Advertisement

ಸೇವೆಯಿಂದ ಸುಖ, ಗೌರವ: ಬೈಬಲ್‌ ಸಂದೇಶ

10:31 PM Apr 19, 2019 | mahesh |

ನಗರ: ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಯ ಗುಡ್‌ ಫ್ತೈಡೇ ಅಂಗವಾಗಿ ಶುಕ್ರವಾರ ಸಂಜೆ ಚರ್ಚ್‌ಗಳಲ್ಲಿ ಶ್ರದ್ಧಾ, ಭಕ್ತಿಯ ಧಾರ್ಮಿಕ ಆಚರಣೆಗಳು ನಡೆದವು. ಕ್ರೈಸ್ತ ಬಾಂಧವರು ವಿಶೇಷ ಮೆರವಣಿಗೆಯ ಮೂಲಕ ಯೇಸು ಕ್ರಿಸ್ತರ ಸಂದೇಶವನ್ನು ಸಾರಿದರು. ಯೇಸುಕ್ರಿಸ್ತರು ಎಲ್ಲರನ್ನೂ ಒಂದೇ ಎಂಬ ಮನೋಭಾವನೆಯಿಂದ ಸೇವೆಯನ್ನು ಮಾಡುವ ಮೂಲಕ ಜೀವಿಸುವ ಉದ್ಧೇಶವನ್ನು ತೋರಿಸಿಕೊಟ್ಟವರು. ಒಬ್ಬರಿಗೊಬ್ಬರು ನಿಜವಾದ ಸೇವೆಯನ್ನು ಮಾಡುವುದರಿಂದ ಬದುಕಿನಲ್ಲಿ ಸುಖ ಮತ್ತು ಶ್ರೇಷ್ಠತೆಯನ್ನು ಕಾಣಬಹುದು ಎಂದು ಮರೀಲ್‌ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನ ಸ್ಥಳೀಯ (ಕೂಡಮರ) ಧರ್ಮಗುರು ಹಾಗೂ ಪ್ರಸ್ತುತ ಕಲಬುರಗಿ ಧರ್ಮಪ್ರಾಂತ್ಯದಲ್ಲಿ ಬಿಷಪ್‌ ಹೌಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಂ| ವಿನ್ಸೆಂಟ್‌ ತೋರಸ್‌ ಹೇಳಿದರು.

Advertisement

“ಗುಡ್‌ಫ್ತೈಡೇ’ಯ ಮುನ್ನಾ ದಿನವಾದ “ಪವಿತ್ರ ಗುರುವಾರ’ದಂದು ಮರೀಲ್‌ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಅವರು ಬೈಬಲ್‌ ವಾಚಿಸಿ ಸಂದೇಶ ನೀಡಿದರು. ಏಸುಕ್ರಿಸ್ತರು ಶಿಲುಬೆಗೇರುವ ಮುನ್ನ ತನ್ನ 12 ಮಂದಿ ಶಿಷ್ಯರೊಂದಿಗೆ ಮಾಡಿದ ಕೊನೆಯ ಭೋಜನವೇ ಪಾಸಾ ಭೋಜನವಾಗಿದೆ. ಮನುಷ್ಯನ ಲೌಕಿಕ ಬದುಕಿಗೆ ತನ್ನನ್ನೇ ಭೋಜನ ಮತ್ತು ಪಾನವಾಗಿ ಅರ್ಪಿಸಿಕೊಂಡ ಯೇಸುಕ್ರಿಸ್ತರ ಕೊನೆಯ ಭೋಜನ ಮನುಷ್ಯನ ಬದುಕಿಗೆ ಹೊಸ ಅರ್ಥ ನೀಡಿ ಮನಸ್ಸಿಗೆ ತೃಪ್ತಿ ನೀಡುತ್ತದೆ ಮತ್ತು ಉತ್ತಮ ಸಂಬಂಧ ಏರ್ಪಡುತ್ತದೆ ಎಂದರು.

