ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತುಗೊಂಡು ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲವು ಹೊಸ ಡೆತ್ ವಾರಂಟ್ ಹೊರಡಿಸಿದೆ.
ಈ ಪ್ರಕಾರ ನಿರ್ಭಯಾ ಪ್ರಕರಣದಲ್ಲಿ ಆರೋಪ ಸಾಬೀತುಗೊಂಡು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಅವರನ್ನು ಮಾರ್ಚ್ 20ರ ಬೆಳಿಗ್ಗೆ 5.30 ಗಂಟೆಗೆ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗುವುದು.
ಈ ಪ್ರಕ್ರಿಯೆಯನ್ನು ನೆರವೇರಿಸಲು ವಧಾಕಾರ ಸಿಂಧಿ ರಾಮ್ ಯಾನೆ ಪವನ್ ಜಲ್ಲಾದ್ ಅವರು ಈಗಾಗಲೇ ದೆಹಲಿಯಲ್ಲಿರುವ ತಿಹಾರ್ ಜೈಲನ್ನು ತಲುಪಿದ್ದಾನೆ. ಜಲ್ಲಾದ್ ಬುಧವಾರದಂದು ಇಲ್ಲಿರುವ ವಧಾ ಸ್ಥಾನದಲ್ಲಿ ಅಣಕು ನೇಣು ಪ್ರಕ್ರಿಯೆಯನ್ನು ನಡೆಸಲಿದ್ದಾನೆ ಎಂಬ ಮಾಹಿತಿಯನ್ನು ತಿಹಾರ್ ಜೈಲು ಅಧಿಕಾರಿಗಳು ನೀಡಿದ್ದಾರೆ.
ಉತ್ತರಪ್ರದೇಶದ ಮೀರತ್ ನಿವಾಸಿಯಾಗಿರುವ ಪವನ್ ಜಲ್ಲಾದ್ ಐವರ ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಜಲ್ಲಾದ್ ತಂದೆ ಮಮ್ಮು ಸಿಂಗ್, ತಾತ ಕಲ್ಲು ಜಲ್ಲಾದ್ ಸಹ ವಧಾಕಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಇನ್ನು ಜಲ್ಲಾದ್ ಅವರ ಮುತ್ತಾತತನೂ ಸಹ ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದ ಸಂದರ್ಭದಲ್ಲಿ ವಧಾಕಾರನಾಗಿದ್ದ ಎಂಬುದು ಉಲ್ಲೇಖನೀಯ.
ನಿರ್ಭಯಾ ಹಂತಕರು ತಮ್ಮ ಪಾಲಿನ ಕಾನೂನು ಪರಿಹಾರಗಳನ್ನು ಚಲಾಯಿಸುವ ಮೂಲಕ ತಮಗೆ ವಿಧಿಸಲಾಗಿದ್ದ ಡೆತ್ ವಾರಂಟನ್ನು ಮೂರು ಬಾರಿ ಮುಂದೂಡುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಲ್ಲಿ ಒಬ್ಬನಾಗಿರುವ ಮುಖೇಶ್ ಸಿಂಗ್ ಪ್ರಕರಣ ನಡೆದ ಸಂದರ್ಭದಲ್ಲಿ ತಾನು ದೆಹಲಿಯಲ್ಲಿ ಇರಲೇ ಇಲ್ಲ ಎಂಬ ಅಂಶವನ್ನು ಉಲ್ಲೇಖಿಸಿ ದೆಹಲಿ ನ್ಯಾಯಾಲಯದಲ್ಲಿ ಮಂಗಳವಾರದಂದು ಹೊಸ ದೂರನ್ನು ಸಲ್ಲಿಸಿದ್ದಾನೆ. ಮತ್ತು ಉಳಿದ ಮೂವರು ಅಪರಾಧಿಗಳು ತಮ್ಮ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.