Advertisement

ಹನುಮ ಮಾಲಾಧಾರಿಗಳು ಬಂದೂಕು ತಂದಿದ್ದರೆ?

08:57 AM Dec 05, 2017 | |

ಮೈಸೂರು: ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ಬರುತ್ತಿದ್ದ ಹನುಮ ಮಾಲಾಧಾರಿಗಳನ್ನು ಬಂಧಿಸಿದ ರಾಜ್ಯಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಹುಣಸೂರಿಗೆ ಹೊರಟಿದ್ದ ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಿದ್ದೇಕೆ? ಹನುಮ ಮಾಲಾಧಾರಿಗಳನ್ನು ಬಂಧಿಸಲು ಅವರೇನು ಬಂದೂಕು, ತಲ್ವಾರ್‌ ಹಿಡಿದು ಬಂದಿದ್ದರೆ ಎಂದು ಪ್ರಶ್ನಿಸಿದ್ದಾರೆ.

Advertisement

ನಗರದ ಗಾಂಧಿ ಚೌಕದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರಕ್ಕೆ ತಾಕತ್ತಿದ್ದರೆ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ಪಾಕಿಸ್ತಾನ ಎಂದು ಕರೆದಿರುವ ಮುಲ್ಲಾನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

ಬಂಧಿತರ ಬಿಡುಗಡೆ 
ಮೈಸೂರು: ಹನುಮ ಜಯಂತಿ ವೇಳೆ ಹುಣಸೂರಿನಲ್ಲಿ ಭಾನುವಾರ ಬಂಧಿಸಲಾಗಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ 58
ಕಾರ್ಯಕರ್ತರನ್ನು ಸೋಮವಾರ ರಾತ್ರಿ ಮೈಸೂರಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ಮೆರವಣಿಗೆ ಸಂಬಂಧ ತಿಕ್ಕಾಟ ನಡೆದ ವೇಳೆ ಭಾನುವಾರ ಸಂಸದ ಪ್ರತಾಪ್‌ಸಿಂಹ ಅವರನ್ನು ಬಂಧಿಸಿದ್ದ ಪೊಲೀಸರು ಠಾಣಾ ಜಾಮೀನು ಪಡೆದು ಬಿಡುಗಡೆ ಮಾಡಿದ್ದರು. 

“ಡೀಸಿ, ಎಸ್‌ಪಿ ನಾಟಕ ಮಾಡುವ ಅಗತ್ಯವಿರಲಿಲ್ಲ’
ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸದಂತೆ ತಡೆಯುವ ಮೂಲಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ನಾಟಕವಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಟೀಕಿಸಿದರು. ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಯನ್ನು ರಂಗನಾಥ ಬಡಾವಣೆಯ ರಾಮಮಂದಿರದಿಂದ ಆರಂಭಿಸುತ್ತೇವೆಂದು ನ.23ರಂದು ಮನವಿ ಮಾಡಲಾಗಿತ್ತು. ಅಲ್ಲದೆ ಡೀಸಿ, ಎಸ್ಪಿ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ಸಹ ನಡೆಸಲಾಗಿತ್ತು. ಆದರೆ 29ರಂದು ನಾವು ಸೂಚಿಸಿದ ಮಾರ್ಗದಲ್ಲಿ ಹೋಗಬೇಕೆಂದು ಹೇಳಿದರು.

ಈ ನಿರ್ಬಂಧ ತೆಗೆಯುವಂತೆ ಐಜಿಪಿ, ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ ಡೀಸಿ, ಎಸ್ಪಿ ಅವರು ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಎರಡು ದಿನಗಳ ಕಾಲ ರಜೆಯಲ್ಲಿದ್ದೇನೆಂದು ಹೇಳಿದ್ದ ಗೃಹ ಇಲಾಖೆ ಕಾರ್ಯದರ್ಶಿಗಳು ನುಮಜಯಂತಿ ಮೆರವಣಿಗೆಗಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದಕ್ಕೆ ಇವರೇ ಕಾರಣ ಎಂದು ಆರೋಪಿಸಿದರು.

Advertisement

ಹನುಮ ಮಾಲೆ ಧರಿಸಿದ್ದ ನಾನು ಮೆರವಣಿಗೆಯಲ್ಲಿ ಭಾಗವಹಿಸಲು ಹೊರಟಿದ್ದ ವೇಳೆ ಬಿಳಿಕೆರೆಯಿಂದ ಮುಂದೆ ನನ್ನನ್ನು ತಡೆದಾಗ “ನಾನು ಟೆರರಿಸ್ಟ್‌ ಅಲ್ಲ, ಶಾಂತಿಯುತ ಮೆರವಣಿಗೆ ಮಾಡುತ್ತೇವೆ’ ಎಂದು ಹೇಳಿ ಹೊರಟಾಗ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ರಸ್ತೆಗೆ ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗೆ ಕಾರಿನ ಬಂಪರ್‌ ತಗುಲಿದೆ. ನಂತರ, ಹುಣಸೂರಿನಲ್ಲಿ ನನ್ನನ್ನು ಬಂಧಿಸಿ ಎಚ್‌.ಡಿ.ಕೋಟೆ ಠಾಣೆಗೆ 
ಕರೆದೊಯ್ದು ಕೈದಿಗಳಿರುವ ಕೊಠಡಿಯಲ್ಲಿ ಇರಿಸಲಾಗಿದ್ದ ವೇಳೆ, ನನ್ನೊಂದಿಗೆ ಹೆಚ್ಚುವರಿ ಎಸ್ಪಿ, ಪಿಎಸ್‌ಐ ಜತೆಗಿದ್ದರು. ಆದರೆ ಆ ನಂತರ ಗಾಯವಾಯಿತೆಂದು ಹೇಳಿದ್ದಾರೆ. ಹಾಗಾದರೆ ನನ್ನೊಂದಿಗಿರುವವರೆಗೂ ಗಾಯವಾಗಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಎಸ್ಪಿ ಹಾಗೂ ಡೀಸಿ ನಾಟಕವಾಡುವ ಅಗತ್ಯ ಇರಲಿಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯದು ರಾವಣ ರಾಜ್ಯ
ಮೈಸೂರು: “ರಾಜ್ಯದಲ್ಲಿ ಕೋಮುಸೌಹಾರ್ದತೆ ಹಾಳಾಗಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಕಿಡಿಕಾರಿದರು. ನಗರದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತ ನಡೆಸುತ್ತಿದೆಯೋ? ಅಥವಾ ರಾವಣ ರಾಜ್ಯ ನಡೆಸುತ್ತಿದೆಯೋ? ತಿಳಿಯುತ್ತಿಲ್ಲ.

ಹುಣಸೂರಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡದೆ ನಿಷೇಧ ಹೇರಿದ್ದು ಸರಿಯಲ್ಲ. ಟಿಪ್ಪು ಜಯಂತಿ, ಈದ್‌ ಮಿಲಾದ್‌, ಪಿಎಫ್ಐ ಸಂಘಟನೆಗಳಿಗೆ ಮೆರವಣಿಗೆ ನಡೆಸಲು ಅವಕಾಶ ನೀಡುವ ಸರ್ಕಾರ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next