Advertisement

ತೀರದ ಸಂತಸ

08:54 PM May 30, 2019 | mahesh |

ಇನ್ನೇನು ನಾಲ್ಕನೆಯ ಸೆಮಿಸ್ಟರ್‌ ತರಗತಿಗಳು ಮುಗಿಯಬೇಕು ಅನ್ನುವಷ್ಟರಲ್ಲಿ, ನನ್ನ ಸ್ನೇಹಿತರ ಗುಂಪಿನಲ್ಲಿ ಟ್ರಿಪ್‌ಗೆ ಹೋಗುವ ಬಗ್ಗೆ ವಿಚಾರ ವಿನಿಮಯಗಳು ತಲೆ ಎತ್ತಿದ್ದವು. ಅದಕ್ಕಾಗಿ ಸೂಕ್ತ ತಾಣಗಳ ಹುಡುಕಾಟ ಶುರುವಾಯಿತು. ಹಲವು ತಾಣಗಳು ಪಟ್ಟಿಗೆ ಸೇರ್ಪಡೆಗೊಳ್ಳುತ್ತ ಹೋದವು.

Advertisement

ನಂತರ ಒಂದೊಂದು ತಾಣಗಳಲ್ಲಿ ಒಂದೊಂದು ಲೋಪಗಳು ಕಂಡುಬಂದು ಒಂದೊಂದೇ ತಾಣಗಳನ್ನು ಪಟ್ಟಿಯಿಂದ ಕೈಬಿಡಲಾಯಿತು. ಕೊನೆಗೆ ಉಳಿದುಕೊಂಡದ್ದು ಸಸಿಹಿತ್ಲು ಬೀಚ್‌ ಮಾತ್ರ. ಗ್ರಾಮೀಣ ಪ್ರದೇಶದಲ್ಲಿ ಇರುವ ಈ ಬೀಚ್‌ಗೆ ಯಾರೂ ಹೋಗಿರಲಿಲ್ಲ. ಹಾಗಾಗಿ, ಸಸಿಹಿತ್ಲು ಬೀಚ್‌ಗೆ ಹೋಗುವುದೆಂದು ನಿರ್ಧಾರವಾಯಿತು. ನಂತರ ಒಂದು ದಿನ ಮುಂಜಾನೆ ನಾವು ಹದಿನಾಲ್ಕು ಮಂದಿ ಪುತ್ತೂರಿನಿಂದ ಹೊರಟೆವು. ಸ್ಟೇಟ್‌ ಬ್ಯಾಂಕ್‌ ಬಸ್ಸುನಿಲ್ದಾಣಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿಯಬೇಕಿತ್ತು. ಅದು ತುಂಬಾ ದೀರ್ಘ‌ ಪ್ರಯಾಣ ಆಗಿತ್ತು. ಬಸ್ಸು ಪ್ರಯಾಣ ಎಲ್ಲರನ್ನೂ ಆಯಾಸಕ್ಕೆ ದೂಡಿತ್ತು. ನಾವು ಮುಕ್ಕ ಎಂಬಲ್ಲಿ ಬಸ್ಸು ಇಳಿದಾಗ ಮಧ್ಯಾಹ್ನ 12.30. ಈ ಮಟ ಮಟ ಮಧ್ಯಾಹ್ನದ ಹೊತ್ತಿಗೆ ಯಾರು ಬೀಚ್‌ಗೆ ಹೋಗುತ್ತಾರೆ ಅಂತ ನಮಗೆಲ್ಲರಿಗೂ ಅನ್ನಿಸಿತು. ಆದರೂ ಊಟ ಮುಗಿಸಿ ಹೋಗೋಣ ಎಂದೆನಿಸಿ ಒಂದು ಹೋಟೆಲ್‌ಗೆ ಹೋದೆವು. ಅಲ್ಲಿ ಊಟ ಮಾಡಿ ನಂತರ ಆಟೋ ಹಿಡಿದು ಬೀಚ್‌ ಕಡೆಗೆ ತೆರಳಿದೆವು.

ಆ ಬೀಚ್‌ ಅತ್ಯಂತ ಮನೋಹರವಾಗಿತ್ತು. ನಾವು ಹೋಗಿದ್ದು ಮಧ್ಯಾಹ್ನವಾದರೂ ಬಿಸಿಲಿನ ತೀಕ್ಷ್ಣತೆ ಇರಲಿಲ್ಲ. ಅಲ್ಲಿನ ಪರಿಸರ ಮನಸ್ಸಿಗೆ ಮುದ ನೀಡುವ ಹಾಗಿತ್ತು. ಸಸಿಹಿತ್ಲು ಬೀಚ್‌ ಸಮುದ್ರ ಮತ್ತು ನದಿ ಸೇರುವ ಸ್ಥಳ.

