Advertisement

Hanur: ಮಾಜಿ ಶಾಸಕ ನರೇಂದ್ರ ಅವರಿಗೆ ಸೂಕ್ತಸ್ಥಾನಮಾನ ನೀಡಲು ಆಗ್ರಹ

02:45 PM Sep 25, 2023 | Team Udayavani |

ಹನೂರು: ಮಾಜಿ ಶಾಸಕ ಆರ್.ನರೇಂದ್ರ ರಾಜೂಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ರಾಮಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉದ್ದನೂರು ಸಿದ್ದರಾಜು ಆಗ್ರಹಿಸಿದ್ದಾರೆ.

Advertisement

ಹನೂರು ಕ್ಷೇತ್ರದಲ್ಲಿ ಕಳೆದ 60 ವರ್ಷಗಳಿಂದಲೂ ದಿವಂಗತ ವೆಂಕಟೇಗೌಡ, ಮಾಜಿ ಸಚಿವ ರಾಜೂಗೌಡ ಮತ್ತು ಅವರು ಕಾಲವಾದ ಬಳಿಕ ಮಾಜಿ ಶಾಸಕ ನರೇಂದ್ರ ರಾಜೂಗೌಡ ಅವರು ತಮ್ಮದೇ ಛಾಪು ಮೂಢಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗಾಗಿ, ನೀರಾವರಿ ಯೋಜನೆಗಳು ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದಾರೆ. ಮಾಜಿ ಸಚಿವ ರಾಜೂಗೌಡ ಅವರಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀರಾಕರಿಸಿದರೂ ಕೂಡ ಅನ್ಯ ಪಕ್ಷದತ್ತ ತಿರಗಿ ನೋಡದೆ ಪಕ್ಷೇತರವಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು.  ಮಾಜಿ ಶಾಸಕ ನರೇಂದ್ರ ಅವರು 2013-2018ರ ಅವಧಿಯ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ 3500ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದಲ್ಲದೆ ಬಿಜೆಪಿ ಪಕ್ಷ ಎರಡು ಬಾರಿ ನರೇಂದ್ರ ಅವರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯಲು ಎರಡು ಬಾರಿ ಪ್ರಯತ್ನಿಸಿ ಸಚಿವರನ್ನಾಗಿ ಮಾಡುವ ಆಸೆ ಆಮಿಷವನ್ನು ಒಡ್ಡಿದ್ದರು. ಆದರೆ ನರೇಂದ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಪ್ರದರ್ಶಿಸಿ ನನ್ನ ಪ್ರಾಣ ಹೋದರೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ನನಗೆ ಅಧಿಕಾರ ದೊರೆಯಲಿ, ಬಿಡಲಿ ನನ್ನ ನಿಷ್ಠೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಪಕ್ಷ ನಿಷ್ಠೆ ಪ್ರದರ್ಶಿಸಿದ್ದರು. 2018ರ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಎಲ್ಲಾ ಅರ್ಹತೆಗಳಿದ್ದರೂ ಲೋಕಸಭಾ ಚುನಾವಣೆ ದೃಷ್ಠಿಯಿಂದ ಮಂತ್ರಿ ಸ್ಥಾನವನ್ನು ತ್ಯಾಗಮಾಡಿ ರಾಜ್ಯದ ಉಪ್ಪಾರ ಸಮುದಾಯದ ಪುಟ್ಟರಂಗಶೆಟ್ಟಿ ಅವರನ್ನು ಮಂತ್ರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.

ಇಂತಹ ತ್ಯಾಗಮಯಿ, ಮಗುವಿನ ಮನಸ್ಸಿನ ಮಾಜಿ ಶಾಸಕ ನರೇಂದ್ರ ಅವರು ಹಲವಾರು  ಕಾರಣಗಳಿಂದ 2023ರ ಚುನಾವಣೆಯಲ್ಲಿ ಸೋಲು ಕಂಡಿದ್ದು, ಸೋತರೂ ಧೃತಿಗೆಡದೆ ನಿರಂತರವಾಗಿ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಾ ಕ್ಷೇತ್ರದ ಜನತೆಯ ದುಃಖ ದುಮ್ಮಾನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ನಾಯಕರಿಗೆ ಭವಿಷ್ಯದ ಲೋಕಸಭಾ ಚುನಾವಣೆ ಮತ್ತು ಪಕ್ಷ ಸಂಘಟನೆ ದೃಷ್ಠಿಯಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಅಥವಾ ನಿಗಮ-ಮಂಡಲಿ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ಗಮನಹರಿಸಬೇಕು ಎಂದು ಉದ್ದನೂರು ಸಿದ್ದರಾಜು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next