ಸಂಪತ್ತು ಎಂದಾಕ್ಷಣ ನಮಗೆ ನೆನಪಾಗುವುದು ಜಗತ್ತಿನಲ್ಲಿ ಅತೀ ಹೆಚ್ಚು ಬೆಲೆ, ಪ್ರಾಮುಖ್ಯವನ್ನು ಹೊಂದಿರುವ ಹಣ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಹಣ ಮಾತ್ರವೇ ತಮ್ಮ ಸಂಪತ್ತು ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಆರೋಗ್ಯ, ಸ್ನೇಹ, ಸಂಬಂಧ, ನಂಬಿಕೆ, ವಿಶ್ವಾಸ, ಪ್ರೀತಿ, ವಿದ್ಯೆ, ಸಂತೋಷ ಮೊದಲಾದವುಗಳು ನಮ್ಮ ಸಂಪತ್ತೆಂದರೆ ತಪ್ಪಾಗಲಾರದು. ಹಾಗಾಗಿ ನಮ್ಮ ಸಂಪತ್ತಿನಲ್ಲಿ ಇತರರ ಸಂತೋಷವೂ ಕೂಡ ಒಂದು ಭಾಗವಾಗಿದೆ. ಕಾಡಲ್ಲಿರುವ ಕೆಲವು ಪ್ರಾಣಿಗಳು ಒಣಹುಲ್ಲು , ನದಿಯ ನೀರು ಸೇವಿಸಿ ಅತ್ಯಂತ ಬಲಿಷ್ಠವಾಗಿ ಮೆರೆಯುತ್ತವೆ. ಋಷಿ-ಮುನಿಗಳು ಗೆಡ್ಡೆ ,ಗೆಣಸು, ಹಣ್ಣು – ಹಂಪಲುಗಳನ್ನು ಸೇವಿಸುತ್ತಾ ಜೀವನ ಸಾಗಿಸುತ್ತಾರೆ. ಇವನ್ನೆಲ್ಲ ಗಮನಿಸಿದಾಗ ಸಂತೋಷವೆಂಬುದು ಸಣ್ಣ ಸಣ್ಣ ವಿಷಯಗಳಲ್ಲಿ ಅಡಗಿವೆ ಎಂಬುದು ಅರಿವಾಗುತ್ತದೆ.
ಹಲವಾರು ಜನರು ಸುಖ- ಸಂತೋಷ ಒಂದೇ ಎಂದು ತಿಳಿದುಕೊಂಡಿ ರುತ್ತಾರೆ. ಆದರೆ ಸುಖ ಮತ್ತು ಸಂತೋಷ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಿಕೊಡುತ್ತವೆ. ಒಬ್ಬ ತನಗೆ ದೊರಕಿದ ಹಣ್ಣನ್ನು ತಾನೊಬ್ಬನೇ ಯಾರಿಗೂ ತಿಳಿಯದಂತೆ ತಿಂದರೆ ಆತನಿಗೆ ಸುಖ ಸಿಗುತ್ತದೆ. ಆದರೆ ಮತ್ತೂಬ್ಬ ತನಗೆ ಸಿಕ್ಕ ಹಣ್ಣನ್ನು ಇತರರಿಗೆ ಕೊಟ್ಟು ಹಂಚಿ ತಿಂದಾಗ ಆತನಿಗೆ ಸಂತೋಷವಾಗುತ್ತದೆ. ಇಲ್ಲಿ ಹಂಚಿಕೆಯ ಮೂಲ ಸಂತೋಷ, ಮೊದಲನೆಯವನು ತನ್ನ ಸ್ವಪ್ರ ಯೋಜನವನ್ನು ಗುರಿಯಾಗಿಸಿಟ್ಟು ಕೊಂಡಿದ್ದರೆ ಆತನಿಗೆ ಸುಖ ಸಿಗು ತ್ತದೆಯೇ ಹೊರತು ಸಂತೋಷವಲ್ಲ. ತನಗೆ ಮಾತ್ರ ಪ್ರಯೋಜನವಾಗಲಿ ಎಂದುಕೊಳ್ಳುವುದು ಸುಖ. ಅದೇ ಸುಖವನ್ನು ಇತರ ಜನರೊಂದಿಗೆ ಹಂಚಿಕೊಂಡು ಅಥವಾ ಸಮಯ ಬಂದಾಗ ಅದನ್ನು ಬಿಟ್ಟುಕೊಟ್ಟು ಸುಖೀಸುವುದೇ ಸಂತೋಷ.
ಸ್ವಾರ್ಥ ಎಂಬುದು ತನ್ನಲ್ಲಿರುವುದೆಲ್ಲ ತನ್ನದೇ ಎಂದು ಬೀಗುತ್ತಾ ತಾನೊಬ್ಬನೇ ಸುಖ ಪಡುವಂಥದ್ದು. ಒಂದು ಮನೆಯ ಸಂಪತ್ತು ಸಂತೋಷ. ಆ ಸಂತೋಷ ಒಬ್ಬನಾಗಿದ್ದರೆ ಅದು ಆ ಮನೆಯ ಸಂತೋಷವೆಂದೆನಿಸಿಕೊಳ್ಳುವುದಿಲ್ಲ.
