Advertisement

ಜನಮನ ರಂಜಿಸಿದ ಹಂತಿ ಪದ ಸ್ಪರ್ಧೆ

02:38 PM Apr 08, 2022 | Team Udayavani |

ರೋಣ: “ಹೊಟ್ಟ ಹೋತು ಪಟ್ಟಣಕ ಕಂಕಿ ಹೋತು ಕಂಕಣಕ, ಮುತ್ತಿನ ಸೆಳ್ಳು ಮುಗಿಲುದ್ದ ರಾಶಿ, ಆಹಾ ಪುಲ್ಲಿಗೋ ಮನಕಾಲ ಮುರಿಗೋ, ಹುಲ್ಲಲಗ್ಯೋ ಚಲಾಂಬರಗ್ಯೋ ಹೊರ ಮಲ್ಲಯ್ಯ ಹುಲಸ್‌ ಕೊಡಯ್ಯ’ ಈ ಪದಗಳು ಏನು ಅಂತಿರಾ, ಇವು ಹಿಂದಿನ ಕಾಲದಲ್ಲಿ ರೈತರು ಎತ್ತುಗಳ ಸಹಾಯದಿಂದ ರಾಶಿ ಮಾಡುವಾಗ ಹಾಡುತ್ತಿದ್ದ ಹಂತಿ ಪದಗಳು.

Advertisement

ಇಂದಿನ ಆಧುನಿಕ ಭರಾಟೆಯಲ್ಲಿ ಇಂತಹ ಕಾರ್ಯಕ್ರಮ ನಡೆದದ್ದು, ತಾಲೂಕಿನ ಮಾಡಲಗೇರಿ ಗ್ರಾಮದ ಕಲಬುರಗಿ ಶರಣಬಸಣ್ಣನವರ 49ನೇ ಪುರಾಣ ಪ್ರವಚನ ಪ್ರಯುಕ್ತ ಏರ್ಪಡಿಸಿದ್ದ ರಾಶಿ ಕಾರ್ಯಕ್ರಮದಲ್ಲಿ.

ಈ ಕಾರ್ಯಕ್ರಮಕ್ಕೆ ಎತ್ತನ್ನು ಕಟ್ಟಲು ಸವಾಲ್‌ ಮೂಲಕ ದೇವಾಸ್ಥಾನಕ್ಕೆ ಹಣವನ್ನು ಕೊಟ್ಟು ಎತ್ತನ್ನು ಹಂತಿಗೆ ಹೂಡುವ ಇವರ ಭಕ್ತಿ ನಿಜಕ್ಕೂ ಮೆಚ್ಚುವಂತಹದ್ದು. ಹಿಂದಿನ ಶತಮಾನಗಳಲ್ಲಿ ಯಂತ್ರಗಳ ಬಳಕೆ ಇದ್ದಿಲ್ಲ. ಅಂದು ಬರೀ ಎತ್ತುಗಳ(ಬಸವ ಅಥವಾ ಗೋವು) ಇದ್ದವು. ಇವುಗಳಿಂದ ರೈತರು ತಾವು ಬೆಳದ ಫಸಲುಗಳನ್ನು ರಾಶಿ ಮಾಡಿಕೊಳ್ಳುತ್ತಿದ್ದರು.

ಅಂತಹ ಪದ್ಧತಿ ಇಂದಿನ ಆಧುನಿಕ ಯಂತ್ರಗಳ ಕೈಯಲ್ಲಿ ಸಿಕ್ಕು ಕಣ್ಮರೆಯಾಗಿದ್ದು, ಹಿರಿಯ ಜೀವಿಗಳಿಗೆ ನುಂಗಲಾರದ ತುತ್ತಾಗಿದೆ. ಹಿಂದಿನ ಕಾಲದಲ್ಲಿ ರಾಶಿ ಮಾಡುವ ಸಮಯ ಬಂತು ಅಂದರೆ ಸಾಕು ರೈತರಿಗೆ ಎಲ್ಲಿಲದ ಸಂತಸ ಸಡಗರ ಮನೆ ಮಾತಾಗುತ್ತಿತ್ತು.

ರಾಶಿ ಮಾಡುವ ಹಿಂದಿನ ದಿನದಂದು ಮನೆಯ ಹೆಣ್ಣುಮಕ್ಕಳು ಶೇಂಗಾ ಉಂಡಿ, ನುಚ್ಚು, ತರ ತರದ ಹಿಂಡಿಗಳು, ಕಡಕ್‌ ರೋಟ್ಟಿ, ಮೊಸರು, ಮಜ್ಜಿಗೆ, ಹಾಲು ಸೇರಿದಂತೆ ಅನೇಕ ರೀತಿಯ ಅಡುಗೆ ಮಾಡಿಕೊಂಡು ಮರು ದಿನ 8 ರಿಂದ 16 ಎತ್ತುಗಳು ಹಂತಿಯಲ್ಲಿ ಭಾಗವಹಿಸುತ್ತಿದ್ದವು.

