– ಹೀಗೆ ಹೇಳಿದ್ದು ನಿರ್ದೇಶಕ ಪಿ.ಶೇಷಾದ್ರಿ. ಅವರು ಹೇಳಿಕೊಂಡಿದ್ದು, ಕಾರಂತರ ಬಗ್ಗೆ. ಹೌದು, ಶೇಷಾದ್ರಿ ಹಾಗೆ ಹೇಳ್ಳೋಕೆ ಕಾರಣ, “ಮೂಕಜ್ಜಿಯ ಕನಸುಗಳು’. ಜ್ಞಾನಪೀಠ ಪ್ರಶಸ್ತಿ ಪಡೆದ ಈ ಕಾದಂಬರಿ ಇದೀಗ ಶೇಷಾದ್ರಿ ನಿರ್ದೇಶನದಲ್ಲಿ ಚಿತ್ರವಾಗಿದೆ. ಬಿಡುಗಡೆಯೂ ಇಂದು ಆಗಿದೆ. “ಮೂಕಜ್ಜಿಯ ಕನಸುಗಳು’ ಕುರಿತು ಶೇಷಾದ್ರಿ ಒಂದಷ್ಟು ಹೇಳುತ್ತಾ ಹೋಗಿದ್ದು ಹೀಗೆ. “ಶಿವರಾಮ ಕಾರಂತರ ಸಾಹಿತ್ಯ ಪರಿಣಾಮಕಾರಿಯಾಗಿದೆ. ಅವರ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವುದು ದೊಡ್ಡ ಸಾಹಸ ಮಾಡಿದಂತೆ. ಆ ಕ್ರಮ ನಿಜಕ್ಕೂ ದೊಡ್ಡದು. ನಾನು ಅವರ ಕಾದಂಬರಿ ಆಧಾರಿತ “ಬೆಟ್ಟದ ಜೀವ’ ಸಿನಿಮಾ ಕೈಗೆತ್ತಿಕೊಂಡಿದ್ದು ಜೇನುಗೂಡಿಗೆ ಕಲ್ಲು ಹೊಡೆದಂಗೆ. ಆದರೂ, ಅದನ್ನು ತುಂಬ ಸೂಕ್ಷ್ಮತೆಯಿಂದ ಮಾಡಿದ್ದರಿಂದಲೇ ಈಗ “ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಸಿನಿಮಾ ಮಾಡಲು ಸಾಧ್ಯವಾಗಿದೆ. ಹಾಗಂತ, ಇದು ಸುಲಭವಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಚಿತ್ರಕಥೆಯ ಕೆಲಸ ನಡೆಯುತ್ತಲೇ ಇತ್ತು. ಕಾರಂತರು 1930 ರ ಆಸುಪಾಸಿನಲ್ಲೇ ಸಿನಿಮಾ ನಿರ್ದೇಶಿಸಿದ್ದರು. “ಡೊಮಿಂಗೋ’, “ಭೂತರಾಜ್ಯ’ ಸಿನಿಮಾ ಮಾಡಿದ್ದರು. ನಂತರ 70 ರ ದಶಕದಲ್ಲಿ “ಮಲಯ ಮಕ್ಕಳು’ ಎಂಬ ಚಿತ್ರ ಕೂಡ ಬಂದಿತ್ತು. ಬಹುಶಃ ಅವರು ಇಂದು ಇದ್ದಿದ್ದರೆ, ನಾನು ಅವರ “ಬೆಟ್ಟದ ಜೀವ’, “ಮೂಕಜ್ಜಿಯ ಕನಸುಗಳು’ ಚಿತ್ರ ಮಾಡಲು ಆಗುತ್ತಿರಲಿಲ್ಲವೆನೋ? ಅವರ ಸಾಹಿತ್ಯವನ್ನು ಸಿನಿಮಾಗೆ ಅಳವಡಿಸುವುದು ತುಸು ಕಷ್ಟವೇ. ಆದರೂ ಮಾಡಿದ್ದೇನೆ. ಮನ್ನಣೆ ಕೂಡ ಸಿಕ್ಕಿದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 3 ದಶಕವಾಗಿದೆ. ಸ್ವತಂತ್ರ ನಿರ್ದೇಶಕನಾಗಿ ಎರಡು ದಶಕ ಕಳೆದಿದ್ದೇನೆ. “ಮೂಕಜ್ಜಿಯ ಕನಸುಗಳು’ ನನ್ನ 11 ನೇ ಚಿತ್ರ. ನಾನು ಕಾರಂತರ “ಬೆಟ್ಟದ ಜೀವ’ ಮಾಡುವ ಸಂದರ್ಭದಲ್ಲೇ “ಮೂಕ್ಕಜ್ಜಿಯ ಕನಸುಗಳು’ ಮೇಲೆ ಗಮನ ಹರಿಸಿದ್ದೆ. ಎಲ್ಲರೂ ಕಾರಂತರ ಕಾದಂಬರಿ ಸಿನಿಮಾ ಮಾಡೋದು ಟಫ್ ಅಂತ ಹೇಳುತ್ತಿದ್ದರು.
Advertisement
ಅದು ನಿಜ ಕೂಡ. “ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳಾಗಿವೆ. ಈ ಸಂಭ್ರಮವನ್ನು ಸಾಹಿತ್ಯ ಕ್ಷೇತ್ರದಲ್ಲಿ ಕಾಣಲಿಲ್ಲ. ದೃಶ್ಯಮಾಧ್ಯಮದಲ್ಲಾದರೂ ಕಾಣುವ ಅವಕಾಶ ಸಿಗುತ್ತಿದೆ. ಹಾಗಾಗಿ, ಈ ವಾರ ಚಿತ್ರ ಬಿಡುಗಡೆ ಆಗುತ್ತಿದೆ. ಸಾಮಾನ್ಯವಾಗಿ ಇಂತಹ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂಬ ಆರೋಪವಿದೆ. ಹಾಗಂತ ಈ ರೀತಿಯ ಚಿತ್ರಗಳುಶತದಿನ ಕಾಣಲ್ಲ. ಆದರೆ, ಒಂದು ವಾರ ಪ್ರದರ್ಶನ ಕಂಡು, ಪ್ರೇಕ್ಷಕರಿಗೆ ತಲುಪಿದರೆ ಅದೇ ನಮ್ಮ ಹೆಮ್ಮೆ.
Related Articles
Advertisement