ದೇವರ ರಾಜ್ಯದಲ್ಲಿ ಯಾರೂ ಸಣ್ಣವರು, ದೊಡ್ಡವರಿಲ್ಲ ಎಂದ ಅವರು ಯೇಸುಕ್ರಿಸ್ತರು ಹೇಳಿದ ಹಾಗೆ ಪ್ರತಿಯೊಬ್ಬರೂ ಒಬ್ಬರನೊಬ್ಬರು ಪ್ರೀತಿಯ, ಕ್ಷಮೆಯ ಮತ್ತು ಸೇವೆಯ ಮನೋಭಾವನೆಯಿಂದ ನೋಡಿದಾಗ ಮನುಷ್ಯನ ನಡುವೆ ಉತ್ತಮ ಸಂಬಂಧವೇರ್ಪಡುತ್ತದೆ. ಪವಿತ್ರ ಪರಮಪ್ರಸಾದವು ಮನುಷ್ಯನಲ್ಲಿ ವಿಶ್ವಾಸ ಹಾಗೂ ಬ್ರಾತೃತ್ವವನ್ನು ವೃದ್ಧಿಸುತ್ತದೆ ಎಂದರು.ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಫ್ರಾಂಕ್‌ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದರು.

ಬನ್ನೂರು ಚರ್ಚ್‌
ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಧಾರ್ಮಿಕ ವಿಧಿವಿಧಾನ ನೆರವೇರಿಸಿ, ಬೈಬಲ್‌ ಸಂದೇಶ ನೀಡಿದರು.

ಪಾದ ತೊಳೆಯುವ ಕಾರ್ಯಕ್ರಮ
ಚರ್ಚ್‌ಗಳಲ್ಲಿ ವಿಶೇಷ ಪೂಜೆಯೊಂದಿಗೆ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆದರು. ಆಯಾ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಸ್ಯಾಕ್ರಿಸ್ಟಿಯನ್‌, ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡರು.

Advertisement

ರವಿವಾರ ನಡೆಯುವ ಈಸ್ಟರ್‌ ಸಂಡೇವರೆಗೆ ಯೇಸುವಿನ ಕೊನೆಯ ಭೋಜನ, ಶಿಲುಬೆಗೇರುವಿಕೆ ಮತ್ತು ಪುನರುತ್ಥಾನದ ದಿನಗಳನ್ನಾಗಿ ಆಚರಿಸಲಾಗುತ್ತದೆ.

ಮಹಿಳೆಯರಿಗೂ ಪ್ರಾತಿನಿಧ್ಯ
ಸಮಾನತೆಯ ದೃಷ್ಟಿಕೋನದಿಂದ ಕಥೋಲಿಕ್‌ ಕ್ರೈಸ್ತ ಸಭೆಯಲ್ಲಿ ಕಳೆದ ವರ್ಷ ಯೇಸುಕ್ರಿಸ್ತರ ಕೊನೆಯ ಭೋಜನದ ದಿನದಂದು ಆಚರಿಸುವ ವಿಶ್ವಾಸಿಗಳ ಪಾದ ತೊಳೆಯುವ ಪವಿತ್ರ ಕಾರ್ಯದಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಲು ಕಥೋಲಿಕ್‌ ಜಗದ್ಗುರು ಪೋಪ್‌ ಫ್ರಾನ್ಸಿಸ್‌ ಅವರು ಸೂಚನೆ ನೀಡಿದ್ದು, ಜಗತ್ತಿನಾದ್ಯಂತ ಎಲ್ಲ ಚರ್ಚ್‌ಗಳಲ್ಲಿ ಜಾರಿಗೊಳಿಸುವಂತೆ ಕರೆ ನೀಡಿದ್ದರು. ಅದರಂತೆ ಚರ್ಚ್‌ಗಳಲ್ಲಿ ಐವರು ಪುರುಷರು, ಐವರು ಮಹಿಳೆಯರು ಮತ್ತು ಇಬ್ಬರು ಧರ್ಮಭಗಿನಿಯರ ಪಾದಗಳನ್ನು ತೊಳೆಯುವ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next