Advertisement

ಆದರೆ ಈಗ ಅಂತಹ ಕಾರ್ಯಕ್ರಮಗಳು ಬರೀ ಕೇಳಲು ಸಾಧ್ಯ. ಅಂತಹ ವಿಶೇಷ ಕಾರ್ಯಕ್ರಮವನ್ನು ಮಾಡಲಗೇರಿಯ ಜನ ಮುಂದಿನ ಪೀಳಿಗೆಗೆ ತೋರಿಸಲು ಪ್ರಾಯೋಗಿಕವಾಗಿ ಮಾಡಿದ್ದಾರೆ. ಮಾಡಲಗೇರಿ ಗ್ರಾಮದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುತ್ತವೆ.

ಗೋ ಮಾತೆಗೊ ಈ ಗ್ರಾಮಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಸಿಮಂತಕರಣ ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಸಹಜವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಮಾಡಲಗೇರಿ ಚನ್ನಪ್ಪಗೌಡ ಅಮಾತೀಗೌಡ್ರ ಕುಂಟುಂಬದವರು ತಮ್ಮ ಹಸು ಗರ್ಭಸ್ಥವಾದ ಸಮಯದಲ್ಲಿ, ಹಸುವಿಗೆ ಜನ್ಮ ನೀಡುವ ಸಮಯದಲ್ಲಿ ಸೀಮಂತ ಕಾರಣ ಮಾಡುತ್ತೇವೆಂದು ಬೇಡಿಕೊಂಡಿದ್ದರು.

ಆ ಪ್ರಕಾರ ಅವರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀಮಂತ ಮಾಡಿದಂತೆ ಗೋವಿಗೆ ಸೀರೆ, ಹೂ, ಹಣ್ಣು ಜೂಲ್‌ ಸೇರಿದಂತೆ ಅನೇಕ ವಸ್ತುಗಳಿಂದ ಸಿಂಗಾರ ಮಾಡಿ ಸೀಮಂತ ಕಾರ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಒಂದೆಡೆಯಾದರೆ ಗ್ರಾಮದಲ್ಲಿ ಶರಣಬವೇಶ್ವರರ ಪುರಾಣ ಪ್ರವಚನ ಸತತವಾಗಿ 49ನೇ ವರ್ಷದಿಂದ ನಡೆದುಕೊಂಡು ಬಂದಿದೆ. ಪುರಾಣ ಆರಂಭವಾದ ದಿನದಿಂದ ಮೊದಲ ದಿನ ಶರಣರ ಜನನದ ಕಾರ್ಯಕ್ರಮದ ಪ್ರಯುಕ್ತ ಅಂದು ಅರಳಗುಂಡಿಯಲ್ಲಿ ಶರಣರ ನಾಮಕರಣ ವಿಜೃಂಭಣೆಯಿಂದ ಜರುಗಿತು. ಈ ಸಮಯದಲ್ಲಿ ಹಿರಿಯ ರೈತರು ಹಂತಿಯ ಪದಗಳನ್ನು ಹೇಳತ್ತಾ ಹಾಡುತ್ತಾ ಮತ್ತು ಗ್ರಾಮದ ಯುವಕರು ಕುಣಿದು ಕುಪ್ಪಳಿಸುತ್ತಾರೆ.

 

ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಇಂದಿನ ಮಕ್ಕಳಿಗೆ ನಾವು ಅಂದು ರಾಶಿ ಮಾಡಲು ಎಷ್ಟು ಕಷ್ಟ ಪಡುತ್ತಿದ್ದೆವು ಎಂಬುದನ್ನು ತಿಳಿಸಿದಂತಾಗುತ್ತದೆ. ನಮ್ಮ ಹಿಂದಿನ ಹಳೆಯ ಸಂಪ್ರಾದಾಯಗಳನ್ನು ಮುಂದಿನ ಪೀಳಿಗೆ ಬಳುವಳಿಯಾಗಿ ನೀಡಿದಂತ್ತಾಗುತ್ತದೆ. ಅಲ್ಲದೆ ನಮ್ಮ ಕಾಲದಾಗ ಸುಗ್ಗಿ ಬಂತು ಅಂದರ ಬಾಳ ಕುಷಿಯಿಂದ ಹಂತ್ತಿ ಕಟ್ಟಿ ರಾಶಿ ಮಾಡುತ್ತಿದ್ದರು. ಆದರೆ ಈಗ ದುರ್ದೈವ. ಅವು ಒಂದೂ ಈಗ ಇಲ್ಲ. ಭಾಳ ನೋವು ಅನಸುತ್ರೀ. –ಹನುಮಂತಗೌಡ ಪಾಟೀಲ, ಮಾಡಲಗೇರಿ ಹಿರಿಯ ರೈತ       

-ಯಚ್ಚರಗೌಡ ಗೋವಿಂದಗೌಡ್ರ

 

 

Advertisement

Udayavani is now on Telegram. Click here to join our channel and stay updated with the latest news.

Next