Advertisement

ಶಾಸಕ ಮಂಜುನಾಥ್ ಅಧಿಕಾರ ದರ್ಪದ ವಿರುದ್ಧ ಹರಿಹಾಯ್ದ ಎಎಪಿ ಜಿಲ್ಲಾಧ್ಯಕ್ಷ ಹರೀಶ್.ಕೆ.ಮತ್ತೀಪುರ

02:42 PM Dec 03, 2023 | Team Udayavani |

ಹನೂರು: ಕ್ಷೇತ್ರದ ಶಾಸಕ ಮಂಜುನಾಥ್ ಅವರು ಮಲೆ ಮಹದೇಶ್ವರ ಬೆಟ್ಟದ ಲಾಡು ತಯಾರಿಕಾ ಘಟಕದ ಪರಿಶೀಲನೆಗೆ ತೆರಳಿದ ವೇಳೆ ತೋರಿದ ಅಧಿಕಾರ ದರ್ಪದ ಧೋರಣೆಯ ವಿರುದ್ಧ ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಹರೀಶ್ ಮತ್ತೀಪುರ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಆಕ್ಷೇಪಕ್ಕೆ ಕಾರಣ:

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಡಿ.1ರ ಶುಕ್ರವಾರ ಮಧ್ಯಾಹ್ನ ಲಾಡು ತಯಾರಿಕಾ ಪಾಕಶಾಲೆಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೆಚ್ಚದ ಹಾನಿಯುಂಟಾಗಿತ್ತು.

ಈ ಹಿನ್ನೆಲೆ ಶನಿವಾರ ತಡರಾತ್ರಿ 10 ಗಂಟೆಯ ಸಮಯ ಶಾಸಕ ಮಂಜುನಾಥ್ ಘಟನಾ ಸ್ಥಳ ಪರಿಶೀಲನೆಗಾಗಿ ತೆರಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಉಪಕಾರ್ಯದರ್ಶಿ ಚಂದ್ರಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಷ್ಟ ಉಂಟಾಗಿರುವ 10 ಲಕ್ಷವನ್ನು ತುಂಬುವವರೋ ನೀವೋ ಅಥವಾ ಕಾರ್ಯದರ್ಶಿಯೋ ಎಂದು ಪ್ರಶ್ನಿಸಿದ್ದರು. ಇನ್ನು ಘಟನಾ ಸ್ಥಳದ ದುರಸ್ಥಿಯನ್ನು ಯಾರ ಅನುಮತಿ ತೆಗೆದುಕೊಂಡು ಮಾಡಿದ್ದೀರಿ? ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು.

ಶಾಸಕರ ನಡೆ ವಿರುದ್ಧ ಆಕ್ರೋಶ:

Advertisement

ಶಾಸಕರ ನಡೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಪ್‌ಲೋಡ್ ಮಾಡಿರುವ ಹರೀಶ್ ಹನೂರು, ಕ್ಷೇತ್ರದಲ್ಲಿ ಎಲ್ಲಿಯಾದರೂ ಅಗ್ನಿ ಅನಾಹುತ ಸಂಭವಿಸಿದರೆ ಅದರ ಹೊಣೆಯನ್ನು ಶಾಸಕರು ಹೊತ್ತು ನಷ್ಟವನ್ನು ತಮ್ಮ ಜೇಬಿನಿಂದ ತುಂಬಿಕೊಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಕೆಲವು ಘಟನೆಗಳು ಆಕಸ್ಮಿಕವಾಗಿ ಜರುಗುತ್ತವೆ. ಅದೇ ರೀತಿ ಇಲ್ಲಿಯೂ ಜರುಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರ ದರ್ಪ ತೋರುವುದು ಸರಿಯೇ ಎಂದು ಕಿಡಿಕಾರಿದ್ದಾರೆ.

ಪ್ರಾಧಿಕಾರದ ಕಾರ್ಯದರ್ಶಿಗೆ ತಮ್ಮದೇ ಆದ ಅಧಿಕಾರವಿದ್ದು, ಘಟನೆ ನಡೆದ ವೇಳೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಮತ್ತು ಉಪಾಧ್ಯಕ್ಷ ಆಗಿರುವ ಮುಜರಾಯಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಅವರ ಸೂಚನೆಯ ಮೇಲೆ ದುರಸ್ಥಿ ಕಾರ್ಯಗಳನ್ನು ಕೈಗೊಂಡಿರುತ್ತಾರೆ. ಆದರೆ ಇದ್ಯಾವುದನ್ನು ಲೆಕ್ಕಕ್ಕಿಟ್ಟುಕೊಳ್ಳದೆ ಉನ್ನತ ಮಟ್ಟದ ತನಿಖೆ ನಡೆಸುತ್ತೇನೆ, ಯಾರೂ ಇಲ್ಲಿ ಬರಬಾರದು, ಯಾರನ್ನು ಕೇಳಿ ದುರಸ್ಥಿಪಡಿಸಿದ್ದೀರಾ ಎಂದು ಪ್ರಶ್ನಿಸಿದ್ದೀರಲ್ಲಾ.. ಇದು ಸರಿಯೇ? ನೀವು ಪ್ರಾಧಿಕಾರದಲ್ಲಿ ಓರ್ವ ಸದಸ್ಯ ಅಷ್ಟೆ, ನೀವು ಬೇರೆಯವರ ಕೆಲಸಕ್ಕೆ ಮೂಗು ತೂರಿಸುವ ಬದಲು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ ಎಂದು ಕುಹುಕವಾಡಿದ್ದಾರೆ.

ಪ್ರಾಧಿಕಾರದ ಕಾರ್ಯದರ್ಶಿಗಳ ಮೇಲೆ ನಿಮಗೆ ಹಗೆ ಏಕೆ?:

ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಸರಸ್ವತಿ ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡ ದಿನದಿಂದಲೂ ನೀವು ಅವರ ಮೇಲೆ ಏಕೆ ಇಷ್ಟು ಹಠ ಸಾಧಿಸುತ್ತಿದ್ದೀರಾ? ನಿಷ್ಠಾವಂತ ಅಧಿಕಾರಿಗಳು ಮಾದಪ್ಪನ ನೆಲದಲ್ಲಿ ಇರುವುದು ನಿಮಗೆ ಇಷ್ಟವಿಲ್ಲವೇ? ಅವರು ಮಾಡುವ ಒಳ್ಳೆಯ ಕೆಲಸಗಳು ನಿಮಗೆ ಒಪ್ಪುತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಷ್ಟೇ ಮಂಜಾಗ್ರತಾ ಕ್ರಮ ಕೈಗೊಂಡರು ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಬೇಕಾದ ಶಾಸಕರು ಅಧಿಕಾರದ ದರ್ಪ ತೋರಿರುವುದು ಸರಿಯಲ್ಲ. ಇಲ್ಲಿನ ನಷ್ಟವನ್ನು ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿ ತುಂಬಿಕೊಡಬೇಕಾದರೆ. ಕ್ಷೇತ್ರದಲ್ಲಿ ಸಂಭವಿಸುವ ನಷ್ಟವನ್ನು ಶಾಸಕರು ತುಂಬಿಕೊಡುತ್ತಾರಾ? – ಕೆ. ಹರೀಶ್ ಮತ್ತೀಪುರ, ಎಎಪಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next