ಗಂಗಾವತಿ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಯಶಸ್ವಿಯಾಗಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಜರುಗಿದ್ದು ಲಕ್ಷಾಂತರ ಹನುಮ ಭಕ್ತರು ಆಗಮಿಸಿ ತಾವು ಧರಿಸಿದ ಮಾಲೆಯನ್ನು ವಿಸರ್ಜನೆ ಮಾಡಿ ಹೋಗಿದ್ದಾರೆ. ಮಾಲೆ ಧರಿಸಿದ ಸಂದರ್ಭದಲ್ಲಿ ಕೇಸರಿ ಸಮವಸ್ತ್ರಗಳಿಗೆ ಕೊಡುವ ಗೌರವ ಮಾಲಾ ವಿಸರ್ಜನೆ ಮಾಡಿದ ನಂತರ ಹನುಮಭಕ್ತರು ನೀಡದಿರುವುದು ಕಂಡು ಬಂದಿದೆ.
ಮಾಲಾ ವಿಸರ್ಜನೆಯನ್ನು ಮಾಡಿದ ನಂತರ ತಾವು ಧರಿಸಿದ ಕೇಸರಿ ಬಟ್ಟೆಗಳನ್ನು ತುಂಗಭದ್ರಾ ನದಿ, ಅಂಜನಾದ್ರಿ ಬಳಿ ಹರಿಯುವ ವಿಜಯನಗರ ಕಾಲುವೆಯಲ್ಲಿ ಎಸೆಯುವ ಮೂಲಕ ಕೇಸರಿ ವಸ್ತ್ರಕ್ಕೆ ಅವಮಾನ ಮಾಡಲಾಗಿದ್ದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನುಮಮಾಲಾಧಾರಿಗಳಿಗೆ ಮಾಲಾ ಧಾರಣೆ ಮಾಡುವ ಸಂದರ್ಭದಲ್ಲಿ ಗುರುಗಳು ಮಾಲಾವಿಸರ್ಜನೆ ನಂತರ ಸುಭ್ರವಾಗಿ ತೊಳೆದು ಇಡುವಂತೆ ನಿರ್ದೇಶನ ನೀಡಿದರೂ ಬಹುತೇಕ ಹನುಮ ಮಾಲಾಧಾರಿಗಳು ವಿಸರ್ಜನೆಯ ಸಂದರ್ಭದಲ್ಲಿ ಸ್ನಾನ ಮಾಡುವ ಸ್ಥಳಗಳಲ್ಲಿಯೇ ಸಮವಸ್ತ್ರಗಳನ್ನು ಬಿಟ್ಟು ಹೋಗುವ ರೂಢಿಯಾಗಿದ್ದು ಇದರಿಂದ ಪವಿತ್ರ ಕೇಸರಿ ವಸ್ತ್ರಕ್ಕೆ ಅವಮಾನ ಮಾಡಿದಂತೆ ಆಗುತ್ತದೆ ಎನ್ನುವುದು ಸ್ಥಳೀಯರ ವಾದವಾಗಿದೆ.
ಹನುಮಮಾಲಾ ವಿಸರ್ಜನೆ ಮಾಡಲು ತುಂಗಭದ್ರಾ ನದಿ ಹರಿಯುವ ಆನೆಗೊಂದಿ ಚಿಂತಾಮಣಿ, ತಳವಾರಘಟ್ಟ, ಪಂಪಾಸರೋವರ, ಮಧುವನ, ಹನುಮನಹಳ್ಳಿಯ ಗಾಳಿಗುಂಡು, ಋಷಿಮುಖ ಪರ್ವತ ಬಳಿ ಇರುವ ತುಂಗಭದ್ರಾ ನದಿಯ ನಾಲ್ಕೈದು ಸ್ಥಳಗಳು, ವಿರೂಪಾಪೂರಗಡ್ಡಿಯ ನದಿ ಹಾಗೂ ಅಂಜನಾದ್ರಿ ಬಳಿ ಹರಿಯುವ ವಿಜಯನಗರ ಕಾಲುವೆಯಲ್ಲಿ ಹನುಮಮಾಲಾ ಧಾರಿಗಳಿಗೆ ಸ್ನಾನ ಮಾಡಲು ಸ್ಥಳ ನಿಗದಿ ಮಾಡಿ ಪೂರಕ ವ್ಯವಸ್ಥೆ ಮಾಡಲಾಗಿತ್ತು. ಈ ಸ್ಥಳಗಳಲ್ಲಿ ಮಾಲಾ ವಿಸರ್ಜನೆಯ ನಂತರ ಬಹುತೇಕ ಮಾಲಾಧಾರಿಗಳು ತಾವು ಧರಿಸಿದ್ದ ಕೇಸರಿವಸ್ತ್ರಗಳನ್ನು ಅಲ್ಲೇ ಬಿಟ್ಟು ಹೋಗಿದ್ದು ನೀರಿನಲ್ಲಿ ಮತ್ತು