Advertisement

ಕ್ರಿಕೆಟ್ ಮುಂತಾದ ಪಂದ್ಯಾವಳಿ ನಡೆಸುವವರ ವಿರುದ್ಧ ಕ್ರಮ: ಹನೂರು ಶಾಸಕ ಆರ್.ನರೇಂದ್ರ ಸೂಚನೆ

05:34 PM Jul 06, 2020 | keerthan |

ಹನೂರು (ಚಾಮರಾಜನಗರ): ಕಳೆದ 100ಕ್ಕೂ ಹೆಚ್ಚು ದಿನಗಳಿಂದ ಹಸಿರು ವಲಯದಲ್ಲಿದ್ದ ತಾಲೂಕಿಗೂ ಕೋವಿಡ್-19 ಮಹಾಮಾರಿ ಸೋಂಕು ತಗುಲಿದ್ದು, ಇದನ್ನು ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ಎಲ್ಲಾ ಇಲಾಖಾ ಅಧಿಕಾರಿಗಳು ಕಟ್ಟುನುಟ್ಟಾಗಿ ಪಾಲಿಸಬೇಕು ಎಂದು ಶಾಸಕ ಆರ್.ನರೇಂದ್ರ ಸೂಚಿಸಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಕೋವಿಡ್-19 ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ನರೇಂದ್ರ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ 3 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಕಟ್ಟುನ ಕ್ರಮಗಳನ್ನು ಕೈಗೊಳ್ಳಬೇಕು. ಈ ದಿಸೆಯಲ್ಲಿ ತಾಲೂಕಿನಾದ್ಯಂತ ಜಾತ್ರೆ, ಗ್ರಾಮದೇವತೆಯ ಹಬ್ಬಗಳನ್ನು ರದ್ದುಪಡಿಸಲು ಗ್ರಾಮಸ್ಥರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ತಾಲೂಕಿನಾದ್ಯಂತ ಕೆಲ ಯುವಕರು ಕ್ರಿಕೆಟ್ ಸೇರಿದಂತೆ ಇನ್ನಿತರ ಆಟಗಳನ್ನು ಆಡಲು, ಪಂದ್ಯಾವಳಿಗಳನ್ನು ಏರ್ಪಡಿಸಲು 60-70 ಸಂಖ್ಯೆಯಲ್ಲಿ ಒಂದೆಡೆ ಸೇರುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಜೂಜಾಟ ಯಥೇಚ್ಛವಾಗಿ ನಡೆಯುತ್ತಿದ್ದು ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಮದುವೆ ಸಮಾರಂಭಗಳಿಗೆ 50 ಕ್ಕಿಂತ ಹೆಚ್ಚು ವ್ಯಕ್ತಿಗಳು ಮತ್ತು ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ಇರುವ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕಂತು ಸೇರಿದಂತೆ ಇನ್ನಿತರ ಸಣ್ಣ ಮಟ್ಟದ ಹಣಕಾಸು ವ್ಯವಹಾರಗಳಲ್ಲಿ ಮುಂದಿನ 3 ತಿಂಗಳು ಬಲವಂತದ ವಸೂಲಾತಿಗೆ ಒತ್ತಾಯ ಮಾಡಬಾರದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ತಾಳಬೆಟ್ಟದಲ್ಲಿ ಪರೀಕ್ಷೆ ನಡೆಯಲಿ:  ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳನ್ನು ಶ್ರೀ ಕ್ಷೇತ್ರದಲ್ಲಿ ತಪಾಸಣೆಗೆ ಒಳಪಡಿಸುವ ಮುನ್ನವೇ ತಾಳಬೆಟ್ಟದಲ್ಲಿಯೇ ಒಮ್ಮೆ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು. ಅಲ್ಲದೆ ಶ್ರೀ ಕ್ಷೇತ್ರಕ್ಕೆ ಸರಕು ಸಾಗಾಣಿಕೆ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಬೇಕು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ವೃತ್ತ ನಿರೀಕ್ಷಕ ಮಹೇಶ್ ಅವರಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಉಳಿಯಲಿ:  ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಉಳಿಯುತ್ತಿಲ್ಲ. ಇದರಿಂದಾಗಿ ಆ ಭಾಗಕ್ಕೆ ಬೇರೆ ರಾಜ್ಯಗಳಿಂದ ಅಥವಾ ಊರುಗಳಿಂದ ಬಂದವರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಉಳಿದುಕೊಳ್ಳಲು ಕ್ರಮ ವಹಿಸುವಂತೆ ಸೂಚನೆ ನಿಡುವಂತೆ ತಾ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ಅವರಿಗೆ ಸೂಚಿಸಿದರು.

Advertisement

ಇದೇ ವೇಳೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಂದ ಕೋರೋನಾ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಕೊಳ್ಳೇಗಾಲ ತಹಸೀಲ್ದಾರ್ ಕುನಾಲ್, ಹನೂರು ತಹಸೀಲ್ದಾರ್ ಬಸವರಾಜು ಚಿಗರಿ, ಡಿವೈಎಸ್ಪಿ ನವೀನ್‍ಕುಮಾರ್, ತಾ.ಪಂ ಇಓ ಶ್ರೀನಿವಾಸ್, ರಾಮಾಪುರ ಸಿಪಿಐ ಮನೋಜ್‍ಕುಮಾರ್, ಮ.ಬೆಟ್ಟ ಸಿಪಿಐ ಮಹೇಶ್, ಕೊಳ್ಳೇಗಾಲ ಗ್ರಾಮಾಂತರ ಸಬ್ ಇನ್ಸ್‍ಪೆಕ್ಟರ್ ಅಶೋಕ್‍ಕುಮಾರ್, ವೈದ್ಯಾಧಿಕಾರಿ ಡಾ||ಪುಷ್ಪಾರಾಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ, ಆರೋಗ್ಯ ನಿರೀಕ್ಷಕ ಮಾದೇಶ್, ಆರ್‍ಐ ಮಾದೇಶ್, ವಿಎ ಶೇಷಣ್ಣ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next