Advertisement

ಹಾಸ್ಟೆಲ್‌ನಲ್ಲಿ ಸಿಕ್ಕ ಹ್ಯಾಪಿನೆಸ್‌ ಕಥೆ

01:35 PM Jul 21, 2020 | mahesh |

ಕೆಲವೊಂದು ಸ್ಥಳಗಳು ಹಲವು ರೀತಿಯ ಪಾಠ ಹೇಳಿಕೊಡುತ್ತವೆ. ಪರಿಶುದ್ದ ಸ್ನೇಹ, ಸಂಬಂಧ, ಆಕಸ್ಮಿಕ ಭೇಟಿಗಳು ನಮ್ಮ ಜೀವನದ ತಿರುವನ್ನು ಬದಲಾಯಿಸುವಲ್ಲಿ ಪ್ರಮುಖವಾಗುತ್ತವೆ. ಜೀವನದಲ್ಲಿ ಒಮ್ಮೆಯಾದ್ರು ಹಾಸ್ಟೆಲ್‌ ಲೈಫ್ ಅನ್ನೋದನ್ನ ಅನುಭವಿಸಬೇಕು ಅನ್ನೋ ಆಸೆ ನನಗಿತ್ತು. ವಿವಿ ಕ್ಯಾಂಪಸ್‌ ನೋಡಬೇಕು ಅನ್ನೋ ಆಸೆಯೊಂದಿಗೆ ತೆರಳಿದ ನನಗೆ ಅಲ್ಲೇ ನನ್ನ ಶಿಕ್ಷಣ ಮುಂದುವರಿಸುವುದು ಅನಿವಾರ್ಯವೂ ಆಯ್ತು.

Advertisement

ಉಳಿದುಕೊಂಡದ್ದು ವಿಶಾಲವಾದ ಹಾಸ್ಟೆಲೊಂದರಲ್ಲಿ. ಹೊತ್ತು ಹೊತ್ತಿಗೆ ಊಟ, ಮುದ್ದಾದ ಒಂದಿಷ್ಟು ಬೆಕ್ಕಿನ ಮರಿಗಳು, ಗಾರ್ಡನ್‌, ಸ್ವಚ್ಛಂದವಾಗಿ ಬೀಸುವ ಗಾಳಿ, ಆಗಾಗ ಬರುವ ಮಳೆಯ ತಂಪಿನ ಜತೆ ಇಂಪು ನೀಡುತ್ತಿದ್ದ ಹಕ್ಕಿಗಳು, ಹೊಸ ಮುಖಗಳ ಪರಿಚಯ, ಇವೆಲ್ಲದರ ನಡುವೆ ಕಳೆದುಕೊಂಡಿದ್ದ ಖುಷಿಯನ್ನು ಮತ್ತೆ ಪಡೆದುಕೊಂಡೇನೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿತ್ತು.

ಸಮಯಸಾಧಕರ ಸ್ನೇಹದಿಂದ ದಂಗಾಗಿ ಹೋಗಿದ್ದ ನನ್ನ ಮನಸ್ಸು ಮರಗಟ್ಟಿತ್ತು. ಈ ನಡುವೆ ರಕ್ತ ಸಂಬಂಧಗಳಿಗೂ ಮೀರಿದ ಒಂದು ಸ್ನೇಹ ಬಂಧ ಸಿಕ್ಕರೆ ಅದ್ಭುತ ತಾನೇ? ನಾನು ಸ್ನಾತಕೋತ್ತರ ಅಧ್ಯಯನಕ್ಕೆ ಅಯ್ಯೋ ಸೀಟ್‌ ಸಿಕ್ಕೇ ಬಿಟ್ಟಿತಲ್ಲ ಅಂತ ಓದಲು ಬಂದವಳು. ಅವಳ್ಳೋ ಕನಸುಗಳ ಹೊತ್ತು ಸಾಧಿಸಲು ಬಂದವಳು. ಅವಳ ಪರಿಚಯ ನನಗೆ ಆಕಸ್ಮಿಕ. ಅವಳ ಪರಿಶುದ್ಧ ಸ್ನೇಹ ನೀಡಿದ್ದು  ಮಾತ್ರ ಹಾಸ್ಟೆಲ್‌ ಲೈಫ್.

