ದಾವಣಗೆರೆ: ಶ್ರೀ ಆಂಜನೇಯ, ಪವನಸುತ, ಪವಮಾನ, ಮಾರುತಿ, ಹನುಮಪ್ಪ, ಹನುಮಂತ, ವಾಯುಪುತ್ರ, ಶ್ರೀರಾಮ ಭಂಟ…. ಹೀಗೆ ವಿವಿಧ ನಾಮಾವಳಿಗಳಿಂದ ಕರೆಯಲ್ಪಡುವ ಹನುಮ ದೇವರ ಜಯಂತಿ ಮಂಗಳವಾರ ದಾವಣಗೆರೆ ನಗರ, ವಿವಿಧೆಡೆ ಶ್ರದ್ಧಾ, ಭಕ್ತಿ, ವಿಜೃಂಭಣೆಯೊಂದಿಗೆ ನಡೆಯಿತು.
ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ಹನುಮ ಜಯಂತಿ ಮಹೋತ್ಸವ ಅಂಗವಾಗಿ ಶ್ರೀ ಮಾರುತಿಸ್ವಾಮಿಗೆ ಪಂಚಾಮೃತಾಭಿಷೇಕ, ಕುಂಕುಮ, ಎಲೆ ಪೂಜೆ, ಹೂವಿನ, ಆಭರಣ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಉತ್ಸವಮೂರ್ತಿ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಿತು.
ಶ್ಯಾಬನೂರು ಆಂಜನೇಯ ಬಡಾವಣೆಯಲ್ಲಿನ ಶ್ರೀ ವಿಘ್ನೇಶ್ವರ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ತೊಟ್ಟಿಲೋತ್ಸವ, ಮಹಾಸಂಕಲ್ಪ, ಪಂಚಫಲಸಹಿತ ಲಘುನ್ಯಾಸಪೂರ್ವಕ ರುದ್ರಾಭಿಷೇಕ ಮತ್ತು ಅಲಂಕಾರ, ಕಲಶ ಸ್ಥಾಪನಾ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಚಿರಂತನಾ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ಪಾರ್ವತಿ ಕಲ್ಯಾಣ… ನೃತ್ಯ ರೂಪಕ ನಡೆಯಿತು.
ಲೇಬರ್ ಕಾಲೋನಿಯ ಶ್ರೀ ಪದ್ಮಾಸನ ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ, ತೊಟ್ಟಿಲೋತ್ಸವ, ಮಹಾ ಮಂಗಳಾರತಿ ಮತ್ತಿತರ ಕಾರ್ಯಕ್ರಮ ನಡೆದವು. ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಜನ್ಮೋತ್ಸವ, ಪವಮಾನ ಸ್ವಾಹಾಕಾರ ಹೋಮ, ಮಹಾ ಕಲ್ಪ, ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ರಥಾರೋಹಣ,
ಪವಮಾನ ಸ್ವಾಹಾಕಾರ ಹೋಮದ ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ, ಅನ್ನ ಸಂತರ್ಪಣೆ ನಡೆಯಿತು. ವಿನೋಬ ನಗರದ 3ನೇ ಮುಖ್ಯ ರಸ್ತೆ 9ನೇ ಕ್ರಾಸ್‌ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ಕುಂಕುಮ, ಎಲೆ ಪೂಜೆ, ಹೂವಿನ, ಆಭರಣ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಉತ್ಸವಮೂರ್ತಿ ಮೆರವಣಿಗೆ ನಡೆಯಿತು.
ನಿಟುವಳ್ಳಿ ರಸ್ತೆಯ ಶ್ರೀ ಗುರು ದ್ರೋಣ ಕ್ರೀಡಾ ಸಮಿತಿ, ವಿನಾಯಕರ ಬಳಗದಿಂದ ಹನುಮ ಜಯಂತಿ ಅಂಗವಾಗಿ ಪ್ರಸಾದ ವಿನಿಯೋಗ ಮಾಡಲಾಯಿತು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಮೇಯರ್ ಎಂ.ಎಸ್. ವಿಠuಲ್ ಇತರರು ಪೂಜೆ ನೆರವೇರಿಸಿದರು. ಸರಸ್ವತಿ ಬಡಾವಣೆಯ ಪಂಚಮುಖೀ ದೇವಸ್ಥಾನ, ಶಾಮನೂರು ಗ್ರಾಮದ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯ ನಡೆದವು.