ಹನೂರು(ಚಾಮರಾಜನಗರ): ಅಕ್ರಮ ಬೇಟೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಚಿರತೆಯ ಮೃತದೇಹ , ಅದರ ಕಾಲುಗಳು ಮತ್ತು 2 ನಾಡ ಬಂದೂಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಕೊಳ್ಳೇಗಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು ಮತ್ತು ಅರುಣ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ನಾಪತ್ತೆ ಆಗಿರುವ ಮತ್ತೊಬ್ಬ ಆರೋಪಿ ನಟರಾಜು ಬಂಧನಕ್ಕೆ ಪೊಲೀಸರು ಬೀಸಿದ್ದಾರೆ .
ಏನಿದು ಘಟನೆ: ಕೆಲವು ವ್ಯಕ್ತಿಗಳು ನಾಡ ಬಂದೂಕಿನ ಜೊತೆ ಬೇಟೆಗೆ ತೆರಳಿರುವ ಬಗ್ಗೆ ಅಪರಾಧ ಪತ್ತೆ ದಳದ ಪೊಲೀಸರಿಗೆ ಮಾಹಿತಿ ದೊರೆತಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಪರಾಧ ಪತ್ತೆ ದಳ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಅಧಿಕಾರಿಗಳ ತಂಡ ಮಧುವನಹಳ್ಳಿ, ಕೊತ್ತನೂರು ಮತ್ತು ಚಿಕ್ಕಲ್ಲೂರು ಕಡೆ ಗಸ್ತಿನಲ್ಲಿ ಇದ್ದರು. ಈ ವೇಳೆ ಶನಿವಾರ ಮುಂಜಾನೆ 5 ಗಂಟೆ ವೇಳೆಯಲ್ಲಿ ಬಂಧಿತ ಶಾಂತರಾಜು ಮತ್ತು ಅರುಣ್ ಪಾಳ್ಯ ಗ್ರಾಮದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ 2 ನಾಡ ಬಂದೂಕು ಮತ್ತು ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳೆದ 4 ದಿನದ ಹಿಂದೆ ನಾವಿಬ್ಬರು ನಟರಾಜು ಜೊತೆ ಸೇರಿ ಕಾವೇರಿಪುರದ ಕಗ್ಗಳಿಪುರ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದನ್ನು ಬೇಟೆಯಾಡಿ ಚರ್ಮವನ್ನು ಸುಲಿಯುವ ವೇಳೆ ಯಾರೋ ಬಂದ ಶಬ್ದ ಕೇಳಿ ಚಿರತೆ ಮೃತ ದೇಹವನ್ನು ಅಲ್ಲಿಯೇ ಬಿಟ್ಟು ಚಿರತೆಯ ಕಾಲುಗಳನ್ನು ಕತ್ತರಿಸಿಕೊಂಡು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.
ಈ ದಾಳಿಯು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಜೆ.ಉದೇಶ್ , ಡಿವೈಎಸ್ಪಿ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಜರುಗಿದ್ದು, ದಾಳಿಯಲ್ಲಿ ಕೊಳ್ಳೇಗಾಲ ವೃತ ನಿರೀಕ್ಷಕರಾದ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ ಗಣೇಶ್ ಮತ್ತು ಚೆಲುವರಾಜು. ಸಹಾಯಕ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನಸ್ವಾಮಿ, ಡಿಎಸ್ ಪಿ ಅಪರಾಧ ಪತ್ತೆ ದಳದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತಕೀವುಲ್ಲಾ, ಮುಖ್ಯ ಪೇದೆಗಳಾದ, ವೆಂಕಟೇಶ್, ಕಿಶೋರ್, ಪೇದೆಗಳಾದ ಶಿವಕುಮಾರ್, ಬಿಳಿಗೌಡ, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಮುಖ್ಯ ಪೇದೆಗಳಾದ ನಾಗರಾಜು. ಜಯಶಂಕರ್, ಸೋಮಶೇಖರ್, ಪೇದೆಗಳಾದ ವೀರೇಂದ್ರ, ಅನಿಲ್ ಕುಮಾರ್, ಮನೋಹರ್, ಚಂದ್ರಶೇಖರ್, ದುಂಡಪ್ಪ ಪೂಜೇರಿ, ಪುಂಡಲೀಕ ಚೌಹಾಣ್,ವೃಷಭೇಂದ್ರ, ಜೀಪ್ ಚಾಲಕ ನಂಜುಂಡಸ್ವಾಮಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಅವರು ಶ್ಲಾಘಿಸಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.