Advertisement

ಹನೂರು: ಬಿಸಿಯೂಟದಲ್ಲಿ ಹಲ್ಲಿ, 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

06:40 PM Jan 10, 2022 | Team Udayavani |

ಹನೂರು: ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ವಡಕೆಹಳ್ಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಜರುಗಿದೆ.

Advertisement

ತಾಲೂಕಿನ ವಡಕೆಹಳ್ಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದರು. ಆದರೆ ಊಟ ಮಾಡುತ್ತಿರುವ ವೇಳೆಯೇ ಕೆಲ ಮಕ್ಕಳು ಅಸ್ವಸ್ಥಗೊಂಡು ವಾಂತಿ ಮಾಡಲಾರಂಭಿಸಿದ್ದಾರೆ. ಈ ವೇಳೆಗೆ ಶಾಲಾ ಶಿಕ್ಷಕರು ಮತ್ತು ಅಡುಗೆಯವರು ಊಟವನ್ನು ಪರಿಶೀಲನೆ ನಡೆಸಿದಾಗ ಊಟದಲ್ಲಿ ಹಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಊಟ ಸೇವಿಸಿದ್ದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಮಾಪುರದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ತಹಸೀಲ್ದಾರ್& ಬಿಇಓ
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಹನೂರು ತಹಸೀಲ್ದಾರ್ ನಾಗರಾಜು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮತ್ತು ಅಧಿಕಾರಿಗಳ ತಂಡ ಕೌದಳ್ಳಿ ಮತ್ತು ರಾಮಾಪುರ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ||ಅನುಷ್, ಡಾ||ರಾಜೇಶ್ ಮತ್ತು ಡಾ||ಮನು ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು ಯಾವುದೇ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮಸ್ಥರ ಆಗ್ರಹ
ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ಗಾಬರಿಗೊಂಡ ಪೋಷಕರು ಆಸ್ಪತ್ರೆಗಳ ಮುಂದೆ ಜಮಾಯಿಸಿದ್ದರು,. ಈ ವೇಳೆ ಅಧಿಕಾರಿಗಳನ್ನು ಕಂಡ ಪೋಷಕರು ಶಾಲೆಯಲ್ಲಿ ಮೇಲಿಂದ ಮೇಲೆ ಈ ರೀತಿಯ ಘಟನೆ ಸಂಭವಿಸುತ್ತಿದ್ದು 2016ರ ಜುಲೈ 21ರಂದೂ ಸಹ ಇದೇ ರೀತಿ ಘಟನೆ ಸಂಭವಿಸಿತ್ತು. ಕೆಲ ದಿನಗಳ ಕಾಲ ಅಡುಗೆಯವವರನ್ನು ತೆಗೆದುಹಾಕಿ ಬಳಿಕ ಅವರನ್ನೇ ನೇಮಕ ಮಾಡಿಕೊಳ್ಳಲಾಗಿತ್ತು. ಶಾಲೆಯಲ್ಲಿ ಶಿಕ್ಷರು ಮತ್ತು ಅಡುಗೆಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಕೂಡಲೇ ಎಲ್ಲಾ ಶಿಕ್ಷರನ್ನು ಮತ್ತು ಅಡುಗೆಯವರನ್ನು ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಇಓ ಸ್ವಾಮಿ ಮಾತನಾಡಿ ಮೊದಲು ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸೋಣ, ನಾಳೆಯೇ ಶಾಲೆಯಲ್ಲಿ ಪೋಷಕರ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಚರ್ಚಿಸೋಣ ಎಂದು ಪೋಷಕರ ಮನವೊಲಿಸಿದರು.

Advertisement

1 ಗಂಟೆಗಳ ಕಾಲ ಶಿಕ್ಷಕರು ಯಾರಿಗೂ ಮಾಹಿತಿ ನೀಡಿಲ್ಲ

ಘಟನೆ ಬೆಳಕಿಗೆ ಬಂದ ಕೂಡಲೇ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿ, ಆಂಬುಲೆನ್ಸ್‍ಗೆ ಕರೆ ಮಾಡುವ ಸೌಜನ್ಯವನ್ನೂ ತೋರಿಲ್ಲ. ಘಟನೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಶಾಲೆಯ ಕಾಂಪೌಂಡ್ ಮುಚ್ಚಿ ಬೀಗÀ ಜಡಿಯಲಾಗಿತ್ತು. ಘಟನೆ ಬೆಳಕಿಗೆ ಬಂದ 1 ಗಂಟೆಗಳ ಬಳಿಕ 3 ವಿದ್ಯಾರ್ಥಿಗಳು ಹೊಟ್ಟೆನೋವು ಎಂದು ನರಳಾಡಿದರು, ಈ ವೇಳೆಯೂ ಘಟನೆಯನ್ನು ಮುಚ್ಚು ಹಾಕಲು ಪ್ರಯತ್ನಗಳು ನಡೆಯುತಿತ್ತು. ಬಳಿಕ ಇದನ್ನು ನೋಡಲಾಗದೆ ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷರಿಗೆ ಕರೆ ಮಾಡಿ ತಿಳಿಸಿದ ಬಳಿಕ ಪೋಷಕರಿಗೆ ವಿಷಯು ತಿಳಿದು ಆಸ್ಪತ್ರೆಗೆ ಕರೆದೊಯ್ಯಲು ಕ್ರಮವಹಿಸಲಾಯಿತು ಎಂದು ಶಾಲೆಯಲ್ಲಿಯೇ ಗಾರೆಕೆಲಸ ಮಾಡುತ್ತಿದ್ದು ನೌಕರ ಸತ್ಯ ಘಟನೆಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಘಟನೆಯ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಮಕ್ಕಳು ಆರೋಗ್ಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಆ ದೇವರ ದಯೆಯಿಂದ ಯಾವುದೇ ಹೆಚ್ಚಿನ ತೊಂದೆಗಳಾಗಿಲ್ಲ. ಘಟನೆಯ ಬಗ್ಗೆ ತನಿಖೆನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆರ್.ನರೇಂದ್ರ, ಶಾಸಕ

2016ರ ಜುಲೈ 21ರಂದು ಘಟನೆ ನಡೆದ ಬಳಿಕ ಗ್ರಾಮಸ್ಥರೆಲ್ಲ ತಮ್ಮ ಬಳಿ ಬಂದು ಹಳೇಯ ಅಡುಗೆಯವರನ್ನೇ ಮುಂದುವರೆಸುವಂತೆ ಮನವ ಮಾಡಿದ ಹಿನ್ನೆಲೆ ಅವರನ್ನೇ ಮುಂದುವರೆಸಲಾಗಿತ್ತು. ಇದೀಗ ಘಟನೆ ಮತ್ತೊಮ್ಮೆ ಮರುಕಳಿಸಿದ್ದು ಶಾಲೆಯಲ್ಲಿ ಪೋಷಕರ ಸಭೆ ಕರೆದು ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next