ಚಿನ್ನದ ರಥದಲ್ಲಿ ರಾವಣ ಯುದ್ಧಕ್ಕೆ ಬರುತ್ತಾನೆ. ರಾಮ ಹಾಗೂ ಲಕ್ಷ್ಮಣ ಮಾತ್ರ ನೆಲದ ಮೇಲೆಯೇ ನಿಂತು, ಯುದ್ಧ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಹನುಮಂತ, ತನ್ನ ಸ್ವಾಮಿ ನೆಲದ ಮೇಲೆ ನಿಂತು ಯುದ್ಧ ಮಾಡುವುದನ್ನು ನೋಡಲಾಗದೆ, ರಾಮನನ್ನು ತನ್ನ ಹೆಗಲ ಮೇಲೆ ನಿಲ್ಲಿಸಿಕೊಳ್ಳುತ್ತಾನೆ.
ಹನುಮನ ಹೆಗಲಿನಿಂದ ರಾಮನನ್ನು ಕೆಳಕ್ಕೆ ಬೀಳಿಸಬೇಕು ಎನ್ನುವುದು ರಾವಣನ ಕಡೆಯ ರಾಕ್ಷಸರ ಹಠ. ಭೂಮಿಯ ಒಳಗಿನಿಂದ ಬಂದು ಹನುಮಂತನ ಕಾಲನ್ನು ಎಳೆಯುತ್ತಾರೆ. ಹನುಮಂತನ ಸ್ಪರ್ಶ ಮಾಡುತ್ತಲೇ ಅವರಿಗೆ ಜ್ಞಾನೋದಯವಾಗಿ, ತಮಗೆ ಪಾದದ ಬಳಿಯೇ ಆಶ್ರಯ ಕೊಡಬೇಕೆಂದು ರಾಕ್ಷಸ ಗಣ ಕೇಳಿಕೊಳ್ಳುತ್ತದೆ. ರಾಮಾಯಣದ ಈ ಕತೆಯನ್ನೇ ಹಿನ್ನೆಲೆಯಾಗಿ ಕೆತ್ತಿದ ಹನುಮ ಮೂರ್ತಿಯು ಸೆಳೆಯುವುದು ತುಮಕೂರಿನಲ್ಲಿ.
ಆತನೇ ಹನುಮಂತಪುರದ ಶ್ರೀ ಬಯಲು ಆಂಜನೇಯ. ವ್ಯಾಸರಾಜರು ಪ್ರತಿಷ್ಠಾಪಿಸಿದ 732 ಮುಖ್ಯಪ್ರಾಣಗಳಲ್ಲಿ, ಬಯಲು ಆಂಜನೇಯನೂ ಒಬ್ಬ. ಹನುಮನ ಹೆಗಲೇರಿ ನಿಂತು ಬಾಣ ಬಿಡುತ್ತಿರುವ ಶ್ರೀರಾಮ, ಹನುಮನ ಕಾಲಬುಡದಲ್ಲಿ ರಾಕ್ಷಸರ ಚಿತ್ರಗಳ ಸೌಂದರ್ಯ ಅನನ್ಯ. ಕೈಯಲ್ಲಿ ಗದೆ, ಅಭಯ ಹಸ್ತದ ಹನುಮ, ಭೀಮ- ಮಧ್ವರ ಅವತಾರವನ್ನು ಸೂಚಿಸುತ್ತದೆ. ತಲೆಯ ಬಲ ಮೇಲ್ಭಾಗದಲ್ಲಿ ಚಕ್ರ ಹಾಗೂ ಎಡಗಡೆ ಶಂಖವಿದೆ.
ಇಲ್ಲಿ ಶ್ರೀರಾಮನಿಗೆ ಮಾಡಿದ ಅಭಿಷೇಕ ನಂತರ ಹನುಮನ ಮೇಲೆ ಬಿದ್ದು, ಕೆಳಗಿನ ರಾಕ್ಷಸರವರೆಗೂ ತಲುಪುತ್ತದೆ. ಶ್ರೀವ್ಯಾಸರಾಜರು ಪ್ರತಿಷ್ಠಾಪಿಸಿರುವ ಮುಖ್ಯಪ್ರಾಣನ ಮೂರ್ತಿಗಳಲ್ಲೇ ಇದು ವಿಶೇಷ. ವಿಜಯನಗರ ಕಾಲದಲ್ಲಿ ಈ ಹನುಮನನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿರುವ ಹನುಮಪ್ಪ ಬಯಲಿನಲ್ಲಿ ಒಂದು ಅರಳಿಮರದ ಕೆಳಗೆ ಸಿಕ್ಕಿದ್ದರಿಂದ, “ಬಯಲು ಆಂಜನೇಯ’ ಎಂದು ಕರೆಯಲಾಯಿತು. ಬೃಹತ್ ಅರಳಿಮರಕ್ಕೆ ಹೊಂದಿಕೊಂಡಂತೆ, ದೇಗುಲವನ್ನು ಕಟ್ಟಿದ್ದಾರೆ.
ಬಾಳೆಹಣ್ಣಿನ ಪ್ರಸಾದ: ಇಲ್ಲಿ ಅರ್ಚಕರು ಬಾಳೆಹಣ್ಣಿನ ಸಿಪ್ಪೆ ಸುಲಿದು, ಮುಖ್ಯಪ್ರಾಣನ ಬಾಯಲ್ಲಿ ಇಡುತ್ತಾರೆ. ಬಳಿಕ ಭಕ್ತರು 3 ಪ್ರದಕ್ಷಿಣೆ ಬರಬೇಕು. ಅಷ್ಟರೊಳಗೆ ಬಾಳೆಹಣ್ಣು ಕೆಳಕ್ಕೆ ಬಿದ್ದರೆ, ಅಂದುಕೊಂಡ ಕೆಲಸ ಬೇಗನೇ ಆಗುತ್ತದೆ ಅಂತ. 5 ಪ್ರದಕ್ಷಿಣೆಯ ಒಳಗೆ ಬಿದ್ದರೆ ಸ್ವಲ್ಪ ನಿಧಾನವಾಗಿ ಆಗುತ್ತದೆ ಎಂದು ಅರ್ಥ. ಹಾಗೂ ಬಿಳದೇ ಇದ್ದರೆ ಕೈಹಾಕಿದ ಕೆಲಸ ಆಗುವುದಿಲ್ಲ ಎನ್ನುವುದು ನಂಬಿಕೆ. ಪ್ರತಿ ಶನಿವಾರ ಈ ಆಚರಣೆ ಇರುತ್ತದೆ.
ದರುಶನಕೆ ದಾರಿ…: ತುಮಕೂರು ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿ ಬಯಲು ಆಂಜನೇಯನ ದೇಗುಲ ಸಿಗುತ್ತದೆ.
* ಅಶ್ವಿನಿ ವಿ.