ನದಿ, ಕಾಲುವೆ ದಡಗಳಲ್ಲಿ ಕೇಸರಿ ವಸ್ತ್ರಗಳು ಬಿದ್ದಿವೆ. ಇದರಿಂದ ಕೇಸರಿವಸ್ತ್ರವನ್ನು ಅವಮಾನ ಮಾಡಿದಂತೆ ಆಗುತ್ತಿದೆ. ಕೂಡಲೇ ಈ ಕುರಿತು ಮುಂದೆ ಹನುಮಮಾಲೆ ಧರಿಸುವವರಿಗೆ ಗುರುಗಳಾದವರು ಸೂಕ್ತ ಕಠಿಣ ನಿಯಮಗಳನ್ನು ಹೇಳಬೇಕು. ಕೇಸರಿ ವಸ್ತ್ರಗಳನ್ನು ಮಹತ್ವ ಮನನ ಮಾಡಬೇಕಿದೆ. ನದಿ ಮತ್ತು ಕಾಲುವೆಯಲ್ಲಿ ಬಿಡಲಾಗಿರುವ ಕೇಸರಿ ವಸ್ತ್ರಗಳ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೇಸರಿ ವಸ್ತ್ರದ ಅವಮಾನ ಕುರಿತು ಅನೇಕರು ಸ್ಟೇಟಸ್ ಹಾಕಿ ನೋವನ್ನು ತೋಡಿಕೊಂಡಿದ್ದಾರೆ.
ಪ್ರತಿ ಭಾರಿ ಹನುಮಮಾಲಾಧಾರಣೆ ಮಾಡುವ ಸಂದರ್ಭದಲ್ಲಿ ಕೇಸರಿ ವಸ್ತ್ರಗಳ ಮಹತ್ವವನ್ನು ತಿಳಿಸಲಾಗುತ್ತಿದೆ. ಮಾಲಾ ವಿಸರ್ಜನೆಯ ನಂತರ ಬಟ್ಟೆಗಳನ್ನು ಶುಭ್ರಗೊಳಿಸಿ ಇಡುವಂತೆ ಮನವರಿಕೆ ಮಾಡಿದರೂ ಮಾಲಾಧಾರಿಗಳು ಧರಿಸಿದ ವಸ್ತ್ರಗಳನ್ನು ಎಲ್ಲೆಂದರಲ್ಲಿ ಬಿಸಾಕುವ ಮೂಲಕ ಅಪವಿತ್ರಗೊಳಿಸಿರುವ ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಬೇಸರವಾಗಿದೆ. ಮುಂದಿನ ಹನುಮಜಯಂತಿ ಸಂದರ್ಭದಲ್ಲಿ ಕಟ್ಟುನಿಟ್ಟಿನಿಂದ ಮಾಲಾ ವಿಸರ್ಜನೆಯ ನಂತರ ಕೇಸರಿ ವಸ್ತ್ರಗಳನ್ನು ಅಪವಿತ್ರಗೊಳಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಪ್ರಸ್ತುತ ನದಿ ಮತ್ತು ಕಾಲುವೆಯಲ್ಲಿರುವ ಕೇಸರಿ ವಸ್ತ್ರಗಳನ್ನು ಸ್ಥಳೀಯ ಕಾರ್ಯಕರ್ತರಿಂದ ಶ್ರಮದಾನದ ಮೂಲಕ ಸ್ವಚ್ಛ ಮಾಡಿಸಲಾಗುತ್ತದೆ.
–ಪುಂಡಲೀಕ ಭಜರಂಗದಳ ರಾಜ್ಯ ಮುಖಂಡರು.
ಹನಮಮಾಲಾ ವಿಸರ್ಜನೆ ಯಶಸ್ವಿಯಾಗಿರುವ ಸಂತೋಷದ ಮಧ್ಯೆ ತುಂಗಭದ್ರಾ ನದಿ ಹಾಗೂ ಕಾಲುವೆಯಲ್ಲಿ ಎಲ್ಲೆಂದರಲ್ಲಿ ಕೇಸರಿವಸ್ತ್ರಗಳನ್ನು ಎಸೆಯಲಾಗಿದೆ. ಇದರಿಂದ ಪರಿಸರ ನಾಶ ಹಾಗೂ ಕೇಸರಿ ವಸ್ತ್ರಗಳ ಮೇಲಿನ ಭಕ್ತಿ ಕಡಿಮೆಯಾಗುತ್ತದೆ. ಸಂಘಟಕರು ಹನುಮಮಾಲಾದಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯವಾಗಿದೆ.
–ಎಸ್.ಎಂ.ನಾಯಕ್ ಹನುಮನಹಳ್ಳಿ
–ಕೆ.ನಿಂಗಜ್ಜ