Advertisement

ಅನರ್ಹಗೊಂಡ ಶಾಸಕರ ಆಲಾಪ, ಆಕ್ರೋಶ

11:52 PM Jul 29, 2019 | Lakshmi GovindaRaj |

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡ ಶಾಸಕರು ಪಕ್ಷದ ನಾಯಕರ ನಡವಳಿಕೆ ವಿರುದ್ಧ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಕೆಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಮುಂದಾಗಿದ್ದಾರೆ. ಮತ್ತೆ ಕೆಲವರು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಭಾನುವಾರ ಸ್ಪೀಕರ್‌ ರಮೇಶ್‌ಕುಮಾರ್‌ 14 ಶಾಸಕರನ್ನು ಅನರ್ಹಗೊಳಿಸಿದ ನಂತರ ಭಾನುವಾರ ರಾತ್ರಿಯೇ ಕೆಲವು ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೆ ಕೆಲವು ಶಾಸಕರು ಮುಂಬೈನಿಂದ ದೆಹಲಿಗೆ ತೆರಳಿ ಸ್ಪೀಕರ್‌ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Advertisement

ಬೆಂಗಳೂರಿನ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ ಹಾಗೂ ಎಂ.ಟಿ.ಬಿ. ನಾಗರಾಜ್‌ ಮತ್ತು ಶಿವರಾಮ ಹೆಬ್ಟಾರ್‌ ಅವರು ಭಾನುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಎಚ್‌.ವಿಶ್ವನಾಥ್‌, ಬಿ.ಸಿ. ಪಾಟೀಲ್‌ ಹಾಗೂ ಪ್ರತಾಪ್‌ಗೌಡ ಪಾಟೀಲ್‌ ಅವರು ಸೋಮವಾರ ದೆಹಲಿಗೆ ತೆರಳಿದ್ದು, ಸ್ಪೀಕರ್‌ ಆದೇಶದ ವಿರುದ್ಧ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಜುಲೈ 25 ರಂದು ಅನರ್ಹಗೊಂಡಿದ್ದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಹಾಗೂ ಆರ್‌. ಶಂಕರ್‌ ಸೋಮವಾರವೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ಜುಲೈ 28 ರಂದು 14 ಶಾಸಕರನ್ನು ಅನರ್ಹಗೊಳಿಸಿರುವುದರಿಂದ ಎಲ್ಲರೂ ಒಟ್ಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಹಿನ್ನೆಲೆಯಲ್ಲಿ ಅವರು ಸೋಮವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ.

ಅಲ್ಲದೇ ಸ್ಪೀಕರ್‌ ಭಾನುವಾರ 14 ಶಾಸಕರ ಅನರ್ಹತೆ ಆದೇಶ ಪ್ರಕಟಿಸಿದ್ದರಿಂದ ಅನರ್ಹತೆಯ ಆದೇಶ ಪ್ರತಿಯನ್ನು ಸೋಮವಾರ ಪಡೆದುಕೊಂಡಿರುವ ಅವರು, ಮಂಗಳವಾರ ಒಟ್ಟಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ನಡುವೆ, ಬೆಂಗಳೂರಿಗೆ ಆಗಮಿಸಿರುವ ಶಾಸಕರು ತಮ್ಮ ಅನರ್ಹತೆಗೆ ಯಾರು ಕಾರಣ, ಸ್ಪೀಕರ್‌ ನಿರ್ಧಾರ, ಮೈತ್ರಿ ಪಕ್ಷಗಳ ನಾಯಕರು ತಮ್ಮ ಅನುಪಸ್ಥಿತಿಯಲ್ಲಿ ಸದನದಲ್ಲಿ ಮಾತನಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಸವಾಲು ಸ್ವೀಕಾರ: ಎಂಟಿಬಿ ನಾಗರಾಜ್‌
* ನಾನಂತೂ ರಾಜಕೀಯದಿಂದ ನಿವೃತ್ತಿಯಾಗಬೇಕೆಂದುಕೊಂಡಿದ್ದೇನೆ. ನಮ್ಮ ಕಾರ್ಯಕರ್ತರು, ಮುಖಂಡರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ನಾನು ಬಿಜೆಪಿಗೆ ಹೋಗುವ ಬಗ್ಗೆಯೂ ಚರ್ಚೆ ಮಾಡಿಲ್ಲ. ಜನ ಹಾಗೂ ದೇವರ ಆಶೀರ್ವಾದ ಸಿಕ್ಕರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದೆ. ನಾನು ಯಾವುದೇ ಹಣದ ಆಮಿಷ ಅಥವಾ ಅಧಿಕಾರಕ್ಕೆ ಹೋಗಿಲ್ಲ. ನಾನೇ ಅಧಿಕಾರ ಬಿಟ್ಟು ಬಂದಿದ್ದೇನೆ. ನನಗೆ ಐಟಿ, ಇಡಿ ಇಲಾಖೆಗಳ ಬೆದರಿಕೆಯೂ ಇಲ್ಲ. ಪ್ರತಿ ವರ್ಷ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದೇನೆ.

