ಹನೂರು: ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮೀಸಲಾಗಿದೆ.
13 ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ 2019ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನ, ಕಾಂಗ್ರೆಸ್ 4 ಸ್ಥಾನ ಹಾಗೂ ಬಿಜೆಪಿ 3 ಸ್ಥಾನ ಗೆದ್ದಿತ್ತು. ಅಧಿಕಾರದ ಚುಕ್ಕಾಣಿ ಹಿಡಿಯಲು 7 ಸ್ಥಾನಗಳ ಅವಶ್ಯಕತೆಯಿದೆ. ಆದರೆ, ಅತಂತ್ರ ಫಲಿತಾಂಶ ಬಂದಿರುವುದರಿಂದ ಮೈತ್ರಿಮಾಡಿಕೊಂಡು ಆಡಳಿತ ನಡೆಸುವುದು ಅನಿವಾರ್ಯತೆ ಆಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಪಪಂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಹೆಚ್ಚು ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಜೆಡಿಎಸ್‌ಗೆ ಅಧಿಕಾರ ಸಿಗುವುದುಕಷ್ಟವಿದೆ. ಮೂವರು ಸದಸ್ಯರನ್ನು ಹೊಂದಿದ್ದ ಬಿಜೆಪಿಯಲ್ಲಿ ಓರ್ವ ಸದಸ್ಯರು ಕೊರೊನಾಗೆ ಬಲಿಯಾದ ಕಾರಣ ಪಪಂನಲ್ಲಿ 12 ಸದಸ್ಯರು ಮಾತ್ರವಿದ್ದು, ಮತ್ತೂಂದು ಸ್ಥಾನಕ್ಕೆ ಉಪಚುನಾವಣೆ ಎದುರಾಗಲಿದೆ.
ಮೀಸಲಾತಿ ಗೊಂದಲ: ಇದೀಗ ಪ್ರಕಟಗೊಂಡಿರುವ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಲಭಿಸಿದ್ದು, ಕಾಂಗ್ರೆಸ್‌ನಿಂದ ಯಾವ ಮಹಿಳಾ ಸದಸ್ಯರು ಆಯ್ಕೆಯಾಗಿಲ್ಲ. ಹೀಗಾಗಿ ಅಧ್ಯಕ್ಷ ಹುದ್ದೆಯು ಬಿಜೆಪಿ ಅಥವಾ ಜೆಡಿಎಸ್ ಪಾಲಾಗಲಿದೆ. ಇನ್ನು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಬಿ ಮೀಸಲಾಗಿದ್ದು,ಈವರ್ಗಕ್ಕೆ ಸೇರಿರುವ ಯಾವ ಸದಸ್ಯರೂ ಇಲ್ಲ. ಒಟ್ಟಾರೆ ಹನೂರು ಪಟ್ಟಣಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆಬಿಜೆಪಿಯಿಂದ ಇಬ್ಬರು ಸದಸ್ಯರು, ಜೆಡಿಎಸ್‌ನಿಂದ3ಸದಸ್ಯರು ಅರ್ಹರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಯಾದರೆ12ನೇ ವಾರ್ಡ್ ಸದಸ್ಯೆ ಚಂದ್ರಮ್ಮ ಆಯ್ಕೆ ಬಹುತೇಕ ಖಚಿತವಾಗಲಿದೆ.
ಬದ್ಧವೈರಿಗಳ ಸಮಾಗಮಕ್ಕೆ ವೇದಿಕೆ : ಹನೂರು ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಮಾಜಿ ಸಚಿವದ್ವಯರಾದ ದಿವಂಗತ ರಾಜೂಗೌಡ ಮತ್ತು ನಾಗಪ್ಪ ಕುಟುಂಬಗಳ ಮಧ್ಯೆಯೇ ರಾಜಕೀಯ ಜಿದ್ದಾಜಿದ್ದಿ ಏರ್ಪಡುತಿತ್ತು. ಈ ನಡುವೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತೃತೀಯ ಶಕ್ತಿಯಾಗಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಂಜುನಾಥ್ 44ಸಾವಿರಕ್ಕೂ ಅಧಿಕ ಮತ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತೃತೀಯ ಶಕ್ತಿಯಾಗಿ ಮಂಜುನಾಥ್ ಹೊರಹೊಮ್ಮಿರುವುದು ಹಾಲಿ ಕಾಂಗ್ರೆಸ್ ಶಾಸಕ
ನರೇಂದ್ರಮತ್ತು ಬಿಜೆಪಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ತೃತೀಯ ಶಕ್ತಿಯನ್ನು ಕುಗ್ಗಿಸಲು ಪಪಂ ಅಧ್ಯಕ್ಷ ಚುನಾವಣೆಯು ರಾಜಕೀಯ ಬದ್ಧವೈರಿಗಳಾಗಿರುವ ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಸಮಾಗಮಕ್ಕೆ ವೇದಿಕೆಯಾಗಲಿದೆ ಎಂಬುವ ಮಾತು ರಾಜಕೀಯ ವಲಯದಲ್ಲಿಕೇಳಿ ಬರುತ್ತಿದೆ.
–ವಿನೋದ್‌ಎನ್.ಗೌಡ