Advertisement

ಶಾಂತಿಯುತವಾಗಿ ನಡೆದ ಸ್ಥಳೀಯ ಚುನಾವಣೆ

11:59 AM May 30, 2019 | Naveen |

ಹನೂರು: ಪಟ್ಟಣ ಪಂಚಾಯಿತಿಯ 13 ವಾರ್ಡುಗಳಿಗೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿದ್ದು 9,024 ಮತದಾರರ ಪೈಕಿ 7231 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದು ಶೇ.80.13 ಮತದಾನವಾಗಿದೆ.

Advertisement

ಹನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ವಾರ್ಡುಗಳಿದ್ದು 41 ಅಭ್ಯರ್ಥಿಗಳು ಕಣದಲ್ಲಿದ್ದರು. 13 ವಾರ್ಡುಗಳ ಚುನಾವಣೆಗಾಗಿ 4 ಮತಕೇಂದ್ರಗಳಲ್ಲಿ 13 ಮತಗಟ್ಟೆಗಳನ್ನು ತೆರೆಯಲಾಗಿತ್ತು. 1, 2, 3, 4ನೇ ವಾರ್ಡಿನ ಮತದಾರರಿಗೆ ಬಿ.ಮುನಿಯಪ್ಪಗೌಡ ಪ್ರೌಢ ಶಾಲೆ 5, 6, 7, 8ನೇ ವಾರ್ಡಿನ ಮತದಾರರಿಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, 9, 10, 11ನೇ ವಾರ್ಡಿನ ಮತದಾರರಿಗೆ ಕ್ರಿಸ್ತರಾಜ ವಿದ್ಯಾಸಂಸ್ಥೆ ಮತ್ತು 12 ಮತ್ತು 13ನೇ ವಾರ್ಡುಗಳ ಮತದಾರರಿಗೆ ಆರ್‌.ಎಸ್‌.ದೊಡ್ಡಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗಳನ್ನು ತೆರೆದು ಮತದಾರರಿಗೆ ಅವಕಾಶ ಕಲ್ಪಿಸಲಾಗಿತ್ತು. 7230 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಮತದಾರರಿಗೆ ಡಿಮ್ಯಾಂಡ್‌: ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಇನ್ನಿತರೆ ಯಾವುದೇ ಚುನಾವಣೆಗಳಲ್ಲಿ ನಡೆಯದ ಬಿರುಸಿನ ಮತದಾನ ಪಪಂ ಚುನಾವಣೆಯಲ್ಲಿ ಜರುಗಿತು. ಮತದಾರರು ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಮತಗಟ್ಟೆ ಹೊರಗಡೆ ಆಯಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಪಕ್ಷದ ಚಿಹ್ನೆಯುಳ್ಳ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಕೈ ಮುಗಿದು ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವೃದ್ಧರಿಗೆ ಸಹಾಯ: ತಮ್ಮನ್ನು ಬೆಂಬಲಿಸಲಿ ಎಂಬ ಕಾರಣದಿಂದ ಪಟ್ಟಣದ ತೋಟದ ಮನೆಗಳಲ್ಲಿ ವಾಸವಿದ್ದ ಹಾಗೂ ನಡೆದು ಬರಲು ಸಾಧ್ಯವಾಗದ ವಯೋವೃದ್ಧರು, ಅಂಗವಿಕಲರನ್ನು ಬೈಕ್‌-ಆಟೋ ಕಾರು ಇನ್ನಿತರ ವಾಹನಗಳ ಮೂಲಕ ಕರೆ ತಂದು ಮತದಾರರನ್ನು ಪುನಃ ಅವರ ಸ್ಥಳಕ್ಕೆ ತಲುಪಿಸುತ್ತಿದ್ದು ಕಂಡು ಬಂದಿತು.

ಕಾಳಜಿಯಿಂದ ಮಾಹಿತಿ: ಹನೂರು ಪಪಂ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿರುವ ಬೆಂಗಳೂರು-ಮೈಸೂರು ಸೇರಿದಂತೆ ವಿವಿಧ ನಗರ ಪಟ್ಟಣಗಳಿಗೆ ವಲಸೆ ಹೋಗಿ ನೆಲೆಸಿರುವ ಮತದಾರರನ್ನು ಕರೆ ತರುವ ನಿಟ್ಟಿನಲ್ಲಿಯೂ ಕೂಡ ಆಯಾ ಪಕ್ಷಗಳ ಅಭ್ಯರ್ಥಿಗಳು ಗಮನಹರಿಸಿರುವುದು ಕಂಡು ಬಂದಿತು. ಗುರುತಿನ ಚೀಟಿ, ಮತಗಟ್ಟೆ ಸಂಖ್ಯೆ ಇನ್ನಿತರೆ ಮಾಹಿತಿ ತಿಳಿಯದೇ ಪರದಾಡು ತ್ತಿದ್ದವರಿಗೆ ರಾಜಕೀಯ ಮುಖಂಡರು ಅತ್ಯಂತ ಕಾಳಜಿಯಿಂದ ಮಾಹಿತಿ ನೀಡುತ್ತಿದ್ದರು. ಮತದಾರರ ಮನವೊಲಿಸುವಲ್ಲಿ ಕುರುಡು ಕಾಂಚಾಣ ಕೂಡ ಸದ್ದು ಮಾಡಿದೆ ಎನ್ನಲಾಗಿದ್ದು, ಪಟ್ಟಣದ ಪಂಚಾಯಿತಿಯ 8 ಮತ್ತು 9ನೇ ವಾರ್ಡಿನಲ್ಲಿ ಕುರುಡು ಕಾಂಚಾಣ ನರ್ತನ ಮಾಡಿದೆ ಎನ್ನಲಾಗಿದೆ.

Advertisement

ಪಟ್ಟಣದಲ್ಲಿ ಹಬ್ಬದ ವಾತಾವರಣ: ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. 4 ಮತಗಟ್ಟೆಗಳ ಮುಂದೆಯೂ ಜನಜಂಗುಳಿಯೇ ನಿರ್ಮಾಣವಾಗಿದ್ದು ಎಲ್ಲಾ ಮತಗಟ್ಟೆಗಳ ಮುಂದೆ ಆಯಾ ಪಕ್ಷಗಳ ಅಭ್ಯರ್ಥಿಗಳು ಶಾಮಿಯಾನ ಹಾಕಿಸಿ, ಕಿರ್ಚಿಗಳನ್ನು ಹಾಕಿಸಿ ಮತದಾರರಿಗೆ ಅವಶ್ಯಕವಾದ ಮಾಹಿತಿಗಳನ್ನು ನೀಡುತ್ತಾ ಮತಚೀಟಿ ದೊರೆಯದೆ ಇದ್ದ ಮತದಾರರಿಗೆ ಪಟ್ಟಿಯಲ್ಲಿ ಅವರ ಕ್ರಮ ಸಂಖ್ಯೆಗಳನ್ನು ಹುಡುಕುತ್ತಾ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಒಟ್ಟಾರೆ ಇಂದಿನ ಚುನಾವಣೆ ಹಬ್ಬದ ಮಾದರಿಯಲ್ಲಿ ಜರುಗಿದ್ದ ಜನ ಅಲ್ಲಲ್ಲಿ ಗುಂಪು ಗುಂಪಾಗಿ ಚುನಾವಣಾ ವಿಚಾರಗಳನ್ನು ಚರ್ಚಿಸುತ್ತಿದ್ದುದು ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next