ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಮಿತ್ರ ಜಾನಪದ ಕಲಾ ಸಂಘ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಮತ್ತು ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾ ಸಂಘ ಹಾಗೂ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಮಿತ್ರ ಜಾನಪದ ಕಲಾ ಸಂಘ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಮತ್ತು ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಹಾಗೂ 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಖ್ಯಾತ ಗೀತ ರಚನೆಕಾರ ಹಾಗೂ ಚಲನಚಿತ್ರ ನಿರ್ದೇಶಕ ಡಾ| ವಿ. ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಸಿಗುವ ಆಶೀರ್ವಾದ ದೊಡ್ಡ ದೊಡ್ಡ ಸ್ಟಾರ್‌ಗಳ ಬಳಿಯೂ ಸಿಗಲು ಸಾಧ್ಯವಿಲ್ಲ. ಸಾಮೂಹಿಕ ವಿವಾಹ ಕಾರ್ಯಕ್ರಮ ಒಂದು ರೀತಿಯ ವಿಶೇಷ ಸಂಭ್ರಮ. ಆರ್ಥಿಕವಾಗಿ ಬಳಲಿದವರಿಗೆ ಇಂತಹ ಕಾರ್ಯಕ್ರಮಗಳು ಸಾತ್ವಿಕ ಬಲ ತುಂಬಲು ಸಾಧ್ಯ ಎಂದು ಹೇಳಿದರು.
ಎಲ್ಲಾ ಕಡೆಯಲ್ಲಿ ಜಾನಪದ ಸೊಗಡು ವಿಭಿನ್ನ ರೀತಿಯಲ್ಲಿದೆ. ಆದರೆ ಮಲೆನಾಡು ಭಾಗದ ಜಾನಪದ ಸೊಗಡು ತಾನು ಕಂಡಿರಲಿಲ್ಲ. ಅದನ್ನು ಇಂದು ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದಂತಾಯಿತು. ಅಲ್ಲದೆ ಇಲ್ಲಿನ ಜಾನಪದ ಉಳಿಸುವ ಕಾರ್ಯ ಹಾಗೂ ಕಾಳಜಿ ಜನಪ್ರತಿನಿಧಿಗಳು ಇಲ್ಲಿರುವುದರಿಂದ ಜಾನಪದ ಅಳಿವು ಸಾಧ್ಯವಿಲ್ಲ. ಈಗ ವಿವಾಹವಾಗಿರುವ ನವ ದಂಪತಿಗಳು ಉತ್ತಮ ಜೀವನ ನಡೆಸುವ ಮೂಲಕ ಜಾನಪದ ಉಳಿಸುವ ಕೆಲಸ ಮಾಡಬೇಕೆಂದು ಹೇಳಿದರು. ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಜೀವನ ತಿಳಿದುಕೊಂಡು ಅವರು ಹಾಕಿ ಕೊಟ್ಟ ದಾರಿಯಲ್ಲೇ ನಡೆಯಬೇಕು. ಹಿಂದಿನ ಕಾಲದಂತೆ ಈಗಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳು ಕಡಿಮೆ ಮಟ್ಟದಲ್ಲಿವೆ. ಆದರೆ ಸಾಧಿಸುವ ಛಲ ಬಹುತೇಕರಲ್ಲಿ ಕಡಿಮೆಯಾಗಿದೆ. ಕಡಿಮೆ ಸಮಯದಲ್ಲಿ ಎಲ್ಲವನ್ನೂ ಸಾಧಿಸುವ ಮಾಯಾಜಿಂಕೆಯ ಬೆನ್ನೇರಿ ಏನನ್ನೂ ಸಾಧಿಸಲು ಸಾಧ್ಯವಾಗದೆ ಕೊನೆಗೆ ದುಶ್ಚಟಗಳ ದಾಸರಾಗಿ ಜೀವನ ನಾಶ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಅರಿವು ಇಟ್ಟುಕೊಂಡು ತಾವುಗಳೂ ಕೂಡ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೊಡ್ಡ ದೊಡ್ಡ ಹುದ್ದೆ ಅಲಂಕರಿಸುವಂತೆ ಮಾಡುವಂತೆ ನವ ದಂಪತಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಸರಳ ಸಾಮೂಹಿಕ ವಿವಾಹ ಎಂಬುದು ಅರ್ಥಪೂರ್ಣವಾದ ಆಚಾರ. ಸಾಲ ಮಾಡಿ ಮಾಡಿಕೊಂಡು ಜೀವನ ಪೂರ್ತಿ ದುಡಿಯಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವುದನ್ನು ತಪ್ಪಿಸಲು ಸರಳ ಸಾಮೂಹಿಕ ವಿವಾಹ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮದುವೆ ಧಾರೆ ಕಾರ್ಯವನ್ನು ನಿವೃತ್ತ ಶಿಕ್ಷಕ ಮಾರಯ್ಯ, ನಂಜಮ್ಮ ದಂಪತಿಗಳು ನೆರವೇರಿಸಿದರು. ಚಲನಚಿತ್ರ ನಟ ಗುರುನಂದನ್, ಸಿನಿಮಾ ಕಿರುತೆರೆ ನಟಿಯರಾದ ಟಿ.ರಾಜೇಶ್ಚರಿ, ಕುಸುಮಾ, ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ನಿರ್ದೇಶಕರಾದ ಎಂ.ಎಸ್. ಅನಂತ್, ಎಚ್.ಪಿ. ರಮೇಶ್, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಕಮಲಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಡಿ.ಎಸ್. ರಘು, ಮಂಚೇಗೌಡ, ಕೆಂಗೇರಿ ಲಕ್ಷ್ಮಯ್ಯ, ಎಂ.ಎನ್. ಅಶ್ವಥ್, ರಘುನಾಥ್, ಬಿ.ಎಂ. ಶಂಕರ್, ಭಾನುಮತಿ, ಸಿ.ಜಿ. ಈರೇಗೌಡ, ಸುಂದರೇಶ್ ಗೌಡ ಸೇರಿದಂತೆ ಅನೇಕ ಮುಖಂಡರು ನವ ದಂಪತಿಗೆ ಶುಭ ಹಾರೈಸಿದರು. ವಿವಾಹದ ಕುರಿತಾಗಿ ಕನ್ನಡ ಮಂತ್ರವನ್ನು ಪುರೋಹಿತರಾದ ಕೆ.ಕೆ.ರಾಮಯ್ಯ, ಎಚ್.ಡಿ.ಸುಬ್ರಹ್ಮಣ್ಯ, ಕೆ.ಎಲ್. ಸಾಗರ್ ಕೋಗಿಲೆ, ಡಿ.ಬಿ. ರಾಮಯ್ಯ, ರಮೇಶ್ ಪಠಿಸಿದರು.