Advertisement

ಜಿಲ್ಲಾದ್ಯಂತ ಸಂಭ್ರಮದ ಹನುಮ ಜಯಂತಿ

08:03 PM Dec 09, 2019 | Lakshmi GovindaRaj |

ದೇವನಹಳ್ಳಿ: ನಗರ, ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಶ್ರೀರಾಮ ಭಕ್ತ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನೆರವೇರಿದವು.

Advertisement

ನಗರದ ಕೋಟೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿರುವ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ವಾಯುಸ್ತುತಿ ಪುನಶ್ಚರಣ ಮಧು ಅಭಿಷೇಕ ಹಾಗೂ ಹೋಮ ಹನುಮದ್ರತಂ, ಶ್ರೀರಾಮ ದೇವರಿಗೆ ವಿಷ್ಣು ಸಹಸ್ರನಾಮ ಸುತ ಲಕ್ಷಪುಷ್ಪಾರ್ಚನೆ ನಡೆಯಿತು. ನಗರ ಸರೋವರ ಬೀದಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕವಡೆ ಅಲಂಕಾರ ಗಮನ ಸೆಳೆಯಿತು.

ಹಳೇ ತಾಲೂಕು ಕಚೇರಿ ಹತ್ತಿರ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೂವಿನ ವಿಶೇಷ ಅಲಂಕಾರ, ಚಿಕ್ಕಕೆರೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಕವಚ ಅಲಂಕಾರ, ತಾಲೂಕಿನ ಲಕ್ಷ್ಮೀಪುರ, ವಿಶ್ವನಾಥಪುರ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಹುರುಳುಗುರ್ಕಿ ಆಂಜನೇಯಸ್ವಾಮಿ, ಬನ್ನಿಮಂಗಲ ಆಂಜನೇಯಸ್ವಾಮಿ ದೇವಾಲಯ, ನಾಗಮಂಗಲ ಆಂಜನೇಯಸ್ವಾಮಿ ದೇವಾಲಯ ಹಾಗೂ ನಗರದ ಚೌಕದ ಆಂಜನೇಯಸ್ವಾಮಿ ದೇವಾಲಯಗಳಲಿ ಮಾಡಲಾಗಿದ್ದ ವಿಶೇಷ ಅಲಂಕಾರ ಕಣ್ತುಂಬಿಕೊಂಡು ಭಕ್ತರು ದೇವರ ಕೃಪೆಗೆ ಪಾತ್ರರಾದರು.

ಪಾರಿವಾಳ ಗುಟ್ಟದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯ ಅಂಗವಾಗಿ ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಅಲಂಕಾರ, ವಿವಿಧ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ವಾಯುಪುತ್ರನ ದರ್ಶನ ಪಡೆದರು.

ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀಮದ್‌ ಹನುಮದ್‌ ಜಯಂತಿ ಮಹೋತ್ಸವದ ಪ್ರಯುಕ್ತ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಪವಮಾನ ಹೋಮ, ಶ್ರೀರಾಮತಾರಕ ಹೋಮ, ಆಂಜಿನೇಯ ಸ್ವಾಮಿಯವರಿಗೆ ಪಂಚಾಮೃತ ಹಾಗೂ ವಿಶೇಷ ಅಲಂಕಾರ ಸೇರಿದಂತೆ ಹಲವು ಪೂಜಾ ಕಾರ್ಯಗಳು ಜರುಗಿದವು.

Advertisement

ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿ ಐಬಸಾಪುರ ಗ್ರಾಮದ ಶ್ರೀ ಅಭಯಾಂಜನೇಯಸ್ವಾಮಿ ದೇವಾಲದಲ್ಲಿ 46 ನೇ ವರ್ಷದ ಹನುಮ ಜಯಂತಿ ಸೇವಾ ಮಹೋತ್ಸವದಲ್ಲಿ ಸುಪ್ರಭಾತ ಸೇವೆ, ಕಳಶರಾಧನೆ, ಪಂಚಾಮೃತ ಅಭಿಷೇಕ, ವಸಾಲಂಕಾರ, ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ, ಪ್ರಧಾನ ಹೋಮ, ಸುದರ್ಶನ ಹೋಮ , ತಾರಕ ಹೋಮ ರಾಷ್ಟ್ರಾಶೀರ್ವಾದ ಹಾಗೂ ಇತರೆ ಹೋಮಗಳು ನಡೆದವು. ಜೊನ್ನಹಳ್ಳಿಯ ಪುಟ್ಟಣದಾಸರು ಮತ್ತು ನಾರಾಯಣದಾಸರ ಸಂಗಡಿಗರಿಂದ ಶ್ರೀ ಹನುಮದ್‌ ವಿಲಾಸ ಹರಿಕಥೆ ನಡೆಯಿತು.

ಬೆಳಿಗ್ಗೆಯಿಂದಲೆ ಕೊಯಿರಾ ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀ ಆಂಜನೇಯಸ್ವಾಮಿಗೆ ಕೃಪೆಗೆ ಪಾತ್ರರಾದರು. ಹನುಮ ಜಯಂತಿ ಅಂಗವಾಗಿ ಭಕ್ತರಿಗೆ ಪ್ರಸಾದ ನಿಯೋಗ ಮಾಡಲಾಯಿತು. ತಾಲೂಕಿನ ಮಲ್ಲೇನಹಳ್ಳಿ ಹಾಗೂ ಜೋನ್ನಹಳ್ಳಿ ಗ್ರಾಮದ ದೇವಾಲಯಗಳಲ್ಲಿ ಸಹ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ತಾಲೂಕಿನ ರಾಮನಾಥ ಪುರ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯ ಅಂಗವಾಗಿ ವಿವಿಧ ಪೂಜಾ ಕಾರ್ಯಗಳು ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾಲೂಕಿನ ವಿಶ್ವನಾಥಪುರ ಗ್ರಾಮದ ಆಂಜಿನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯ ಅಂಗವಾಗಿ ಕಳಷಾರಾಧನೆ, ಪೂರ್ಣಾಹುತಿ, ಅಭಿಷೇಕ, ಅಲಂಕಾರ, ಪೂಜೆ, ನೈವೇದ್ಯ, ಮಹಾಮಂಗಳಾರತಿ ನಡೆಯಿತು. ರತ್ನ ಪ್ರಶಸ್ತಿ ವಿಜೇತ ವಿದ್ವಾನ್‌ ಮುರಳಿ ಸಂಗಡಿಗರಿಂದ ನಾಗಸ್ವರ ವಾದ್ಯ ಏರ್ಪಡಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next