ಹನುಮಸಾಗರ: ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆ ಹೊಂದಿರುವ ಹನುಮಸಾಗರ ಪಟ್ಟಣವನ್ನು ಈ ಬಾರಿ ಬಜೆಟ್‌ನಲ್ಲಿ ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುತ್ತಾರೆ ಎಂಬ ಮಹದಾಸೆಗೆ
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತಣ್ಣೀರೆರಚಿದೆ.
ಹನುಮಸಾಗರ ತಾಲೂಕು ಹೋರಾಟ ಸಮಿತಿ 5 ವರ್ಷಗಳಿಂದ ಹನುಮಸಾಗರವನ್ನು ತಾಲೂಕನ್ನಾಗಿ ಮಾಡಬೇಕೆಂದು ಹೋರಾಟ ನಡೆಸುತ್ತಿದೆ. ಈ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬಹುದು ಎನ್ನುವ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ. ಮಾಜಿ ಶಾಸಕರು ಹಾಗೂ ತಾಲೂಕು ಹೋರಾಟ ಸಮಿತಿ ಸದಸ್ಯರು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೂ ಬಜೆಟ್‌ನಲ್ಲಿ ಬೇಡಿಕೆ ಈಡೇರದ ಕಾರಣ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಮೇಲ್ದರ್ಜೆಗೇರದ ಗ್ರಾಪಂ: ಜಿಲ್ಲೆಯಲ್ಲೇ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆ ಹೊಂದಿದ ಹನುಮಸಾಗರ ಗ್ರಾಪಂ 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ 14 ವಾರ್ಡ್‌ಗಳಿಂದ 38 ಜನ ಸದಸ್ಯರಿದ್ದಾರೆ. 15 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ನಿಯಮವಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಲ್ಲ.
ಹನುಮಸಾಗರವನ್ನು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವುದು ಬಜೆಟ್ ಸಂಬಂದವಿಲ್ಲ. ಈಗಲೂ ಸಹ ಮುಖ್ಯಮಂತ್ರಿಯವರು ಮನಸ್ಸು ಮಾಡಿದರೆ ಮೇಲ್ದರ್ಜೆಗೆ ಏರಿಸಲು ಅವಕಾಶವಿದೆ. ನಾವು ಸಹ ಪಪಂ ಆಗಿ ಮೇಲ್ದರ್ಜೆಗೇರಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಆಗ ಆದರೂ ಆಗಬಹುದು, ಆದರೆ ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿಲ್ಲ. ತಾಲೂಕು ಹೋರಾಟ ಸಮಿತಿಯವರಿಗೆ ಬರಲು ಹೇಳಿದ್ದೇವೆ. –
ಅಮರೇಗೌಡ ಬಯ್ನಾಪೂರ, ಶಾಸಕ
ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿಸುವ ಕುರಿತಂತೆ ಈಗಾಗಲೇ ಶಾಸಕರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಬಜೆಟ್‌ನಲ್ಲಿ ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿರುವುದು ಜನಪ್ರತಿನಿಧಿ ಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. –
ಶ್ರೀನಿವಾಸ ಜಹಗೀರದಾರ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ
ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದರೆ ಹನುಮಸಾಗರವನ್ನು ತಾಲೂಕನ್ನಾಗಿ ಘೋಷಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ತಾಲೂಕು ಘೋಷಣೆಗೆ ಬೇಕಾದ ಎಲ್ಲ ಅರ್ಹತೆಗಳು ಇದ್ದರೂ ತಾಲೂಕನ್ನಾಗಿ ಘೋಷಣೆ ಮಾಡದಿರುವುದು ನಿಜಕ್ಕೂ ದುರ್ದೈವದ ಸಂಗತಿ ಮತ್ತು ಜನಪ್ರತಿನಿಧಿ ಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಸವರಾಜ ಹಳ್ಳೂರ, ಬಿಜೆಪಿ ತಾಲೂಕು ಅಧ್ಯಕ್ಷ
-ವಸಂತಕುಮಾರ ವಿ ಸಿನ್ನೂರ