ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪತ್ರಕರ್ತ ಕಂ ನಿರ್ದೇಶಕ ವಿಠಲ್ ಭಟ್ ನಿರ್ದೇಶನದ ಎರಡನೇ ಚಿತ್ರ ‘ಹ್ಯಾಂಗೋವರ್’ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಸಾಲು ಸಾಲು ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ರಿಲೀಸ್‌ಗೆ ರೆಡಿಯಿದ್ದ ಕಾರಣ, ಜೊತೆಗೆ ವಾರ್ಷಿಕ ಪರೀಕ್ಷೆಗಳು, ಅದರ ಹಿಂದೆ ಸಾರ್ವತ್ರಿಕ ಚುನಾವಣೆ, ಆಮೇಲೆ ಐಪಿಎಲ್… ಹೀಗೆ ಒಂದರ ಹಿಂದೊಂದು ಕಾರಣಗಳಿಂದ ತನ್ನ ಬಿಡುಗಡೆಯನ್ನು ಸತತ ಆರು ತಿಂಗಳಿನಿಂದ ಮುಂದೂಡಿಕೊಂಡು ಬಂದಿದ್ದ ‘ಹ್ಯಾಂಗೋವರ್’ ಅಂತೂ ಜೂನ್. 14ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯನ್ನು ನಡೆಸಿದ ‘ಹ್ಯಾಂಗೋವರ್’ ಚಿತ್ರತಂಡ, ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಕಾರಣಗಳು ಮತ್ತು ಬಿಡುಗಡೆಗೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಮಾತನಾಡಿತು.
ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ವಿಠಲ್ ಭಟ್, ‘ಕಳೆದ ವರ್ಷದ ಕೊನೆಗೆ ‘ಹ್ಯಾಂಗೋವರ್’ ಚಿತ್ರ ಸಂಪೂರ್ಣವಾಗಿ ತಯಾರಾಗಿ ಬಿಡುಗಡೆಗೆ ತಯಾರಾಗಿತ್ತು. ಆದರೆ ಬಳಿಕ ದೊಡ್ಡ ಸಿನಿಮಾಗಳ ಅಬ್ಬರ, ಥಿಯೇಟರ್ ಸಮಸ್ಯೆ ಹೀಗೆ ಕೆಲ ಕಾರಣಗಳಿಂದ ಬಿಡುಗಡೆಯನ್ನು ಮುಂದೂಡುತ್ತ ಬರಬೇಕಾಯಿತು. ಈಗ ಚಿತ್ರವನ್ನು ಇದೇ ಜೂ. 14ರಂದು ರಿಲೀಸ್ ಮಾಡಲು ನಿರ್ಧರಿಸಿದ್ದೇವೆ’ ಎಂದರು.
‘ಸಮಾಜ, ತಂದೆ-ತಾಯಿ ಕೊಟ್ಟ ಸ್ವತಂತ್ರವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳದಿದ್ದರೆ, ಏನಾಗಬಹುದು ಎಂಬ ಎಳೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಇಡೀ ಚಿತ್ರ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಮೂವರು ಹುಡುಗರು, ಮೂವರು ಹುಡುಗಿಯರು ನೈಟ್ ಕಾಕ್ಟೇಲ್ ಪಾರ್ಟಿ ಮುಗಿಸಿ, ನಶೆಯಲ್ಲೇ ಫಾರ್ಮ್ಹೌಸ್ ಒಂದರಲ್ಲಿ ಉಳಿದುಕೊಂಡಿರುತ್ತಾರೆ. ಬೆಳಿಗ್ಗೆ ಅದರಲ್ಲಿ ಹುಡುಗಿಯೊಬ್ಬಳು ಕೊಲೆಯಾಗಿರುತ್ತಾಳೆ. ಎಲ್ಲರೂ ‘ಹ್ಯಾಂಗೋವರ್’ನಲ್ಲಿರುವಾಗಲೇ ಇಂಥದ್ದೊಂದು ಕ್ರೈಂ ನಡೆದು ಹೋಗಿರುತ್ತದೆ. ಹಾಗಾದರೆ, ಆ ಕೊಲೆಯನ್ನ ಯಾರು ಮಾಡಿದರು, ಯಾಕಾಗಿ ಮಾಡಿದರು ಅನ್ನೋದೆ ಚಿತ್ರದ ಸ್ಟೋರಿ. ಅದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ. ಇಡೀ ಸಿನಿಮಾ ರಿವರ್ಸ್ ಆರ್ಡರ್‌ನಲ್ಲಿ ಸಾಗುತ್ತದೆ ಎಂಬ ವಿವರಣೆ ಕೊಡುತ್ತಾರೆ’ ನಿರ್ದೇಶಕ ವಿಠಲ್ ಭಟ್.
ಇನ್ನು ‘ಹ್ಯಾಂಗೋವರ್’ ಚಿತ್ರದಲ್ಲಿ ಭರತ್, ರಾಜ್, ಚಿರಾಗ್ ಮೂವರು ನಾಯಕರ ಪಾತ್ರದಲ್ಲಿ ಮಹತಿ ಭಿಕ್ಷು, ಸಹನಾ ಪೊನ್ನಮ್ಮ, ನಂದಿನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಟಾಲಿವುಡ್ ತಾರೆ ಶಫಿ, ನೀನಾಸಂ ಅಶ್ವಥ್, ಶ್ರೀಧರ್, ಯತಿರಾಜ್, ಸ್ಪಂದನಾ ಪ್ರಸಾದ್ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬರುವ ಹಾಡೊಂದಕ್ಕೆ ನಟಿ ನೀತು ಶೆಟ್ಟಿ ಹೆಜ್ಜೆ ಹಾಕಿದ್ದಾರೆ.
ಸುಮಾರು 32 ದಿನಗಳ ಕಾಲ ಮೈಸೂರು, ಬೆಂಗಳೂರು, ಊಟಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಚೇತನ್ ಬಹದ್ದೂರ್, ಕೃಷ್ಣ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಯೋಗಿ ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನವಿದೆ. ಗಣೇಶ್ ರಾಣೆಬೆನ್ನೂರು ಸಂಭಾಷಣೆ ಬರೆದಿದ್ದಾರೆ. ರಾಕೇಶ್. ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಹ್ಯಾಂಗೋವರ್’ ಚಿತ್ರದ ಟ್ರೇಲರ್, ಹಾಡುಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಐವತ್ತಕ್ಕೂ ಹೆಚ್ಚಿನ ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಚಿತ್ರದ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದೆ.