Advertisement

ಹಂಗಳೂರು: ಪಾಳುಬಿದ್ದ ಕೆರೆಗಳಿಗೆ ಬೇಕು ರಕ್ಷಣೆ

12:55 AM Jun 24, 2019 | Team Udayavani |

ಕುಂದಾಪುರ: ನಾವು ಸಣ್ಣದಿರುವಾಗ ಈ ಕೆರೆಗಳು ಬಹಳ ಅನುಕೂಲವಾಗಿದ್ದವು. ಇಲ್ಲಿನ ನೀರೇ ಜನರ ಆದ್ಯತೆಗೆ ಬಳಕೆಯಾಗುತ್ತಿತ್ತು. ಕುಡಿಯುವ ಹೊರತಾದ ಇತರ ಉಪಯೋಗಕ್ಕೆ, ಜಾನುವಾರುಗಳಿಗೆ, ಕೃಷಿಗೆ ಈ ನೀರು ಬಳಕೆಯಾಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಉಪಯೋಗಕ್ಕೆ ಇಲ್ಲದಂತಾಗಿದೆ ಎನ್ನುತ್ತಾರೆ ಹಂಗಳೂರಿನ ಆನಂದ ಪೂಜಾರಿ ಅವರು.

Advertisement

ಹಂಗಳೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಇರುವ ಕೆರೆಗಳು ಹೂಳೆತ್ತದೆ ನಿಸ್ತೇಜವಾದುದನ್ನು ಕಾಣು ತ್ತಿದ್ದಂತೆಯೇ ಒಂದೊಂದೇ ಕೆರೆಗಳು ಗತಕಾಲದ ಕಥೆ ಹೇಳುವಂತೆ ಭಾಸವಾಗುತ್ತಿತ್ತು. ಒಂದೊಂದು ಕೆರೆಗೂ ಒಂದೊಂದು ಹೆಸರಿದ್ದಂತೆ ಅದರ ಹಿಂದೆ ಜನಪದೀಯ ಕಥೆಗಳೂ ಇದ್ದವು. ಇವೆಲ್ಲಕ್ಕಿಂತ ಮುಖ್ಯವಾಗಿ ವಿಶಾಲವಾಗಿ ಹರವಿಕೊಂಡು ಗದ್ದೆಯ ನಡುವೆ ಇದ್ದ ಈ ಕೆರೆಗಳು ಈಗ ಕೆಸರು ತುಂಬಿಕೊಂಡು, ಕಳೆಗಿಡ ತುಂಬಿಕೊಂಡು ಕಳಾಹೀನವಾಗಿವೆ.

ಹುಚ್ಕೆರೆ
ಅರ್ಧ ಎಕರೆಯಷ್ಟು ವಿಶಾಲವಾದ ಕೆರೆ. ಇದರ ವಿಸ್ತೀರ್ಣ ಬರೋಬ್ಬರಿ 53 ಸೆಂಟ್ಸ್‌ನಷ್ಟಿದೆ. ಪಂಚಾಯತ್‌ನಿಂದ ಹಿಂದೊಮ್ಮೆ ಹೂಳೆತ್ತಿದ್ದರು. ಆದರೆ ಕೆಲಸಕ್ಕಿಂತ ಜಾಸ್ತಿ ಬಿಲ್‌ ಆಗಿದೆ ಎನ್ನುವುದು ಸ್ಥಳೀಯರ ಆರೋಪ. ಈಗಂತೂ ಪ್ರಯೋಜನಕ್ಕಿಲ್ಲ.

ಹಿತ್ಲಗುಮ್ಮಿಕೆರೆ
ಈ ಕೆರೆ ಖಾಸಗಿಯಾಗಿದ್ದರೂ ಊರಿನ ಅನೇಕರಿಗೆ ಪ್ರಯೋಜನಕ್ಕೆ ದೊರೆಯುತ್ತಿತ್ತು. ಈಚೆಗೆ ಈ ಕೆರೆಯನ್ನು ಮುಚ್ಚಲಾಗಿದೆ.

ಚೋಕಾಡ್‌ಸಾಲ್‌ ಕಾಲುವೆ
ಕೋಟೇಶ್ವರದ ಕಾಗೇರಿಯಿಂದ ಹುಣ್ಸೆಕಟ್ಟೆವರೆಗೆ ವ್ಯಾಪಿಸಿರುವ ಚೋಕಾಡ್‌ಸಾಲ್‌ ಕಾಲುವೆಯ ಹೂಳೆತ್ತಿದರೆ ನೀರು ಸರಾಗವಾಗಿ ಹರಿಯುತ್ತದೆ. ಜನರಿಗೂ ಈ ಕಾಲುವೆಯ ನೀರು ಕೃಷಿ ಅನುಕೂಲಕ್ಕೆ ದೊರೆಯುತ್ತದೆ. ಈ ಭಾಗದ ದೊಡ್ಡ ಕಾಲುವೆ ಇದಾಗಿದೆ. ಕೆಲ ಸಮಯದ ಹಿಂದೆ ಸ್ವಸಹಾಯ ಸಂಘದವರು ಈ ಕಾಲುವೆಯನ್ನು ಭಾಗಶಃ ಸ್ವತ್ಛಗೊಳಿಸಿದ್ದಾರೆ.