ಗೆಳೆತನ ಅನ್ನೋದು ಕೃಷ್ಣ-ಸುಧಾಮ, ದುರ್ಯೋಧನ- ಕರ್ಣರ ಹಾಗೆ ಇರಬೇಕು. ಯಾಕೆಂದರೆ ಯಾವುದೇ ಅನುಮಾನಗಳಿಲ್ಲದೆ, ಕಷ್ಟ-ಸುಖ ಇವೆರಡರಲ್ಲೂ ತನ್ನ ಇರುವಿಕೆಯನ್ನು ತೋರ್ಪಡಿಸುವುದೇ ಬೆಸ್ಟ್‌ ಫ್ರೆಂಡ್‌ಶಿಪ್‌. ಆಕೆ ನೀಡುವ ಪ್ರೀತಿಯಲ್ಲಿ ಕಿಂಚಿತ್ತೂ ಲೋಪವಿಲ್ಲ. ಹೆತ್ತವರು ತೋರುವ ಪ್ರೀತಿ ಕಾಳಜಿಗಿಂತಲೂ ಒಂದು ಪಾಲು ಹೆಚ್ಚು ಎಂದರೆ ತಪ್ಪಾಗಲ್ಲ. ನನ್ನ ಕಷ್ಟದ ಸಮಯದಲ್ಲಿ ಕೈ ಹಿಡಿದವಳು ನನ್ನ ಬೆಸ್ಟ್‌ ಫ್ರೆಂಡ್‌. ನನಗಾಗಿ ಹೇಳುವ ಕಾಳಜಿಯ ಕಿವಿ ಮಾತುಗಳು, ಅದೆಷ್ಟೋ ಬಾರಿ ಅಪ್ಪ- ಅಮ್ಮನಿಗೂ ಹೇಳಾಲಾಗದಂಥ ಕೆಲವು ವಿಚಾರಗಳನ್ನ ಆಕೆಯ ಬಳಿ ಹೇಳಿ ಕೊಂಡಿದ್ದುಂಟು.

ಆಕೆ ಆಹಾರ ಸೇವನೆಯಲ್ಲಿ ಶುದ್ದ ಸಸ್ಯಹಾರಿ, ಅದರೆ ನಾನು ಮಿಶ್ರಾಹಾರಿ. ಆದರೂ ನಮ್ಮ ನಡುವೆ ಕಿತ್ತಾಟಗಳಿಲ್ಲ. ಇನ್ನು ಅವಳ‌ಲ್ಲಿನ ಪರೋಪಕಾರಿ ಗುಣ ನನಗೆ ಅಚ್ಚು ಮೆಚ್ಚು. ನಮ್ಮಲ್ಲಿ ವಿರೋಧ ಭಾವಗಳಿಗೇನು ಕಡಿಮೆಯಿಲ್ಲ. ತಪ್ಪು ಮಾಡಿದಾಗ ಅಪ್ಪನಂತೆ ಗದರಿಸಿ, ನೊಂದಾಗ ಅಮ್ಮನಂತೆ ಮಡಿಲು ನೀಡಿದವಳು, ಅಕ್ಕ, ತಂಗಿಯರಂತೆ ಒಂದಿಷ್ಟು ಹುಸಿಮುನಿಸುಗಳು ಬೆರೆತು ಸಂಪೂರ್ಣ ಪ್ರೀತಿ, ಕಾಳಜಿ ನೀಡಿ ಮಗುವಿನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದ ಗೆಳತಿ. ತಾನು ತಿನ್ನುವ ತುತ್ತಿನಲ್ಲಿ ನನಗೂ ಒಂದು ತುತ್ತು ಎತ್ತಿಡುವವಳು. ಕಷ್ಟ ಅಂದಾಗ ಕೇಕೆ ಹಾಕಿ ನಕ್ಕವರು ಅನೇಕರು.

Advertisement

ಇವೆಲ್ಲವನ್ನೂ ಮೀರಿಸಿ ನನ್ನ ಕನಸುಗಳಿಗೆ, ನನ್ನ ಆಸೆಗಳಿಗೆ ರೆಕ್ಕೆ ಕಟ್ಟಿದವಳು ನನ್ನ ಗೆಳತಿ, ನನ್ನ ಹ್ಯಾಪಿನೆಸ್‌. ಹೌದು ನಮ್ಮ ಸ್ನೇಹಕ್ಕೆ ಹಾಸ್ಟೆಲ್‌ನಲ್ಲಿದ್ದ ಸಂಪಿಗೆ ಮರದಡಿಯ ಕಟ್ಟೆಗಳು, ಜಗಲಿಗಳು, ಮೆಟ್ಟಿಲುಗಳು, ಬಾವಿ ಕಟ್ಟೆ ಸಾಥ್‌ ನೀಡು ತ್ತಿದ್ದವು. ಹಾಸ್ಟೆಲ್‌ ಲೈಫ್ ಒಂದಿಷ್ಟು ಜೀವನದ ಬಗೆಗಿನ ಪಾಠದ ಜತೆಗೆ ಉತ್ತಮವಾದ ಸ್ನೇಹಿತೆಯನ್ನೂ ನೀಡಿದೆ.


ಆಶಿತಾ ಎಸ್‌. ಬಿಳಿನೆಲೆ, ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next