Advertisement

ಹುಣಸೂರಲ್ಲಿ ವಿಜೃಂಭಿಸಿದ ಹನುಮಂತೋತ್ಸವ

12:02 PM Jan 28, 2018 | Team Udayavani |

ಹುಣಸೂರು: ನಗರದಲ್ಲಿ ನಿಗದಿಯಂತೆ ನಡೆದ ಹನುಮಂತೋತ್ಸವದ ಮೆರವಣಿಗೆ ಸಾಂಸ್ಕೃತಿಕ ಕಲರವಗಳ ನಡುವೆ ವಿಜೃಂಭಿಸಿತು. ಮೆರವಣಿಗೆಯಲ್ಲಿ ನೂರಾರು ಹನುಮ ಭಕ್ತರು ಕೈಯಲ್ಲಿ ಕೇಸರಿ ಭಗವಧ್ವಜ ಹಿಡಿದು ಜಯಘೋಷಗಳೊಂದಿಗೆ ಸಾಗಿದರು. 

Advertisement

 ಮೆರವಣಿಗೆ: ಚುನಾವಣೆಗೆ ದಿನಗಣನೆ ಆರಂಭಗೊಂಡಿರುವುದರಿಂದ  ಹನುಮಂತೋತ್ಸವ ಮೆರವಣಿಗೆಯನ್ನು ಎಲ್ಲಾ ಪಕ್ಷಗಳು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದವು. ಇದರಿಂದಾಗಿ ಸುಮಾರು 20 ಸಾವಿರಕ್ಕೂ ಹೆಚ್ಚು ಹನುಮಭಕ್ತರು, ವಿವಿಧ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ: ಬೆಳಗ್ಗೆ 11ಕ್ಕೆ ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಗೆಗೆ ಸಮಿತಿ ಗೌರವಾಧ್ಯಕ್ಷ, ಗಾವಡಗೆರೆ ಮಠದ ನಟರಾಜಸ್ವಾಮೀಜಿ, ಉಪವಿಭಾಗಾಧಿಕಾರಿ ನಿತೀಶ್‌, ಸಂಸದ ಪ್ರತಾಪಸಿಂಹ, ಶಾಸಕ ಮಂಜುನಾಥ್‌, ಮಾಜಿ ಮಂತ್ರಿ ಅಡಗೂರು ಎಚ್‌.ವಿಶ್ವನಾಥ್‌ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷ ಶಿವಕುಮಾರ್‌, ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್‌, ನಗರಸಭಾ ಸದಸ್ಯರಿದ್ದರು. 4 ಹನುಮನ ವಿಗ್ರಹ: ಮೆರವಣಿಗೆಯಲ್ಲಿ ಮೂಲ ವಿಗ್ರಹ ಹಾಗೂ ವಿವಿಧ ರಾಮಮಂದಿರ ಹಾಗೂ ಗರಡಿ ಮನೆಯಿಂದ ಹನುಮನ ವಿಗ್ರಹವನ್ನು ಆಟೋಗಳಲ್ಲಿ ಮತ್ತು

ಬೆಂಗಳೂರಿನ ದಾನಿ ಗೋವಿಂದರಾಜು ನೀಡಿದ್ದ 6 ಅಡಿ ಎತ್ತರದ ಕಂಚಿನ ಉತ್ಸವ ಮೂರ್ತಿ, 11 ಅಡಿ ಎತ್ತರದ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ದೊಡ್ಡ ವಿಗ್ರಹ  ಮೆರವಣಿಗೆಯಲ್ಲಿ ಕಳೆಕಟ್ಟಿತ್ತು. ಇನ್ನು ಕಲ್ಕುಣಿಕೆಯ ನಾಲ್ಕಾರು ಕಡೆ ಹನುಮನ ಭಾವಚಿತ್ರ ಹಾಗೂ ವಿಗ್ರಹವನ್ನಿಟ್ಟು ಪೂಜಿಸಿದ್ದರು.

Advertisement

2 ಕಿ.ಮೀ ಉದ್ದದ ಮೆರವಣಿಗೆ: ಮೆರವಣಿಗೆ ಆರಂಭದಲ್ಲಿ ಹನುಮ ಭಕ್ತರಿಗಿಂತ ಪೋಲೀಸರೇ ಹೆಚ್ಚಿದ್ದರು. ಸುಮಾರು 2 ಕಿ.ಮೀವರೆಗೆ ಮೆರವಣಿಗೆ ಸಾಗಿತ್ತು. ನಂದಿಕಂಬಕ್ಕೆ ಪೂಜೆ ಸಲ್ಲಿಸಿದ ನಂತರ ವಾದ್ಯಗೋಷ್ಠಿ ನಡೆಯಿತು. ನಂತರ 5 ನಗಾರಿ, 3 ತಮಟೆ ತಂಡಗಳ ಸದ್ದಿಗೆ ಪ್ರೇರೇಪಿತರಾದ ಸಂಸದ, ಜಿಪಂ ಸದಸ್ಯೆ ಸೇರಿ ಅನೇಕ ಜನಪ್ರತಿನಿಧಿಗಳು ಕುಣಿದು ಕುಪ್ಪಳಿಸಿದರು. 

ಆರೂವರೆ ಗಂಟೆಕಾಲ ಮೆರವಣಿಗೆ: ಬೆಳಗ್ಗೆ 11ಕ್ಕೆ ಆರಂಭವಾದ ಮೆರವಣಿಗೆ ನಿಧಾನಗತಿಯಲ್ಲಿ ಸಾಗಿ ಮಂಜುನಾಥಸ್ವಾಮಿ ದೇವಾಲಯಕ್ಕೆ ಸಂಜೆ 5.30ರವೇಳೆಗೆ ಆಗಮಿಸಿತು. ಇಲ್ಲಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧ ಉಲ್ಲಂಘನೆಯಾಗಿರುವುದು ಸಾಬೀತಾಗಿದ್ದು ಮುಂದೇನು ಮಾಡುವರೆಂಬ ಕುತೂಹಕ ಎಲ್ಲರಲ್ಲಿದೆ.

ನಿಂತು ಹೋಗಿದ್ದ ಮೆರವಣಿಗೆ: ಕಳೆದ ಡಿ.3ರಂದು ನಡೆಯಬೇಕಿದ್ದ ಹನುಮಂತೋತ್ಸವ ಮೆರವಣಿಗೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಹನುಮ ಭಕ್ತರ, ರಾಜಕೀಯ ಹಿತಾಸಕ್ತರ ಮನವಿ ಮೇರೆಗೆ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆಯಾಗಿ ನಿಬಂಧನೆಗಳನ್ನು ಹೇರಿ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next