ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲೂಕಿನ ಮಾಜಾಳಿಯ ತೀಳ್ ಮಾತಿ ಬೀಚ್ ಪ್ರವಾಸೋದ್ಯಮ ಪಟ್ಟಿಗೆ ಸೇರುವ ಭಾಗ್ಯದಿಂದ ದೂರವೇ ಉಳಿದಿದೆ. ಬೀಚ್ ತಲುಪಲು ರಸ್ತೆ ಹಾಗೂ ತೂಗು ಸೇತುವೆ ಕಾಮಗಾರಿಗೆ ಕಾಲ ಕೂಡಿಬರುತ್ತಿಲ್ಲ. ಐದು ವರ್ಷಗಳ ಹಿಂದೆ ಈ ತೀರಕ್ಕೆ ಸಂಪರ್ಕ ಕಲ್ಪಿಸಲು ಯೋಜಿಸಿದ್ದ ತೂಗು ಸೇತುವೆಯ ಕಾಮಗಾರಿ ಇನ್ನೂ ಆರಂಭವಾಗದೆ ನೆನೆಗುದಿಗೆ ಬಿದ್ದಿದ್ದು, ಇದು ಪ್ರವಾಸೋದ್ಯಮಕ್ಕೂ ಹಿನ್ನಡೆಯಾದಂತಾಗಿದೆ.
ತೀಳ್‌ಮಾತಿ ಕಡಲತೀರಕ್ಕೆ ಮಾಜಾಳಿಯಿಂದ ಗುಡ್ಡ ಹತ್ತಿ ಸುಮಾರು ಅರ್ಧ ಕಿಲೋ ಮೀಟರ್ ನಡೆದು ಸಾಗಬೇಕು. ಈ ನಿಟ್ಟಿನಲ್ಲಿ ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ 2014ರಲ್ಲಿ ಕಡಲತೀರಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದರು. ಸುಮಾರು 5 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿ, ಪ್ರವಾಸಿಗರು ಸುಂದರ ಕಡಲತೀರಕ್ಕೆ ತೂಗು ಸೇತುವೆಯಲ್ಲಿ ಸಾಗಿ ಎಂಜಾಯ್ ಮಾಡಿಕೊಂಡು ವಾಪಸ್ ಬರುವ ಅವಕಾಶ ಮಾಡಿಕೊಡಲು ಯೋಜಿಸಲಾಗಿತ್ತು. ಇನ್ನೇನು ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಹಣ ಮಂಜೂರಾಗಿ ಐದು ವರ್ಷಗಳೇ ಕಳೆದರೂ ಇಂದಿಗೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದ ಅನುದಾನ ಸಹ ವಾಪಾಸ್ ಹೋಗಿದ್ದು, ವಿಶಿಷ್ಟ ಕಡಲತೀರ ಅಭಿವೃದ್ಧಿಯಾಗದೇ ಉಳಿಯುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ : ತೀಳ್‌ಮಾತಿ ಕಡಲತೀರದಲ್ಲಿ ಸಾಕಷ್ಟು ಚಲನಚಿತ್ರಗಳ ಶೂಟಿಂಗ್ ಸಹ ನಡೆದಿದ್ದು, ನಾನಾ ಭಾಗದಿಂದ ಪ್ರವಾಸಿಗರು ಕಡಲತೀರದತ್ತ ಬರುತ್ತಾರೆ. ಆದರೆ, ಸರಿಯಾದ ರಸ್ತೆ ಇಲ್ಲದ ಕಾರಣ ತೂಗು ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹಣ ವಾಪಸ್ ಹೋಗಿದೆ. ಅನೇಕ ಬಾರಿ ಕಾಮಗಾರಿಗಳಿಗೆ ಕೆಲಸ ಮಾಡಿದರೂ ಹಣ ಬಿಡುಗಡೆ ಆಗಿಲ್ಲ ಎನ್ನುತ್ತಾರೆ. ಆದರೆ, ಇಲ್ಲಿ ಹಣ ಬಿಡುಗಡೆಯಾದರೂ ಕೆಲಸ ಕೈಗೆತ್ತಿಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಇಂದಿಗೂ ಕೆಲಸ ಪ್ರಾರಂಭವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ತೀಳ್‌ಮಾತಿಗೆ ತೆರಳುವ ಮಾರ್ಗ ಬಂದರು ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಾದು ಹೋಗಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದ್ದು, ಸೇತುವೆ ನಿರ್ಮಾಣಕ್ಕೆ ಪುನಃ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.
ಹೊಸದಾಗಿ 1.20 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ. ನೆರೆಯ ಗೋವಾ ರಾಜ್ಯಕ್ಕಿಂತ ಕಾರವಾರ ಉತ್ತಮ ಕಡಲತೀರಗಳನ್ನು ಹೊಂದಿದ್ದರೂ ಅಭಿವೃದ್ಧಿ ಇಲ್ಲದೇ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವಂತಾಗಿದ್ದು, ಆದಷ್ಟು ಬೇಗ ತೀಳ್‌ಮಾತಿ ಕಡಲತೀರವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ತೀಳ್‌ಮಾತಿ ಕಡಲತೀರಕ್ಕೆ ಚಾರಣದ ರೂಪದಲ್ಲಿ ಹೋಗ ಬೇಕಾಗಿರುವುದರಿಂದ ದಾರಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಕಾರಣ ತೂಗುಸೇತುವೆ ಯೋಜನೆ ರೂಪಿಸಲಾಗಿತ್ತು. ಆದರೆ, ದಾರಿಗೆ ಮಧ್ಯದಲ್ಲಿ ಅರಣ್ಯ ಇಲಾಖೆ, ಬಂದರು ಇಲಾಖೆ ಭೂಮಿ ಇರುವ ಕಾರಣ ಆ ಇಲಾಖೆಗಳ ಅನುಮತಿ ಅಗತ್ಯವಿತ್ತು. ಹೀಗಾಗಿ ಕಳೆದ ಆರ್ಥಿಕ ವರ್ಷದಲ್ಲಿ ಹಣ ವಾಪಸ್ಸಾಗುವಂತಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದ್ದು, ಸರ್ಕಾರದಿಂದ ಅನುಮೋದನೆ ಬಂದ ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ.
– ಡಾ| ಕೆ. ಹರೀಶಕುಮಾರ್, ಜಿಲ್ಲಾಧಿಕಾರಿ