ಒಂದು ಮನೆಯ ಸಂತೋಷವೆಂದರೆ ಅದು ಕೇವಲ ಆ ಮನೆಯ ಯಜಮಾನನ ಖುಷಿಯಲ್ಲ ಆ ಮನೆಯ ಸದಸ್ಯರ ಒಗ್ಗಟ್ಟಿನಲ್ಲಿ ಆ ಸಂತೋಷವಿರುತ್ತದೆ. ಆಗ ನಮಗೆ ಈ ಜೀವನದ ನಿಜವಾದ ಸಂತೋಷದ ಅರಿವು ಉಂಟಾಗುತ್ತದೆ.
ನಮಗೆಲ್ಲರಿಗೂ ರಾಜಕುಮಾರ ಸಿದ್ದಾರ್ಥ ಬುದ್ಧನಾದ ಕತೆ ತಿಳಿದಿದೆ. ಸಿದ್ದಾರ್ಥನಿಗೆ ಜೀವನದಲ್ಲಿ ಸುಖದ ಕೊರತೆಯೇ ಇರಲಿಲ್ಲ. ಆತ ಬೆಳೆದದ್ದು ರಾಜ ವೈಭವದಲ್ಲಿಯೇ. ದುಃಖ, ನೋವು ಎಂದರೆ ಏನೆಂಬುದೇ ಆತನಿಗೆ ತಿಳಿದಿರಲಿಲ್ಲ, ಆದರೆ ವಿಧಿಯು ಆ ಸುಖವನ್ನು ಶಾಶ್ವತವಾಗಿ ನೀಡಲಿಲ್ಲ. ತನ್ನೊಬ್ಬನ ಪಾಲಿಗೆ ಮಾತ್ರ ಇದ್ದ ಆ ಸುಖದಲ್ಲಿ ಅವನ ಮನಸ್ಸಿಗೆ ನೆಮ್ಮದಿ ತರುವ ಸಂತೋಷ ಲಭಿಸಲಿಲ್ಲ. ತಾನೊಬ್ಬನೇ ಸುಖದ ನಡುವೆ ಇದ್ದರೇನಾಯಿತು? ಅದರಿಂದ ಬೇರೆಯವರಿಗೆ ಪ್ರಯೋಜನವಿಲ್ಲ ಎಂಬುದನ್ನು ಅರಿತನು. ಎಲ್ಲರೂ ಸುಖ ಪಡುವಂತಾದರೆ ಅಥವಾ ದುಃಖದಿಂದ ಪಾರಾಗುವುದಾದರೆ ಅದು ಸಂತೋಷದ ವಿಷಯವೆಂದು ತಿಳಿದು ಸಂತೋಷದ ಅನ್ವೇಷಣೆಗಾಗಿ ಇದ್ದ ಸುಖವನ್ನು ತ್ಯಾಗ ಮಾಡಿ ಹೊರಟು ಸಾಧನೆ ಮಾಡಿ ಬುದ್ಧನೆಂದು ಕರೆಸಿಕೊಂಡು ಸಂತೋಷದ ನೆಲೆಯನ್ನು ಕಂಡ. ಆ ಸಂತೋಷದ ಅನುಭವವನ್ನು ಲೋಕಕ್ಕೇ ತಿಳಿಸಿದ.
ಯಾವುದೇ ಧರ್ಮ ಅಥವಾ ಮಹಾನ್ ವ್ಯಕ್ತಿಗಳು ಸುಖವೇ ದೊಡ್ಡ ಸಾಧನೆ ಎಂದು ಹೇಳಲಿಲ್ಲ. ಸುಖದ ತ್ಯಾಗದಿಂದ ಸಿಗುವ ಸಂತೋಷವೇ ಸಾಧನೆಯೆಂದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಿಳಿಸಿಕೊಟ್ಟಿದೆ. ಆ ವಿಚಾರ ರಾಮ-ಸೀತೆ, ದ್ರೌಪದಿ – ಪಾಂಡವರ ಜೀವನದಲ್ಲಿ ಅಳವಡಿಕೆಯಾಗಿದೆ. ಹಾಗಾಗಿ ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಮ್’ ಎಂಬಂತೆ ಯಾವುದೇ ವಿಷಯದಲ್ಲೂ ನಾವು ಮಾತ್ರ ಸಂತೋಷ ಪಡದೆ ಇತರರಿಗೂ ಸಂತೋಷವಾಗುವಂತೆ ನಡೆದುಕೊಳ್ಳಬೇಕು.
- ಸೌಮ್ಯಾ, ಕಾರ್ಕಳ