Advertisement
ಪಟ್ಟಣದ ಜಿ.ವಿ.ಗೌಡ ಪ್ರೌಢ ಶಾಲೆಯಲ್ಲಿ ತಾ.ಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ಚೊಚ್ಚಲ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿತ್ತು.
Related Articles
Advertisement
ಪ್ರತಿಧ್ವನಿಸಿದ ಯೂರಿಯಾ ರಸಗೊಬ್ಬರ ಅಭಾವ: ಸಭೆಯಲ್ಲಿ ಕೃಷಿ ಇಲಾಖಾ ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ ತಾಲೂಕಿನ 32665 ಹೆಕ್ಟೇರ್ ಕೃಷಿ ಭೂಮಿ ಪೈಕಿ 31889 ಹೆಕ್ಟೇರ್ ನಲ್ಲಿ ಬಿತ್ತನೆ ಕಾರ್ಯ ಮುಗಿದಿದ್ದು ಶೇ.94ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇಲಾಖೆಯಲ್ಲಿ 2.54ಲಕ್ಷ ಅನುದಾನದ ಲಭ್ಯತೆಯಿದ್ದು ಈ ಅನುದಾನದಡಿ ಕೊಳ್ಳೇಗಾಲ – ಹನೂರು ತಾಲೂಕಿಗೆ ಅನುದಾನ ವಿಭಜನೆಯಾದ ಕೂಡಲೇ ಸವಲತ್ತು ವಿತರಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ತಾ.ಪಂ ಸದಸ್ಯ ನಟರಾಜು ಮಾತನಾಡಿ ತಾಲೂಕಿನಾದ್ಯಂತ ಯೂರಿಯಾ ಅಭಾವ ತಲೆದೋರಿದೆ. ಕೆಲ ಅಂಗಡಿಯವರು ಯೂರಿಯಾ ಕ್ಕೆ ಕೃತಕ ಅಭಾವ ಸೃಷ್ಠಿಸಿ ಪ್ರತಿ ಮೂಟೆಗೂ 400 ರೂ ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದಿದೆಯೇ? ಬಂದಿದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಸುಂದ್ರಮ್ಮ ಯೂರಿಯಾ ಅಭಾವ ಕೇವಲ ಹನೂರು ತಾಲೂಕಿನ ಸಮಸ್ಯೆಯಲ್ಲ, ಈ ಸಮಸ್ಯೆ ಇಡೀ ರಾಜ್ಯದಲ್ಲಿಯೇ ಇದೆ. ಆದರೂ ಸಹ ಇಲಾಖೆಯಿಂದ ಯುರಿಯಾ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಮಂಡ್ಯ ಜಿಲ್ಲೆಯಿಂದ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಅದಾಗ್ಯೂ ಕೃತಕ ಅಭಾವ ಸೃಷ್ಠಿಸಿದಲ್ಲಿ ಸಂಬಂಧಪಟ್ಟ ಅಂಗಡಿಯವರಿಗೆ ನೋಟಿಸ್ ವಿತರಣೆ ಮಾಡಲು ಮತ್ತು ಅವರ ಲೈಸನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಸುಳ್ವಾಡಿ, ಮಾರ್ಟಳ್ಳಿಯಲ್ಲಿ ನೀರಿನ ಅಭಾವ: ಸಭೆಯಲ್ಲಿ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ವಿಭಾಗದ ಎಯಯ ಮಹದೇವಮೂರ್ತಿ ಮಾತನಾಡಿ ಬಹುಗ್ರಾಮ ಕುಡಿಯುವ ನೀರು ಯಓಜನೆಯ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ತಾಲೂಕಿನ ಮಾರ್ಟಳ್ಳಿ, ಸಂದನಪಾಳ್ಯ ಭಾಗದಲ್ಲಿ ಕುಡಿಯುವ ನೀರಿನ ಅಭಾವವಿದ್ದು ಗ್ರಾಮ ಪಂಚಾಯಿತಿ ಮೂಲಕ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಾಲಯ ಇದೇ ತಿಂಗಳ 20ರಿಂದ ತೆರೆಯಲಿದ್ದು ಇಲ್ಲಿಯೂ ನೀರಿನ ಅಭಾವವಿದೆ. ಈ ಭಾಗದಲ್ಲಿ ನೀರಿನ ಲಭ್ಯತೆಯಿಲ್ಲವಾದ ಪರಿಣಾಮ ಬೋರ್ ಕೊರೆದರೂ ನೀರು ದೊರೆಯುತಿಲ್ಲ. ಈ ಭಾಗದ ಸಮಸ್ಯೆಯನ್ನು ಬಗೆಹರಿಸಲು ಕನಿಷ್ಠ 10ಲಕ್ಷ ಅನುದಾನದ ಅವಶ್ಯಕತೆಯಿದ್ದು ಮುಂದಿನ ದಿನದಲ್ಲಿ ಕ್ರಿಯಾಯೋಜನೆ ತಯಾರಿಸುವಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ತಾ.ಪಂ ಸದಸ್ಯ ರಾಜೇಂದ್ರ ಮಾತನಾಡಿ ಹೆಚ್ಚಿನ ಅನುದಾನ ಅವಶ್ಯಕತೆಯಿದ್ದಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಪಶು ಸಂಗೋಪನಾ ಅಧಿಕಾರಿ ಗೈರಿಗೆ ಸದಸ್ಯರ ಗರಂ: ಪಶು ಸಂಗೋಪನಾ ಇಲಾಖೆಯಿಂದ ಲಭ್ಯವಿರುವ ಅನುದಾನ ಮತ್ತು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಹಾಯಕ ನಿರ್ದೇಶಕ ಸಿದ್ಧರಾಜು ಮಾಹಿತಿ ನೀಡುತ್ತಿದ್ದರು. ಈ ವೇಳೆ ಕೆಲ ಸದಸ್ಯರು ಸಭೆಗೆ ಹಿರಿಯ ಅಧಿಕಾರಿಯಾದ ವೆಂಕಟರಾಮು ಅವರು ಆಗಮಿಸಬೇಕಿತ್ತು. ಈ ಹಿಂದಿನ ಸಭೆಯ ಚರ್ಚಾ ವಿಷಯ ಕೈಗೊಂಡ ಕ್ರಮಗಳ ಬಗ್ಗೆ ಅವರಿಂದ ಮಾಹಿತಿ ಬೇಕಿತ್ತು. ಆದರೆ ಅವರು ಸಭೆಗೆ ಗೈರಾಗಿರುವುದು ಸರಿಯಾದ ಕ್ರಮವಲ್ಲ ಎಂದು ಗರಂ ಆದರು.
ಇದೇ ವೇಳೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಪ್ರಗತಿಯಲ್ಲಿರುವ ಕಾರ್ಯಕ್ರಮಗಳ ಬಗ್ಗೆ ಮತ್ತು ಕ್ರಿಯಾಯೋಜನೆ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.