ಹನಮಸಾಗರ: ಜಿಲ್ಲೆಯಲ್ಲೇ ದೊಡ್ಡ ಗ್ರಾಪಂ ಎಂಬ ಹಣೆಪಟ್ಟಿ ಹೊಂದಿರುವ ಮತ್ತು ಸತತ ಮೂರು ಬಾರಿ ನಿರ್ಮಲ ಗ್ರಾಮ ಹಾಗೂ ಗಾಂಧಿ ಗ್ರಾಮ ಪ್ರಶಸ್ತಿ ಪಡೆದು ಖ್ಯಾತಿ ಗಳಿಸಿದ ಹನುಮಸಾಗರ ಗ್ರಾಪಂ ಕಚೇರಿ ಹಿಂಭಾಗದಲ್ಲೇ ಕಸ ರಾಶಿ ರಾಶಿ ಸಂಗ್ರಹವಾಗಿದೆ. ಗ್ರಾಪಂ ಹಿಂದಿನ ರಸ್ತೆಯಲ್ಲಿ ನಿತ್ಯ ಕೊಚ್ಚೆ ನೀರು ಹರಿಯುತ್ತಿರುವುದರಿಂದ ಜನ ರಸ್ತೆ ದಾಟಲು ಪರದಾಡುತ್ತಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಆಕಸ್ಮಿಕವಾಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಗಲೀಜಿದೆ. ಕೂಡಲೇ ಸ್ವಚ್ಛಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪಿಡಿಒ ಹಾಗೂ ಸಿಬ್ಬಂದಿ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಗ್ರಾಮಕ್ಕೆ ಬರುವ ದೂರದೂರಿನ ಜನ ದುರ್ನಾತ ಬಂದ ಕೂಡಲೇ ಹನುಮಸಾಗರ ಬಂತು ಮೂಗು ಮುಚ್ಚಿಕೊಳ್ಳಿ ಎಂದು
ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಕುಷ್ಟಗಿ ರಸ್ತೆಯಲ್ಲಿ ಪಪೂ ಕಾಲೇಜಿನಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ ಬದಿಯಲ್ಲಿ ಕಸದ ರಾಶಿ, ಸತ್ತ ನಾಯಿ, ಕಟ್ಟಡದ ವೆಸ್ಟೇಜ್ ತಂದು ಸುರಿಯುತ್ತಿದ್ದಾರೆ. ಕಸದಲ್ಲಿರುವ ಪ್ಲಾಸ್ಟಿಕ್ ಪೇಪರ್ ಗಳು ಗಾಳಿಗೆ ಹಾರಿ ರಸ್ತೆಗೆ ಬರುತ್ತಿವೆ. ರಸ್ತೆಯಲ್ಲಿ ಹೋಗುವವರು ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಪಂಚಾಯತ್ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶವ್ಯಕ್ತ ಪಡಿಸಿದರು.
ಎಲ್ಲೆಲ್ಲಿ ಕಸ: ಗ್ರಾಮದ ಪ್ರಮುಖ ರಸ್ತೆಗಳಾದ ಕರ್ನಾಟಕ ಪಬ್ಲಿಕ ಶಾಲೆ ಹತ್ತಿರ, ಡಾ| ಅಂಬೇಡ್ಕರ್ ವೃತ್ತದಿಂದ ಕುಷ್ಟಗಿಯ ರಸ್ತೆಯವರೆಗೆ, ಬಾದಾಮಿ ರಸ್ತೆಯ ಹತ್ತಿರದ ಶ್ರೀಅಂಭಾಭವಾನಿ ದೇವಸ್ಥಾನದ ಹತ್ತಿರದ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಬಾದಾಮಿ ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿ ಬಿದ್ದಿದೆ. ಗ್ರಾಮದ ಪ್ರಮುಖ ಎಲ್ಲ ರಸ್ತೆಗಳ ಬದಿಯಲ್ಲೂ ಮದ್ಯದ ಬಾಟಲಿಗಳು, ಪೌಚ್ ಗಳು, ವಿವಿಧ ತ್ಯಾಜ್ಯಗಳನ್ನು ಹಾಕುತ್ತಿರುವುದರಿಂದ ಹನುಮಸಾಗರ ಸುತ್ತಮುತ್ತಲಿನ ಪರಿಸರವೇ ಹದಗೆಟ್ಟಿದೆ.
ಪಿಡಿಒ ಕೂಡಲೇ ಎಚ್ಚೆತ್ತುಕೊಂಡು ಗ್ರಾಮದ ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಕಿರುವ ಕಸದ ರಾಶಿಯನ್ನು ಸ್ವಚ್ಛಗೊಳಿಸಿ ಬೇರೆಡೆ ಸಾಗಿಸಬೇಕು. ಅಲ್ಲಿ ಇನ್ಮುಂದೆ ಸಾರ್ವಜನಿಕರು ತ್ಯಾಜ್ಯ ಹಾಕದಂತೆ ತಾಕೀತು ಮಾಡಬೇಕು. ಮತ್ತೆ ಕಸ ಹಾಕಿದರೆ ದಂಡ ವಿಧಿ ಸಿ ಕಾನೂನು ಕ್ರಮ ಕೈಕೊಂಡಾಗ ಮಾತ್ರ ಸ್ವಚ್ಛ ಗ್ರಾಮವಾಗುವುದು.
ಬಾದಾಮಿ ರಸ್ತೆ, ಕುಷ್ಟಗಿ ರಸ್ತೆಗಳ ಬದಿಯಲ್ಲಿ ಹಾಕಿರುವ ಕಸದ ರಾಶಿಯಿಂದ ವಾತಾವರಣ ಸಂಪೂರ್ಣವಾಗಿ ಕಲುಷಿತವಾಗಿದೆ. ಉತ್ತಮ ಆರೋಗ್ಯಕ್ಕಾಗಿ ವಾಯು ವಿಹಾರ ಮಾಡಲು ಬರುವ ಸಾರ್ವಜನಿಕರಿಗೆ ಆರೋಗ್ಯವನ್ನೇ ಕಸಿಯುವಂತಹ ವಾತಾವರಣ ನಿರ್ಮಾಣವಾಗಿರುವುದು ನಿಜಕ್ಕೂ ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಕೂಡಲೇ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿ, ಕಸ ವಿಲೇವಾರಿ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.
ಬಸವರಾಜ ಹಳ್ಳೂರ, ಗ್ರಾಮದ ಮುಖಂಡ
ಜಿಲ್ಲಾಧಿಕಾರಿ ಸೂಚನೆ ಪಾಲನೆಯಾಗದಿರುವುದು ಅಧಿ ಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ಗ್ರಾಪಂ ಪಿಡಿಒ ಅವರು ಸcತ್ಛತೆಗೆ ಆದ್ಯತೆ ನೀಡಿ ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ಸಾಗಿಸಬೇಕು. ಗ್ರಾಮದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು.
ಸೂಚಪ್ಪ ದೇವರಮನಿ, ಗ್ರಾಮದ ಮುಖಂಡ
*ವಸಂತಕುಮಾರ ವಿ ಸಿನ್ನೂರ