ಹೊಸದಿಲ್ಲಿ: ಬೆಂಗಳೂರು-ಅಯೋಧ್ಯಾ ನಡುವಿನ ಅಕಾಶ ಏರ್‌ಲೈನ್ಸ್‌ನ ವಿಮಾನ ಸೇರಿ ರವಿವಾರವೂ ಸುಮಾರು 50 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ಕಳೆದ 14 ದಿನಗಳಲ್ಲಿ ಸುಮಾರು 355 ವಿಮಾನಗಳಿಗೆ ಬೆದರಿಕೆ ಬಂದಂತಾಗಿದೆ.
ಅಲ್ಲದೇ ದೇಶದ ಪ್ರತಿಷ್ಠಿತ ಹೊಟೇಲ್‌ಗಳಿಗೂ ಹುಸಿ ಬಾಂಬ್ ಬೆದರಿಕೆ ಬರು ತ್ತಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿನ 10 ಹೊಟೇಲ್‌ಗಳಿಗೆ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, 4.6 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ. ಶನಿವಾರವಷ್ಟೇ ಗುಜರಾತ್‌ನ ರಾಜ್‌ಕೋಟ್‌ನಲ್ಲಿನ 10 ಹೊಟೇಲ್, ಶುಕ್ರವಾರ ತಿರುಪತಿಯ 3 ಹೊಟೇಲ್‌ಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು.
ಹುಸಿ ಬಾಂಬ್ ಬೆದರಿಕೆ ಹಾಕುವವರಿಗೆ ವಿಮಾನ ಪ್ರಯಾಣ ನಿಷೇಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಲು ಕೇಂದ್ರ ಸರಕಾರ ಚಿಂತಿಸಿದೆ. ಈ ಬೆದರಿಕೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಏಜೆನ್ಸಿಗಳು, ಗುಪ್ತಚರ ಸಂಸ್ಥೆಗಳ ಸಹಾಯ ಪಡೆಯುತ್ತಿದ್ದೇವೆ. ಅಪರಾಧಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದಲ್ಲದೇ ಅವರಿಗೆ ದಂಡವನ್ನೂ ವಿಧಿಸಲಾಗುವುದು.
ರಾಮಮೋಹನ್ ನಾಯ್ಡು, ವಿಮಾನಯಾನ ಸಚಿವ