Advertisement

ಗೂಗಲ್‌ಗೆ ಸೇರಿಸಲಾಗಿದೆ
ಮುಂದಿನ ಪೀಳಿಗೆಗೆ ಇಲ್ಲಿ ಅನೇಕ ಕೆರೆಗಳು ಇತ್ತೆಂಬ ಕುರುಹುಗಳು ಇರಬೇಕೆಂಬ ನಿಟ್ಟಿನಲ್ಲಿ ಗೂಗಲ್‌ ಮ್ಯಾಪ್‌ನಲ್ಲಿ ಕೂಡಾ ಈ ಕೆರೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಸ್ಥಳೀಯಾಡಳಿತ ಈ ಕೆರೆಗಳ ಪುನರುಜ್ಜೀವನ ಕಡೆಗೆ ಗಮನ ಹರಿಸಬೇಕು.
-ರೋಶನ್‌ ಡಿ’ಸೋಜಾ, ಹಂಗಳೂರು ನಿವಾಸಿ

ಡಿಸಿಗೆ ಪತ್ರ
ಈ ಪರಿಸರದ ಕೆರೆಗಳನ್ನು ಉಳಿಸಬೇಕೆಂದು ಸ್ಥಳೀಯರಾದ ರಂಗನಾಥ ಕಾರಂತ್‌ ಅವರು ಜಿಲ್ಲಾಧಿಕಾರಿಗೆ 2018ರಲ್ಲಿ ಪತ್ರ ಬರೆದಿದ್ದಾರೆ. ಈ ವರೆಗೂ ಸ್ಪಂದನೆ ದೊರೆತಿಲ್ಲ.

ಬೇಡಿಕೆಗಳು
ಬೇಸಗೆಯಲ್ಲಿ ಈ ಕೆರೆಯ ನೀರು ಹಾಯಿಸಿ ಕಾತಿ, ಸುಗ್ಗಿ ಬೆಳೆ ಅನಂತರ ಧಾನ್ಯ ಬೆಳೆಯುತ್ತಿದ್ದೆವು. ಆದರೆ ಈಗ ಹೂಳು ತುಂಬಿ ಉಪಯೋಗಕ್ಕೆ ದೊರೆಯುತ್ತಿಲ್ಲ. ಆದ್ದರಿಂದ ಇದನ್ನು ಉದ್ಯೋಗ ಖಾತರಿ ಯೋಜನೆ ಅಥವಾ ಕೆರೆ ಅಭಿವೃದ್ಧಿ ಯೋಜನೆ ಮೂಲಕ ಹೂಳೆತ್ತಬೇಕು. ಕೆರೆಗೆ ದಂಡೆ ಕಟ್ಟಿಸಬೇಕು. ಜನ ಜಾನುವಾರುಗಳು ಬೀಳದಂತೆ ಬೇಲಿ ಹಾಕಿಸಬೇಕು. ಅಂತರ್ಜಲ ವೃದ್ಧಿಗೆ ನೆರವಾಗಬೇಕು. ಕೆರೆಯ ನೀರು ಸಾರ್ವಜನಿಕರಿಗೆ ಕೃಷಿ ಹಾಗೂ ಇತರ ಅನುಕೂಲಕ್ಕೆ ದೊರೆಯುವಂತೆ ಮಾಡಬೇಕು ಎಂದು ಲಕ್ಷ್ಮಣ ಪೂಜಾರಿ, ಫೆಲಿಕ್ಸ್‌ ಡಿ’ಸೋಜಾ, ಶಕುಂತಳಾ, ಚಂದು ಪೂಜಾರ್ತಿ, ಪುಂಡಲೀಕ, ಶೀನ ಪೂಜಾರಿ, ಕೊರಗ ಪೂಜಾರಿ, ಕೊರಗಯ್ಯ ಶೆಟ್ಟಿ, ಗಿರಿಜಾ ಪೂಜಾರ್ತಿ, ಪ್ರಕಾಶ್‌ ಪೂಜಾರಿ, ಸಂತೋಷ್‌ ಮೊದಲಾದವರು ಒತ್ತಾಯಿಸಿದ್ದಾರೆ.

ಹೂಳೆತ್ತಲಾಗುವುದು
ಉದ್ಯೋಗ ಖಾತರಿ ಹಾಗೂ 14ನೇ ಹಣಕಾಸು ಯೋಜನೆ ಮೂಲಕ ನೇರಂಬಳ್ಳಿ, ಹೊಸೊಕ್ಲು ಹಾಗೂ ಕೋಡಿ ರಸ್ತೆಯ ತೋಡಿನ ಹೂಳೆತ್ತಲಾಗಿದೆ. ಬೇಸಗೆಯಲ್ಲಿ ಹೂಳೆತ್ತಲು ನೀತಿಸಂಹಿತೆ ಅಡ್ಡಿಯಾಗಿತ್ತು. ನೀತಿಸಂಹಿತೆಯಿಂದ ಉದ್ಯೋಗ ಖಾತರಿ ಹೊರಗಿಟ್ಟರೆ ಇಂತಹ ಕಾಮಗಾರಿ ಮಾಡಿಸಬಹುದು. ಈ ಮಳೆಗಾಲ ಮುಗಿದ ತತ್‌ಕ್ಷಣ ಯಾವುದಾದರೂ ಒಂದು ಕೆರೆಯ ಹೂಳೆತ್ತಲಾಗುವುದು. ಇದಕ್ಕಾಗಿ ಈಗಲೇ ಅಂದಾಜುಪಟ್ಟಿ ತಯಾರಿಸಲಾಗುವುದು.
-ಕೆ.ಸಿ. ರಾಜೇಶ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಹಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next