪಿಕೊಳ್ಳುತ್ತೀರೋ, ತೆಗೆದುಹಾಕುತ್ತೀರೋ ಎಂದು ಪದೇಪದೆ ತೋರಿಸುತ್ತಾ ಪರಿಚಯಿಸಿಬಿಡುತ್ತದೆ. ಪ್ರತಿಯೊಬ್ಬರ ಹುಟ್ಟುಹಬ್ಬ, ಆನಿವರ್ಸರಿ ಮುಂತಾದ ವಿಚಾರಗಳನ್ನು ಪ್ರತಿದಿನ ಗಂಟೆ ಬಾರಿಸಿ ತೋರಿಸಿ ಅವರಿಗೆ ವಿಶ್‌ ಮಾಡಿ ಅಂತ ಪ್ರೇರೇಪಿಸುತ್ತಿರುತ್ತದೆ. ಗೆಳೆಯರಾದವರೊಡನೆ ಫ್ರೆಂಡ್ಸವರ್ಸರಿ ಕೂಡ ವಿಡಿಯೋ ಆಗಿ ವರ್ಷಕ್ಕೊಮ್ಮೆ ಮೂಡಿಬಂದು ಅಚ್ಚರಿಗೊಳಿಸುತ್ತದೆ. ನಾವು ಹಾಕಿದ ಪೋಸ್ಟ್‌ಗಳಿಗೆ ಸಿಕ್ಕ ಲೈಕುಗಳನ್ನೂ ಸೆಲೆಬ್ರೇಟ್‌ ಮಾಡಿ ತೋರಿಸುತ್ತದೆ.

ಇನ್ನು ಪೋಸ್ಟ್‌ ಮಾಡಿದವರಿಗೆ ಯಾರಿಗೆಲ್ಲಾ ತೋರಿಸಬೇಕು, ಬರೀ ನಿಮಗಷ್ಟೆಯೋ ಅಥವಾ ನಿಮ್ಮ ಸ್ನೇಹಿತರಿಗೋ, ಸ್ನೇಹಿತರ ಸ್ನೇಹಿತರಿಗೋ, ಇಲ್ಲವಾದರೆ ಇಡೀ ಭೂಗೋಳಕ್ಕೋ ಎಂದು ವಿಚಾರಿಸಿಯೇ ಇದು ಮುಂದುವರಿಯುತ್ತದೆ. ಅದನ್ನು ಮರೆಮಾಚಲೂ, ಅದರ ಬಗ್ಗೆ ಏನಾದರೂ ಬರೆಯಲೂ ಆಯ್ಕೆ ನೀಡುತ್ತದೆ. ಇದರಲ್ಲಿ ಪ್ರೀತಿಯುಂಟು, ಸ್ನೇಹವುಂಟು, ಸಂಬಂಧವುಂಟು, ವೈಚಾರಿಕತೆಯುಂಟು, ಜ್ಞಾನವೂ ಇದೆ, ಕೆಲವೊಮ್ಮೆ ಮೂಢನಂಬಿಕೆಗಳೂ ವಿಜೃಂಭಿಸುತ್ತವೆ. ಕೆಲವೊಮ್ಮೆ ಜಗಳಗಳೂ ತಾರಕಕ್ಕೇರುವುದುಂಟು (ಈಗೀಗ ಇದೇ ಜಾಸ್ತಿ). ಪ್ರತಿಯೊಂದರಲ್ಲೂ ಸಾಧಕ- ಬಾಧಕ ಇರುವಂತೆ ಇಲ್ಲಿಯೂ ಇದೆ. ಒಳ್ಳೆಯದನ್ನು ಹೆಕ್ಕಿಕೊಂಡರೆ ಸುಕೃತ, ಕೆಟ್ಟದ್ದಕ್ಕೆ ಜೋತು ಬಿದ್ದರೆ ಪಾತಾಳವೇ ಗತಿ. ಒಟ್ಟಿನಲ್ಲಿ ಒಮ್ಮೆ ಇದರ ಕಪಿಮುಷ್ಟಿಯಲ್ಲಿ ಸಿಕ್ಕರೆ ಮುಗಿಯಿತು, ಅದೊಂದು ರೀತಿಯ ಮಾಯಾಜಾಲದಂತೆ. ಅಲ್ಲಿಂದ ಹೊರಬರುವುದು ನಿಜಕ್ಕೂ ಕಷ್ಟ ಕಷ್ಟ.

Advertisement

ನಳಿನಿ ಟಿ. ಭೀಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next