ಹನೂರು (ಚಾಮರಾಜನಗರ): ನೂತನವಾಗಿ ರಚನೆಯಾಗಿರುವ ಹನೂರು ತಾಲೂಕು ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗಾಗಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕಾಗಿ 4 ಸದಸ್ಯರ ನಡುವೆ ಪೈಪೋಟಿ ನಡೆಯುತ್ತಿದ್ದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಜರುಗುತ್ತಿದೆ.
ರಾಜ್ಯದ ಅತಿ ದೊಡ್ಡ ತಾಲೂಕುಗಳಲ್ಲಿ ಒಂದಾಗಿದ್ದ ಕೊಳ್ಳೇಗಾಲ ತಾಲೂಕನ್ನು ವಿಭಜಿಸಿ ಹನೂರು ತಾಲೂಕು ರಚನೆಯಾದ ಬಳಿಕ ಪ್ರಾದೇಶಿಕವಾರು ಹಂಚಿಕೆಯಡಿ ನೂತನ ಹನೂರು ತಾಲೂಕಿಗೆ 17 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. 17 ಸದಸ್ಯ ಬಲದ ಹನೂರು ತಾಲೂಕು ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 9 ಸದಸ್ಯರ ಅವಶ್ಯಕತೆಯಿದ್ದು ಕಾಂಗ್ರೆಸ್ ಪಕ್ಷದ 11, ಬಿಜೆಪಿಯ 5 ಮತ್ತು ಜಾತ್ಯಾತೀತ ಜನತಾದಳದ ಓರ್ವ ಸದಸ್ಯರಿದ್ದಾರೆ. ಹಾಲಿ ತಾಲೂಕು ಪಂಚಾಯಿತಿಯ ಅವಧಿ ಇನ್ನು 10 ತಿಂಗಳಷ್ಟೇ ಬಾಕಿಯಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ವರಿಷ್ಠರ ಅಣತಿಯಂತೆಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಧ್ಯಕ್ಷರ ರೇಸ್‍ನಲ್ಲಿ 4 ಸದಸ್ಯರು: ತಾಲೂಕು ಪಂಚಾಯಿತಿಯ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಿರುವುದರಿಂದ ಕೌದಳ್ಳಿಯ ಲತಾ, ಅಜ್ಜೀಪುರದ ಸವಿತಾ, ಲೊಕ್ಕನಹಳ್ಳಿಯ ರುಕ್ಮಿಣಿ ವೇಲು ಮತ್ತು ಹೂಗ್ಯಂನ ಸುಮತಿ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಕೌದಳ್ಳಿ ಕ್ಷೇತ್ರದ ಲತಾ ಮತ್ತು ಲೊಕ್ಕನಹಳ್ಳಿಯ ರುಕ್ಮಿಣಿ ವೇಲು ತಾಲೂಕು ಪಂಚಾಯಿತಿಗೆ 2ನೇ ಬಾರಿ ಆಯ್ಕೆಯಾಗಿರುವುದರಿಂದ ಹಿರಿತನದ ಆಧಾರದ ಮೇಲೆ ಈ ಇಬ್ಬರು ಸದಸ್ಯರ ನಡುವೇ ನೇರ ಪೈಪೋಟಿ ಏರ್ಪಟ್ಟಿದೆ. ಇದನ್ನು ಹೊರತುಪಡಿಸಿ 4 ಜನರೂ ತಮ್ಮ ವ್ಯಾಪ್ತಿಯ ಜಿ.ಪಂ ಸದಸ್ಯರು ಮತ್ತು ಸ್ಥಳೀಯ ಮುಖಂಡರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಿದ್ದು ಯಾರಿಗೆ ಅಧ್ಯಕ್ಷಗಾದಿ ಒಲಿಯಲಿದೆ ಎಂಬುವ ಕುತೂಹಲಕ್ಕೆ ತೆರೆ ಎಳೆಯಲು ಜುಲೈ 29ರವರೆಗೆ ಕಾದು ನೋಡಲೇಬೇಕಿದೆ.
ಉಪಾಧ್ಯಕ್ಷ ರೇಸ್‍ನಲ್ಲಿ ಶಾಗ್ಯ ಸುಮತಿ: ತಾಲೂಕು ಪಂಚಾಯಿತಿಯ ಉಪಾಧ್ಯಕ್ಷೆ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಈ ಹುದ್ದೆಯನ್ನು ಶಾಗ್ಯ ಕ್ಷೇತ್ರ ಸುಮತಿ ಅವರಿಗೆ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಒಂದೊಮ್ಮೆ ಅಧ್ಯಕ್ಷ ಹುದ್ದೆಯಲ್ಲಿ ಇಬ್ಬರ ನಡುವೆ ಹೆಚ್ಚಿನ ಪೈಪೋಟಿ ಏರ್ಪಟ್ಟಲ್ಲಿ ಒಬ್ಬರಿಗೆ ಅಧ್ಯಕ್ಷ ಹುದ್ದೆ ನೀಡಿ ಮತ್ತೊಬ್ಬರಿಗೆ ಉಪಾಧ್ಯಕ್ಷ ಹುದ್ದೆ ನೀಡಿದರೂ ಅಚ್ಚರಿಯಿಲ್ಲ.
ತಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸೋಮವಾರ ತಾ.ಪಂ ಸದಸ್ಯರು ಮತ್ತು ಮುಖಂಡರ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಸಮುದಾಯವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ ದೊರಕದವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಶಾಸಕ ಆರ್.ನರೇಂದ್ರ ಹೇಳಿದರು.
ವರದಿ: ವಿನೋದ್ ಎನ್ ಗೌಡ, ಹನೂರು