Advertisement

ಮತದಾನ ಜಾಗೃತಿಗೆ ಸೈಕಲ್‌ ಏರಿದ ಹನುಮ

02:52 PM Apr 09, 2019 | Team Udayavani |
ಹಾವೇರಿ: ಲೋಕಸಭಾ ಚುನಾವಣೆ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವ
ಕುರಿಗಾಹಿ ಗಾಯಕ ಹನುಮಂತಪ್ಪ ಲಮಾಣಿ ಸೋಮವಾರ ಸಂಜೆ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡು ನಗರದಾದ್ಯಂತ ಮತದಾನ ಜಾಗೃತಿ ಮೂಡಿಸಿದರು.
ಜಾನಪದ ಕಂಠದಿಂದ ನಾಡಿನ ಮನೆಮಾತಾಗಿರುವ ಜಿಲ್ಲೆಯ ಸವಣೂರು ತಾಲೂಕು ಚಿಲ್ಲೂರಬಡ್ನಿ ತಾಂಡಾದ ಹನುಂತಪ್ಪ, ಮೊದಲ ಬಾರಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್‌
ಸಮಿತಿ ಆಯೋಜಿಸಿದ ಸೈಕಲ್‌ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವೀಪ್‌ ಐಕಾನ್‌ ಹನುಮಂತ ಜಿಲ್ಲಾ ಕ್ರೀಡಾಂಗಣದಿಂದ ಜೆ.ಎಚ್‌. ಪಟೇಲ್‌ ವೃತ್ತ, ವಿ.ಕೃ. ಗೋಕಾಕ ವೃತ್ತ ಎಂ.ಜಿ. ರಸ್ತೆ ಮಾರ್ಗವಾಗಿ ಪಿ.ಬಿ.
ರಸ್ತೆಯ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ವಿದ್ಯಾರ್ಥಿಗಳೊಂದಿಗೆ ಸೈಕಲ್‌ ತುಳಿದು ಮತದಾನ ಜಾಗೃತಿಗೆ ಸ್ಫೂರ್ತಿ ತುಂಬಿದರು.
ಹೊಸಮನಿ ಸಿದ್ದಪ್ಪ ವೃತ್ತದ (ಬಸ್‌ ನಿಲ್ದಾಣ) ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಯಕ ಹನುಮಂತಪ್ಪ, ಏ. 23ರಂದು ನಡೆಯುತ ಲೋಕಸಭೆಗೆ ಚುನಾವಣೆಯಲ್ಲಿ ಎಲ್ಲ ಮತದಾರರು ಮಾತದಾನ ಮಾಡಿ. ನನಗೆ ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ದೊರೆತಿದೆ. ನಾನೂ ಮತದಾನ ಮಾಡುವೆ. ನೀವೂ ಸಹ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ. ಲೀಲಾವತಿ ಮಾತನಾಡಿ, ಜಿಲ್ಲೆಯವರೇ ಆದ ಗಾಯಕ ಹನುಮಂತಪ್ಪ ಅವರನ್ನು ಜಿಲ್ಲಾ ಸ್ವೀಪ್‌ ಸಮಿತಿಯ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಮೊದಲ ಬಾರಿಗೆ ಹಾವೇರಿ ನಗರಕ್ಕೆ ಆಗಮಿಸಿ ಸೈಕಲ್‌ ಜಾಥಾದ
ಮೂಲಕ ಮತದಾರರ ಜಾಗೃತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಏ.17 ರಂದು ನಡೆಯುವ ಮತಗೋಷ್ಠಿ ಹಾಗೂ 19 ರಂದು ನಡೆಯುವ ಮೊಂಬತ್ತಿ ಮೆರವಣಿಗೆ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಹನುಮಂತಪ್ಪ ಅವರಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶಾಕೀರ್‌ಅಹ್ಮದ್‌, ವಾರ್ತಾಧಿಕಾರಿ ಹಾಗೂ ಇತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next