Advertisement

* ತಾಲೂಕು ಅಧಿಕಾರಿಯಿಂದ ಹಿಡಿದು ಎಲ್ಲವನ್ನೂ ಎಚ್‌.ಡಿ.ರೇವಣ್ಣ ಅವರೇ ನಿರ್ಧಾರ ಮಾಡುತ್ತಾರೆ. ನಾನು ಹೇಗೆ ಕೆಲಸ ಮಾಡಲಿ? ರಾಮನಗರಕ್ಕೆ ಸಾವಿರ ಕೋಟಿ, ಹಾಸನಕ್ಕೆ ಸಾವಿರ ಕೋಟಿ, ಮಂಡ್ಯಕ್ಕೆ ಸಾವಿರ ಕೋಟಿ ಕೊಟ್ಟರೆ, ಇಡೀ ರಾಜ್ಯದ 224 ಕ್ಷೇತ್ರಗಳಲ್ಲಿ ಶಾಸಕರು ಹೇಗೆ ಕೆಲಸ ಮಾಡಲು ಸಾಧ್ಯ? ನನ್ನ ಮಗ ರಾಜಕೀಯ ಪ್ರವೇಶ ಮಾಡುವುದು ಅವನಿಗೆ ಬಿಟ್ಟ ವಿಚಾರ. ಯಾವ ಪಕ್ಷಕ್ಕೆ ಹೋಗಬೇಕೆಂದು ಅವನೇ ತೀರ್ಮಾನ ಮಾಡುತ್ತಾನೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ನಮ್ಮನ್ನು ರಣರಂಗದಲ್ಲಿ ಎದುರಿಸುವುದಾಗಿ ಹೇಳಿದ್ದಾರೆ. ಅವರ ಸವಾಲನ್ನು ಸ್ವೀಕರಿಸಲು ನಾನು ಸಿದ್ದನಾಗಿದ್ದೇನೆ.

ನಂಬಿಕೆ ದ್ರೋಹಕ್ಕೆ ಮತ್ತೂಂದು ಹೆಸರು ಕೃಷ್ಣ ಬೈರೇಗೌಡ: ಎಸ್‌.ಟಿ. ಸೋಮಶೇಖರ್‌
* ಕಾಂಗ್ರೆಸ್‌ ಪಕ್ಷದ ಋಣ ತೀರಿಸುವ ಸಲುವಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದನ್ನು ನಾವು ಮೊದಲೇ ಊಹೆ ಮಾಡಿದ್ದೆವು. ಹೀಗಾಗಿಯೇ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೆವು. ಈಗ ನಾವು ಮತ್ತೆ ಕಾನೂನು ಹೋರಾಟ ಮಾಡುತ್ತೇವೆ.

* ನಂಬಿಕೆ ದ್ರೋಹಕ್ಕೆ ಮತ್ತೂಂದು ಹೆಸರು ಕೃಷ್ಣ ಬೈರೇಗೌಡ. ಅವರು ಸದನದಲ್ಲಿ ನಮ್ಮ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇವೆ. ಕೃಷ್ಣ ಬೈರೇಗೌಡ ಸಾಚಾ ಅಲ್ಲ. ಜೆಡಿಸ್‌ಗೆ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್‌ಗೆ ಬಂದಿದ್ದ. ದೇವೇಗೌಡರ ಮಾತಿನಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾನೆ ಹೊರತು ಅವನ ಸೋಲಿಗೆ ನಾವು ಕಾರಣವಲ್ಲ.

* ವಿಧಾನಸಭೆಯಲ್ಲಿ ನಮ್ಮನ್ನು ಬೆದರಿಸುವ ಕೆಲಸವನ್ನು ಕೆಲವು ಕಾಂಗ್ರೆಸ್‌ ನಾಯಕರು ರಣಧೀರರಂತೆ ಮಾತನಾಡಿದ್ದಾರೆ. ಚುನಾವಣೆ ರಣರಂಗದಲ್ಲಿ ಭೇಟಿ ಮಾಡುವುದಾಗಿ ಕೆಲವರು ಹೇಳಿದ್ದಾರೆ ಅವರನ್ನು ರಣರಂಗದಲ್ಲಿ ಸ್ವಾಗತಿಸುತ್ತೇವೆ. ಸ‌ದ್ಯದಲ್ಲೇ ಕ್ಷೇತ್ರದ ಜನರ ಸಭೆ ಕರೆದು ರಾಜಕೀಯ ನಿವೃತ್ತಿ ಘೋಷಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ.