ಇಲ್ಲಿಗೆ ಬರುವ ಜನರ ಸಂಖ್ಯೆ ಕಡಿಮೆ ಇರುವ ಕಾರಣ ಈ ಬೀಚ್‌ ಸ್ವತ್ಛ ಹಾಗೂ ಸುಂದರವಾಗಿ ಕಂಗೊಳಿಸುತ್ತದೆ. ನಿಧಾನವಾಗಿ ಹರಿದು ಬರುವ ಅಲೆಗಳು, ಅವು ಬಂಡೆಗೆ ಬಡಿವಾಗ ನೀಡುವ ಶಬ್ದ, ಅಲೆಗಳು ದಡಕ್ಕೆ ತಂದು ಹಾಕುವ ವಿವಿಧ ರೀತಿಯ ಚಿಪ್ಪುಗಳು, ಅಲ್ಲಿರುವ ನಾನಾ ರೀತಿಯ ಕಲ್ಲುಗಳು- ಹೀಗೆ ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮರಳಾಗಿ ನಮ್ಮನ್ನು ನಾವೇ ಮೈಮರೆತಿ¨ªೆವು. ಕಲುಷಿತಗೊಳ್ಳದ ನೀರು, ಅಲ್ಲಲ್ಲಿ ಕಾಣಸಿಗುವ ಕಲ್ಲುಬಂಡೆಗಳು, ಜನರಿಲ್ಲದೆ ನಿಶ್ಯಬ್ದವಾಗಿದ್ದ ಆ ಪ್ರದೇಶ ನಮ್ಮೆಲ್ಲರ ಮನಸೂರೆಗೊಂಡದ್ದು ಸುಳ್ಳಲ್ಲ. ಹೀಗೆ ಅತ್ತಿಂದಿತ್ತ ಓಡಾಡುತ್ತ ಆ ಪರಿಸರದಲ್ಲಿ ಸಮಯ ಹೋದದ್ದೇ ತಿಳಿಯಲಿಲ್ಲ. ಸಂಜೆಯವರಿಗೆ ಪ್ರಕೃತಿಯ ಮಡಿಲಲ್ಲಿ ಸಂಭ್ರಮಿಸಿ ನಂತರ ನಾವು ಅಲ್ಲಿಂದ ಹೊರಡಲನುವಾದೆವು.

ಆ ಒಂದು ದಿನ ನನ್ನ ಸ್ನೇಹಿತರೊಂದಿಗೆ ಕಳೆದ ಮಧುರ ಕ್ಷಣಗಳು ನನ್ನ ಮನಸ್ಸಿನಿಂದ ಮಾಸಲು ಅಸಾಧ್ಯ. ಅದೊಂದು ಅದ್ಭುತವಾದ ದಿನ ಆಗಿತ್ತು. ಮತ್ತೂಮ್ಮೆ ಆ ದಿನ ಮರುಕಳಿಸಲಿ ಎಂದು ಹಂಬಲಿಸುತ್ತಿದ್ದೇನೆ. ಅಂದ ಹಾಗೆ ಬೀಚ್‌ಗೆ ತೆರಳುವ ಗೆಳೆಯ-ಗೆಳತಿಯರಿಗೊಂದು ವಿನಂತಿ. ನಾವು ಎಷ್ಟೇ ಸಂತೋಷದಲ್ಲಿ ಮೈಮರೆತರೂ ಕಡಲ ಬದಿಯಲ್ಲಿದ್ದೇವೆ ಎಂಬ ಎಚ್ಚರವನ್ನು ಮರೆಯಬಾರದು. ಅಲೆಗಳೊಂದಿಗೆ ಆಟವಾಡಲು ತೆರಳಿದರೆ ಅಪಾಯ ಸಂಭವಿಸುವುದೂ ಇದೆ. ಹಾಗಾಗದ ಹಾಗೆ ಕಾಳಜಿವಹಿಸಬೇಕು.

Advertisement

ಸಹನಾ ರೈ , ದ್ವಿತೀಯ ಬಿ.ಎಸ್ಸಿ., ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next