Advertisement

ಪೋಲಿ ಆಟ ಆಡಿ ಬಂದವನು ನಾನು, ಭಯಸ್ತನಲ್ಲ: ಹಂಸಲೇಖ

04:13 PM Dec 26, 2021 | Team Udayavani |

ಬೆಂಗಳೂರು : “ನಾನು ಭಯಸ್ತನಲ್ಲ, ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು ನಾನುʼʼ ಎಂದು ನಾದ ಬ್ರಹ್ಮ ಹಂಸಲೇಖ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ “ಯರಬೇವುʼʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಂಸ ಲೇಖ ಅವರಿಗೆ ರಂಗಕರ್ಮಿ ನಾಗರಾಜಮೂರ್ತಿ “ಯಾರಿಗೂ ಹೆದರಬೇಡಿʼʼ ಎಂದು ಧೈರ್ಯ ತುಂಬಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಒಂದು ವಿವಾದವಾಗಿ ನನಗೆ ಗೊತ್ತಿಲ್ಲದ ಸಮುದಾಯದವರೆಲ್ಲ ನನ್ನ ಜತೆಗೆ ನಿಂತರು. ಹೀಗೆಲ್ಲ ಆಗುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ.  ಈ ಹಿಂದೆ ಬರೆದುಕೊಳ್ಳದೇ ಭಾಷಣ ಮಾಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಜೀವನದಲ್ಲಿ ಮೊದಲ ಬಾರಿಗೆ ಬರೆದುಕೊಂಡು ಮಾತನಾಡುತ್ತಿದ್ದೇನೆ ಎಂದರು.

ನಾನು ಭಯಸ್ತನ್ನಲ್ಲ. ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ಆದರೆ ನುಡಿದರೆ ಮುತ್ತಿನ ಹಾರದಂತೆ ಇರಬೇಕು. ನುಡಿ ಕೆಲವೊಮ್ಮೆ ಸ್ಫಟಿಕದ ಸಲಾಕೆಯೂ ಆಗುತ್ತದೆ. ನಾನು ವಿವಾದದಲ್ಲಿ ಸಿಲುಕಿದಾಗ ನನ್ನ ರಕ್ಷಣೆಗೆ ಬಂದವರು ಪ್ರೊ.ಸಿದ್ದರಾಮಯ್ಯ ಎಂದು ಸ್ಮರಿಸಿದರು.

ಇದನ್ನೂ ಓದಿ : ಹಂಸಲೇಖ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? : ಸಿದ್ದರಾಮಯ್ಯ

Advertisement

ಮತ್ತೆ ಸಿಎಂ ಆಗಲಿ 

ಹಾಲಿನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ. ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು. ಎರಡು ಹೊತ್ತು ಬಸವನ ಹಸಿವು ಪ್ರೊಟಿನ್‌ ನೀಡುತ್ತಿದೆ ಎಂದರು.

ಪೇಜಾವರ ಶ್ರೀಗಳ ಬಗ್ಗೆ ಮೈಸೂರಿನಲ್ಲಿ ಹಂಸಲೇಖ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಈ ಬಗ್ಗೆ ಅವರು ಕ್ಷಮೆ ಯಾಚಿಸಿದ್ದರೂ ವಿವಾದ ತಣ್ಣಗಾಗಿರಲಿಲ್ಲ. ಈ ಪ್ರಕರಣದ ಬಗ್ಗೆ ಹಂಸಲೇಖ ಸಾರ್ವಜನಿಕ ವೇದಿಕೆಯಲ್ಲಿ ಯಾವುದೇ ಅಭಿಪ್ರಾಯ ಹಂಚಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. “ನಾನು ಭಯಸ್ಥನಲ್ಲʼʼ ಎಂಬ ಅವರ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next