ಸ್ಪೀಕರ್‌ ಸ್ಥಾನ ನೀಡಿದ್ದಕ್ಕೆ ಋಣ ಸಂದಾಯ: ಎಚ್‌. ವಿಶ್ವನಾಥ್‌
* ತಮಗೆ ಸ್ಥಾನ ನೀಡಿದವರಿಗೆ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಂದ ಋಣ ಸಂದಾಯವಾಗಿದೆ. ಸ್ಪೀಕರ್‌ರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ. ಉತ್ತಮ ಸ್ಪೀಕರ್‌ ರೀತಿಯಲ್ಲಿ ಅವರು ವರ್ತಿಸಿಲ್ಲ. ಸದನದಲ್ಲಿ ಅವರ ನಡವಳಿಕೆಯೂ ಉತ್ತಮವಾಗಿರಲಿಲ್ಲ, ರಾಜ್ಯದ ಜನರು ರಮೇಶ್‌ ಕುಮಾರ್‌ರನ್ನು ಕ್ಷಮಿಸುವುದಿಲ್ಲ.

* ಯಾರದೋ ಒತ್ತಡಕ್ಕೆ ಮಣಿದವರಂತೆ ರಮೇಶ್‌ ಕುಮಾರ್‌ ವರ್ತಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿ ತಮಗೆ ಸ್ಪೀಕರ್‌ ಸ್ಥಾನ ನೀಡಿದ್ದಕ್ಕೆ ಋಣ ಸಂದಾಯ ಮಾಡಿದ್ದಾರೆ. ಅವರೇ ಹೇಳಿಕೊಂಡಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಾರೆ. ಅತೃಪ್ತ ಶಾಸಕರ ವಿಚಾರದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ಸ್ಪೀಕರ್‌ ಕಾರ್ಯ ವೈಖರಿ ಬಗ್ಗೆಯೂ ನಾನು ಬರೆಯುವ ಪುಸ್ತಕದಲ್ಲಿ ಉಲ್ಲೇಖೀಸುವೆ.

ಪ್ರಚೋದಿಸಿದವರ ವಿವರ ಬಹಿರಂಗ: ಮುನಿರತ್ನ
* ಕುದುರೆ ವ್ಯಾಪಾರಕ್ಕೆ ನಾವು ಬಲಿಯಾಗಿಲ್ಲ. 2-3 ದಿನ ಬಿಟ್ಟು ಮತ್ತೆ ವಾಪಾಸು ಮುಂಬೈಗೆ ಹೋಗುತ್ತೇವೆ. ಸದ್ಯದಲ್ಲಿಯೇ ಈ ಬೆಳವಣಿಗೆಳ ಹಿಂದೆ ಯಾರಿದ್ದಾರೆ, ಇದಕ್ಕೆಲ್ಲ ಪ್ರಚೋದನೆ ಕೊಟ್ಟವರು ಯಾರು ಎಂದು ಬಹಿರಂಗ ಪಡಿಸುತ್ತೇನೆ.

* ನಾವು ರಾಜೀನಾಮೆ ಕೊಟ್ಟು ಹೋದ ಮೇಲೆ ನಮ್ಮ ಬಗ್ಗೆ ಮಾತನಾಡುವುದು ಸರಿಯಲ್ಲ. ಆರು ತಿಂಗಳ ಮೊದಲೇ ಏನು ನಡೆಯುತ್ತಿದೆ ಎಂದು ಇವರಿಗೆ ಗೊತ್ತಿರಲಿಲ್ಲವಾ? ಆಗ ನಮ್ಮ ಮಾತು ಕೇಳಿರಲಿಲ್ಲ. ಈಗೇನು ಮಾತನಾಡುವುದು? ಎರಡು ಮನಸು ಒಂದಾಗಿರಬೇಕು. ಆದರೆ, ಮೈತ್ರಿ ಸರ್ಕಾರದಲ್ಲಿ ಬರೀ ಗುದ್ದಾಟವಾಗಿತ್ತು. ನಾವು ಸತ್ತಮೇಲೆ ಯಾರು ಪಲ್ಲಕ್ಕಿ ಹೊರುತ್ತಾರೋ ನೋಡಬೇಕು.

* ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಬೆಂಗಳೂರಿನ ಶಾಸಕರಿಗೆ ಸಿಟ್ಟು ಬಂದಿತ್ತು. ಈಗ ಅವರು ಪಕ್ಷದ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಬೆಂಗಳೂರಿನ ಅಭಿವೃದ್ಧಿ ಮಾಡುವುದು ಕಷ್ಟ. ಈಗ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಿ, ಜನರಿಗೆ ಕೆಲಸ ಮಾಡುವ ಶಾಸಕ ಬೇಕಾದರೆ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next